ADVERTISEMENT

ಮುರುಗಮಲೆಯಲ್ಲಿ ಗಂಧೋತ್ಸವದ ಕಲರವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 8:44 IST
Last Updated 2 ಡಿಸೆಂಬರ್ 2017, 8:44 IST

ಚಿಂತಾಮಣಿ: ಮುಸ್ಲಿಮರು ಪ್ರಮುಖ ಯಾತ್ರಾ ಸ್ಥಳ ತಾಲ್ಲೂಕಿನ ಮುರುಗಮಲೆ ಗ್ರಾಮದ ಹಜರತ್‌ ಅಮ್ಮಾಜಾನ್‌ ಮತ್ತು ಬಾವಾಜಾನ್‌ ಅವರ ಗಂಧೋತ್ಸವ ಮತ್ತು ಉರುಸ್‌ ಡಿ.2 ಮತ್ತು 3 ರಂದು ನಡೆಯಲಿದೆ.

ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯ ಕೇಂದ್ರವಾದ ಮುರುಗಮಲೆ ನಗರದಿಂದ10 ಕಿ.ಮೀ ದೂರದಲ್ಲಿದೆ. ಮುರುಗಮಲ್ಲ ದ ಹಜರತ್‌ ಫಕೀರ್‌ಷಾ ದರ್ಗಾದ ಉರುಸ್‌ನಲ್ಲಿ ದೇಶದ ನಾನಾ ಭಾಗಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವರು. ಇಲ್ಲಿನ ದರ್ಗಾಗೆ ನೂರಾರು ವರ್ಷಗಳ ಇತಿಹಾಸ ಇದೆ. ಗುರುಗಳಾದ ಅಮ್ಮಾಜಾನ್‌ ಮತ್ತು ಬಾವಾಜಾನ್‌ ಅವರ ಸಮಾಧಿ ಸ್ಥಳವೇ ಇಂದು ಲಕ್ಷಾಂತರ ಮಂದಿಯ ನಮನದ ಕ್ಷೇತ್ರವಾಗಿದೆ. ಗ್ರಾಮದಲ್ಲಿ ಹಿಂದೂಗಳ ಮುಕ್ತೀಶ್ವರನ ದೇವಾಲಯವಿದೆ. ಹೀಗಾಗಿ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯದ ಗ್ರಾಮ ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ಪ್ರವಾದಿ ಮಹಮದ್‌ ಅವರ ವಂಶಸ್ಥರಾಗಿದ್ದ ಹಜರತ್‌ ಸೈಯ್ಯದ್‌ ಬೀಬಿ ಅಮ್ಮಾಜಾನ್‌ ಮತ್ತು ಬಾವಾಜಾನ್‌ ಅವರು ಬೀದರ್‌ನಿಂದ ಧರ್ಮ ಪ್ರಚಾರಕರಾಗಿ 52 ಜನರ ತಂಡದೊಂದಿಗೆ ಬಂದು ನಂತರ ಇಲ್ಲಿ ನೆಲೆಸಿದರು ಎಂದು ದರ್ಗಾದ ಮೌಲ್ವಿಗಳು ತಿಳಿಸುವರು.

ADVERTISEMENT

ಧಾರ್ಮಿಕ ಪುರುಷರಿಗೆ ಭಕ್ತಿ, ಗೌರವ ಸಮರ್ಪಿಸಲು ಪ್ರತಿವರ್ಷ ಈದ್‌ ಮಿಲಾದ್‌ ದಿನದಂದು ಗ್ರಾಮಸ್ಥರು ಹಾಗೂ ಮರು ದಿನ ವಕ್ಫ್‌ಬೋರ್ಡ್‌ನಿಂದ ಉರುಸ್‌ ಆಚರಿಸಲಾಗುತ್ತದೆ. ಡಿ.2 ರಂದು ಮಸೀದಿಯಿಂದ ಗಂಧೋತ್ಸವ ಮೆರವಣಿಗೆ ಪ್ರಾರಂಭವಾಗುತ್ತದೆ. ಗಂಧದದ ಅಭಿಷೇಕದ ನಂತರ ನಡೆಯುವುದು ಕವ್ವಾಲಿ ಕಾರ್ಯಕ್ರಮ ಅತ್ಯಂತ ಜನಪ್ರಿಯ. ಮುಂಬೈ ತಂಡ ಕವ್ವಾಲಿ ನಡೆಸಿಕೊಡುತ್ತದೆ. 3 ರಂದು ವಕ್ಫಬೊರ್ಡ್‌ನಿಂದ ಗಂಧೋತ್ಸವ ನಡೆಯುತ್ತದೆ.

‘ಹಿಂದೂ ಮತ್ತು ಮುಸ್ಲಿಮರು ಸೋದರ ಭಾವನೆಯಿಂದ ಪವಿತ್ರ ಗಂಧ ಸ್ವೀಕರಿಸುವರು. ಗ್ರಾಮದಲ್ಲಿ ಮುಸ್ಲಿಮರು ಸಣ್ಣ ಪ್ರಮಾಣದಲ್ಲಿ ಗಂಧೋತ್ಸವ ನಡೆಸುತ್ತಿದ್ದರು. 50 ವರ್ಷಗಳ ಹಿಂದೆ ಪಟೇಲ್‌ ಅಶ್ವತ್ಥನಾರಾಯಣರೆಡ್ಡಿ, ವಹಾಬ್‌, ಮುಜಾವರ್‌, ಸಾಬ್‌ಜಾನ್‌ ಸೇರಿ ಉರುಸ್‌ ವಿಜೃಂಭಣೆಯಿಂದ ಆಚರಿಸಲು ಪ್ರಾರಂಭ ಮಾಡಿದೆವು’ ಎಂದು ಗ್ರಾಮದ ಮುಖಂಡರು ತಿಳಿಸಿದರು.

‘ಸಮಾಧಿಯಾಗಿರುವ ಗುರುಗಳ ಮೂಲಕ ತಮ್ಮ ಬೇಡಿಕೆಗಳು ಅಲ್ಲಾಹುವಿಗೆ ಮುಟ್ಟುತ್ತವೆ ಎಂಬುದು ಜನರ ನಂಬಿಕೆಯಾಗಿದೆ. ದೆವ್ವ, ಭೂತ, ಮಾಟ ಮಂತ್ರ ಮಾನಸಿಕ ಕಾಯಿಲೆ ಇಲ್ಲಿ ವಾಸಿಯಾಗುತ್ತವೆ ಎಂದು ನಂಬಿದ್ದಾರೆ’ ಎಂದು ದರ್ಗದ ಉಸ್ತುವಾರಿ ಬಾಷಾಸಾಬ್‌ ತಿಳಿಸಿದರು.

ಪ್ರತಿ ಅಮಾವಾಸ್ಯೆ ದಿನ ಸಾವಿರಾರು ಜನ ಮಾನಸಿಕ ಅಸ್ವಸ್ಥರು, ಕಾಯಿಲೆಗಳಿಂದ ಬಳಲುತ್ತಿರುವವರು ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವರು. ವಕ್ಫ್‌ ಮಂಡಳಿಯಿಂದ ₹ 2 ಕೋಟಿ ವೆಚ್ಚದಲ್ಲಿ ಮುರುಗಮಲೆಯಲ್ಲಿ ಮಾನಸಿಕ ಕಾಯಿಲೆಗಳ ಆಸ್ಪತ್ರೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಬೇರೆ ಬೇರೆ ಕಾರಣಗಳಿಂದ ಹರಕೆ ಮಾಡಿಕೊಂಡಿದ್ದವರು ಹೊಸಬಟ್ಟೆಗಳನ್ನು ತಂದು ಸಮಾಧಿಗಳಿಗೆ ಹೊದಿಸುತ್ತಾರೆ. ಮಲ್ಲಿಗೆ ಹಾಗೂ ಗುಲಾಬಿ ಹೂಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ’ ಎಂದು ದರ್ಗಾದ ಮುಜಾವರ್‌ ವಿವರಿಸುವರು.

ಉರುಸ್‌ಗೆ ಸಿದ್ಧತೆಗಳು ಸಾಗುತ್ತಿವೆ. ವಸತಿ ವ್ಯವಸ್ಥೆ, ಕುಡಿಯುವ ನೀರು, ಆರೋಗ್ಯ ಶಿಬಿರ, ಆಂಬುಲೆನ್ಸ್‌, ಆಗ್ನಿಶಾಮಕದಳದ ವಾಹನಗಳು ಸ್ಥಳದಲ್ಲಿರುತ್ತವೆ. ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಿಂದಲೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡುತ್ತದೆ. ಬಲವಾದ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗುತ್ತದೆ. ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷ ಬಿ.ಎಸ್‌.ರಫೀವುಲ್ಲಾ ಇತ್ತೀಚೆಗೆ ಭೇಟಿ ನೀಡಿ ಉರುಸ್‌ ಗಾಗಿ ಮಾಡಿರುವ ವ್ಯವಸ್ಥೆ ಪರಿಶೀಲಿಸಿದರು.

* * 

ಸ್ವಚ್ಚತೆ, ಕುಡಿಯುವ ನೀರು, ಶೌಚಾಲಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಿಂದೂ–ಮುಸ್ಲಿಮರು ಸಹಕಾರದಿಂದ ಸಂಭ್ರಮ–ಸಡಗರದಿಂದ ಗಂಧೋತ್ಸವ ಮತ್ತು ಉರುಸ್‌ ಆಚರಿಸುವರು.
ಬಿ.ಎಸ್‌.ರಫೀವುಲ್ಲಾ, ರಾಜ್ಯ ವಕ್ಫ್‌ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.