ADVERTISEMENT

ಮಹಿಳೆಯರು ಶಿಕ್ಷಿತರಾಗಿ ಹಕ್ಕನ್ನು ಪಡೆದುಕೊಳ್ಳಿ

‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಎ.ಎಸ್.ಬೆಳ್ಳುಂಕೆ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:42 IST
Last Updated 9 ಮಾರ್ಚ್ 2017, 7:42 IST
ಚಿಕ್ಕಬಳ್ಳಾಪುರ: ‘ಶಿಕ್ಷಣದಿಂದ ಅರಿವು ಮೂಡುವ ಜತೆಗೆ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಶಕ್ತಿ ಬರುತ್ತದೆ. ಆದ್ದರಿಂದ ಮಹಿಳೆಯರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎ.ಎಸ್.ಬೆಳ್ಳುಂಕೆ ಹೇಳಿದರು. 
 
‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಆಯೋಜಿಸಿದ್ದ  ‘ಸ್ವಚ್ಛ ಭಾರತ್ ಅಭಿಯಾನದ ಜಿಲ್ಲಾ ಮಟ್ಟದ ಸ್ವಚ್ಛ ಶಕ್ತಿ ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
 
‘ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಕೂಡ ಪುರುಷರಿಗೆ ಸರಿಸಮನಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ವಿವಿಧ ಕ್ಷೇತ್ರಗಳ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಇದು ಆಶಾದಾಯಕ ಬೆಳವಣಿಗೆ. ಮಹಿಳೆಯರು ಸಬಲರಾಗಲು, ಸಮಾಜದ ಮುಖ್ಯವಾಹಿನಿಗೆ ಬರಲು ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.  
 
‘ದಿನೇ ದಿನೇ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಕುಸಿಯುತ್ತಿರುವುದು ಆತಂಕದ ವಿಚಾರ. ಹೀಗಾಗಿ ಮಹಿಳೆಯರು ಭ್ರೂಣ ಹತ್ಯೆ ತಡೆಗಟ್ಟಲು ಒತ್ತು ಕೊಡಬೇಕು. ವಿವಾಹಿತ ಮಹಿಳೆಯರು ಆಸ್ತಿ ಹಕ್ಕು ಪಡೆದುಕೊಳ್ಳಲು ಮುಂದಾಗಬೇಕು. ಮಹಿಳೆಯ ಪ್ರಗತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.
 
ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಮಾತನಾಡಿ, ‘ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಮಹಿಳೆಗೆ ರಕ್ಷಣೆ ಕೊಡುವ ಉದ್ದೇಶದಿಂದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲಾಗಿದೆ. ಆದ್ದರಿಂದ ಮಹಿಳೆಯರು ಧೈರ್ಯದಿಂದ ಮುನ್ನುಗ್ಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ದೌರ್ಜನ್ಯಕ್ಕೆ ಒಳಗಾದವರು, ಅಶಕ್ತ, ಅಸಹಾಯಕ ಮಹಿಳೆಯರ ಜೀವನ ಸುಧಾರಿಸಲು ಇತರರು ಸಹಕರಿಸಬೇಕು’ ಎಂದರು. 
 
‘ಕುಟುಂಬ ವ್ಯವಸ್ಥೆ ಭಾರತ ದೇಶಕ್ಕೆ ಒಂದು ಕೊಡುಗೆ. ಕುಟುಂಬವನ್ನು ಮಹಿಳೆ ಹೊರತು ಮತ್ತೊಬ್ಬರೂ ನಿರ್ವಹಿಸಲು ಸಾಧ್ಯವಿಲ್ಲ.  ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೂ ಆಕೆಯ ಮೇಲಿನ ದೌರ್ಜನ್ಯ ಮಾತ್ರ ನಿಂತಿಲ್ಲ. ಇದನ್ನು ತಡೆಗಟ್ಟಬೇಕಾದರೆ ಪ್ರತಿಯೊಬ್ಬ ಮಹಿಳೆ ಮತ್ತೊಬ್ಬ  ಮಹಿಳೆಗೆ ಸಹಾಯ ಹಸ್ತ ನೀಡಿ, ಧೈರ್ಯ ನೀಡಬೇಕು’ ಎಂದು ಪ್ರತಿಪಾದಿಸಿದರು. 
 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ‘ಮಹಿಳಾ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿ ದಿನದ ಬದುಕಿನ ಭಾಗವಾಗಬೇಕು. ಅನೇಕ ಪಾತ್ರದಲ್ಲಿ ಜವಾಬ್ದಾರಿ ನಿರ್ವಹಿಸುವ ಮಹಿಳೆಯ ರಕ್ಷಣೆಗೆ ಸಮಾಜದಲ್ಲಿ ಒತ್ತು ನೀಡಬೇಕು. ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು’ ಎಂದು ಹೇಳಿದರು.
 
ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್.ಶೋಭಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಅನುಪಮಾ, 2ನೇ ಹೆಚ್ಚುವರಿ ನ್ಯಾಯಾಧೀಶೆ ಶೈಲಾ ಅವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕ್ರೀಡಾ ಸ್ಪರ್ಧೆ ವಿಜೇತರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಮುನಿರಾಜು  ಹಾಜರಿದ್ದರು.

* ಮಹಿಳೆಯರು ದೂರು ಕೊಡಲು ಠಾಣೆಗೆ ಹೋದಾಗ ಆಮಿಷಗಳಿಗೆ ಒಳಗಾಗಿ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಹಕ್ಕುಗಳು ವಿಫಲವಾಗುತ್ತಿವೆ. ಅನ್ಯಾಯದ ಬಗ್ಗೆ ಧೈರ್ಯವಾಗಿ ದೂರು ಕೊಡಬೇಕು.
ಎ.ಎಸ್.ಬೆಳ್ಳುಂಕೆ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.