ADVERTISEMENT

ಮನುಷ್ಯನ ದುರಾಸೆಗೆ ಪರಿಸರ ನಾಶ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 7:20 IST
Last Updated 19 ಸೆಪ್ಟೆಂಬರ್ 2017, 7:20 IST

ಗೌರಿಬಿದನೂರು: ಅರಣ್ಯ ನಾಶದಿಂದ ಪ್ರಾಣಿ ಸಂಕುಲನಾಶ, ಹವಾಮಾನ ವೈಪರೀತ್ಯ, ಬರಗಾಲ ಜಲ ಮೂಲಗಳ ನಾಶವಾಗಿ ವಿವಿಧ ಕಾಯಿಲೆಗಳ ತವರಾಗಿ ಮಾನವ ಹಾಗೂ ಪ್ರಾಣಿ ಸಂಕುಲಗಳ ಬದುಕು ದುರ್ಬರವಾಗುತ್ತಿದೆ ಎಂದು ಜಲತಜ್ಞ ಕೆ. ನಾರಾಯಣಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ಕಲ್ಲಂತರಾಯನ ಬೆಟ್ಟದಲ್ಲಿ ಪರಿಸರ ಸ್ನೇಹಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಾಕೃತಿಕ ಅಸಮತೋಲನಕ್ಕೆ ಮಾನವನ ದುರಾಸೆಯೇ ಮೂಲ ಕಾರಣವಾಗಿದೆ. ಹಣ ಆಸೆಗೆ ಒಳಗಾಗಿರುವ ಮಾನವ ಗಣಿಗಾರಿಕೆ, ಮರಳು ದಂದೆ, ನೀರಿನ ಮಾರಾಟ, ಅರಣ್ಯ ಲೂಟಿ, ಪ್ರಾಣಿ ಸಂಕುಲಗಳ ಬೇಟೆ ಪ್ರಕೃತಿ ವಿನಾಶಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರಲ್ಲೂ ಪ್ರಕೃತಿಯನ್ನು ಪ್ರೀತಿಸುವ, ರಕ್ಷಿಸುವ, ಉಳಿಸಿ ಬೆಳೆಸುವ ಮನೋಭಾವ ಮೂಡಿ ಕಾರ್ಯ ಪ್ರವೃತ್ತರಾಗಬೇಕಾಗಿದೆ. ಅರಣ್ಯವನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆ ಹಿತವಾದ ಬದುಕಿನ ವಾತಾವರಣವನ್ನು ಉಳಿಸುವ ದಿಕ್ಕಿನಲ್ಲಿ ಪ್ರತಿಯೊಬ್ಬರ ಪಾತ್ರ ಅತ್ಯಗತ್ಯ ಎಂದರು.

ADVERTISEMENT

ಪರಿಸರ ಸ್ನೇಹಿ ಬಗಳದ ಮುಖಂಡ ಶ್ರೀಧರ್ ಮಾತನಾಡಿ, ‘ಪರಿಸರದ ಬಳಗದ ಸ್ನೇಹಿತರೆಲ್ಲರೂ ಒಟ್ಟಿಗೆ ಸೇರಿ ಅರಣ್ಯ ಪ್ರದೇಶಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ನದಿ, ನಾಲೆಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಅಳಿಲು ಸೇವೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಕಲ್ಲಂತರಾಯನ ಗುಟ್ಟೆಯಲ್ಲಿ 150ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಿ ಸಂರಕ್ಷಣೆ ಮಾಡಲಾಯಿತು.

ಚಿಕ್ಕಕುರುಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಬಾಬು,ಕಲ್ಲೂಡಿ ಗ್ರಾಮದ ಮುಖಂಡರಾದ ನಂಜುಂಡೇಗೌಡ, ಆನಂದ್, ವಿ.ಡಿ.ಗಣೇಶ್, ಕ್ಯಾಪ್ಟನ್‌ ಸತೀಶ್, ಪರಿಸರ ಸ್ನೇಹಿ ಬಳಗದ ಅರುಣ್ ಕುಮಾರ್, ಮೋಹನ್, ಎಚ್.ಟಿ. ಶ್ರೀಧರ್, ಹರೀಶ್, ಶ್ಯಾಮ್, ಪ್ರಸನ್ನ ಕುಮಾರ್, ಮಹಮದ್ ರಫೀಕ್, ಬಲರಾಮ್, ರಮೇಶ್, ಜಿಲಾನ್, ಪುನೀತ್, ಶುಭಾಕರ, ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.