ADVERTISEMENT

ಮೂರನೇ ಹಂತದ ಶುದ್ಧೀಕರಣಕ್ಕೆ ಒತ್ತಡ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 8:48 IST
Last Updated 24 ಡಿಸೆಂಬರ್ 2017, 8:48 IST
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.   

ಚಿಕ್ಕಬಳ್ಳಾಪುರ: ‘ಹೆಬ್ಬಾಳ, ನಾಗವಾರ ಕೆರೆಗಳ ತ್ಯಾಜ್ಯ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಿ ಜಿಲ್ಲೆಯ ಕೆರೆಗಳಿಗೆ ಹರಿಸಬೇಕು ಎಂದು ಈ ಭಾಗದ ಎಲ್ಲಾ ಶಾಸಕರು, ಸಂಸದರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿ, ಒತ್ತಾಯಿಸಿದ್ದೇವೆ. ನಮ್ಮ ಈ ಬೇಡಿಕೆಗೆ ಮುಖ್ಯಮಂತ್ರಿ ಅವರು ಒಪ್ಪುತ್ತಾರೆ ಎನ್ನುವ ವಿಶ್ವಾಸವಿದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

‘ರೈತ ದಿನಾಚರಣೆ’ ಅಂಗವಾಗಿ ಕೃಷಿ ಇಲಾಖೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ನಂದಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ‘ಯುವ ಕೃಷಿ ಮೇಳ 2017’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಬ್ಬ ಮುಖ್ಯಮಂತ್ರಿ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದರು. ಮತ್ತೊಬ್ಬರು ರೈತರ ಮಕ್ಕಳು ಎಂದು ಹೇಳಿಕೊಂಡರು. ಎಲ್ಲರೂ ರೈತರ ಪರವಾಗಿ ಮಾತನಾಡುತ್ತಾರೆ. ತಪ್ಪಲ್ಲ. ಆದರೆ ನಮಗೆ ಅಧಿಕಾರವಿದ್ದ ಸಂದರ್ಭದಲ್ಲಿ ಈ ಭಾಗದ ರೈತರಿಗೆ ಒಂದೇ ಒಂದು ನೀರಾವರಿ ಯೋಜನೆ ಕೊಡಲಿಲ್ಲವಲ್ಲಾ? ನಮ್ಮ ಸರ್ಕಾರದಲ್ಲಿ ಮೊದಲ ಬಾರಿ ಈ ಭಾಗಕ್ಕೆ ಎರಡು ನೀರಾವರಿ ಯೋಜನೆ ನೀಡಲಾಗಿದೆ. ಬರದಿಂದ ತತ್ತರಿಸುವ ಈ ಭಾಗ ಎತ್ತಿನಹೊಳೆ ಮತ್ತು ಏತ ನೀರಾವರಿ ಯೋಜನೆಗಳಿಂದ ಮಲೆನಾಡು ಆಗಲಿದೆ’ ಎಂದು ಅಭಿಪ್ರಾಯಪಟ್ಟರು’ ಎಂದು ಹೇಳಿದರು

ADVERTISEMENT

‘ರೈತಪರ ಬದ್ಧತೆ ಕಾರ್ಯಕ್ರಮಗಳ ಮೂಲಕ ಕೊಡಬೇಕೆ ವಿನಾ ಕೇವಲ ವೇದಿಕೆ ಮೇಲೆ ನಾನು ರೈತಪರ ಎಂದು ಭಾಷಣ ಮಾಡಿದರೆ ಹೊಟ್ಟೆ ತುಂಬುವುದಿಲ್ಲ. ಇವತ್ತು ರಾಜ್ಯದಲ್ಲಿ ಅನೇಕ ಸರ್ಕಾರಗಳು ಬಂದಿವೆ. ಬಯಲು ಸೀಮೆ ಜಿಲ್ಲೆಗಳ ನೀರಿನ ಸಂಕಷ್ಟ ಎಲ್ಲರಿಗೂ ಅರ್ಥವಾಗಿದೆ. ರೈತ ಹೋರಾಟಗಾರರು 15 ವರ್ಷಗಳಿಂದ ಬೀದಿಗೆ ಇಳಿದಿದ್ದಾರೆ. ಆದರೆ ಯಾವ ಸರ್ಕಾರ ಕೂಡ ನಾವು ಮಾಡಿದ ಕೆಲಸ ಮಾಡಿಲ್ಲ’ ಎಂದು ತಿಳಿಸಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಿ.ಕೆ.ಮಂಜುನಾಥಗೌಡ ಮಾತನಾಡಿ, ‘ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕೃಷಿಕ ಸಮಾಜದ ಕಟ್ಟಡ ನಿರ್ಮಿಸಲು ₹ 25 ಲಕ್ಷ, ನಿವೇಶನ ಖರೀದಿಸಲು ₹ 10 ಅನುದಾನ ನೀಡಲಾಗುತ್ತಿದೆ. ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ಕೃಷಿಕ ಸಮಾಜದ ಕಟ್ಟಡ ನಿರ್ಮಿಸಲು ನಿವೇಶನದ ಅಗತ್ಯವಿದೆ. ಶಾಸಕರು ನಿವೇಶನ ಒದಗಿಸಿ ಕೊಡಲು ಸಹಾಯ ಮಾಡಬೇಕು’ ಎಂದು ಹೇಳಿದರು.

ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್ ಮಾತನಾಡಿ, ‘ಪ್ರಧಾನಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ದೇಶ ಅವರಿಗೆ ಗೌರವ ಸಲ್ಲಿಸುತ್ತಿದೆ. ಕೇವಲ ಆರು ತಿಂಗಳು ಮಾತ್ರ ದೇಶದ ಪ್ರಧಾನ ಮಂತ್ರಿಯಾಗಿದ್ದ ಅವರು ತಮ್ಮ ಅಲ್ಪ ಅವಧಿಯಲ್ಲೇ ರೈತರ ಬದುಕನ್ನು ಹಸನುಗೊಳಿಸಲು ಕೈಗೊಂಡ ಕ್ರಮಗಳು ಇಂದಿಗೂ ಚಿರಸ್ಥಾಯಿಯಾಗಿವೆ’ ಎಂದು ತಿಳಿಸಿದರು.

‘ಇವತ್ತು ಕೃಷಿ ಇಲಾಖೆ ವತಿಯಿಂದ ರೈತರ ಆರ್ಥಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೃಷಿ ಭಾಗ್ಯ ಯೋಜನೆಯಡಿ 1.86 ಲಕ್ಷ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ. ಜತೆಗೆ ಸಾವಯವ, ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸರ್ಕಾರ ಜನವರಿ 19ರಿಂದ ಮೂರು ದಿನಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾವಯವ ಮತ್ತು ಸಿರಿಧಾನ್ಯಗಳ ಮೇಳ ಹಮ್ಮಿಕೊಳ್ಳುತ್ತಿದೆ. ರೈತರು ಅದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಾಸಕರು ಕೃಷಿ, ರೇಷ್ಮೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಕೃಷಿ ವಸ್ತು ಪ್ರದರ್ಶನ’ವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ. ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ. ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ಎಚ್.ವಿ. ಗೋವಿಂದಸ್ವಾಮಿ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ವರಲಕ್ಷ್ಮೀ, ಉಪಕಾರ್ಯದರ್ಶಿ ಸಿ.ಸಿದ್ದರಾಮಯ್ಯ, ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್. ನಾರಾಯಣಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೆಶಕ ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆ ಉಪ ನಿರ್ದೆಶಕ ರಘು ಉಪಸ್ಥಿತರಿದ್ದರು.

ರೈತರು ಅರ್ಥ ಮಾಡಿಕೊಳ್ಳಬೇಕು

‘ಹೆಬ್ಬಾಳ, ನಾಗವಾರ ಕೆರೆಗಳ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಬೇಕು ಎನ್ನುವ ವಿಚಾರದಲ್ಲಿ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಹೆಚ್ಚು ಅನುದಾನ ಬೇಕಾಗುತ್ತದೆ. ಆದರೂ ಪರವಾಗಿಲ್ಲ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ’ ಎಂದು ತಿಳಿಸಿದರು.

‘ಬೆಂಗಳೂರಿನಿಂದ ತರುವ ಸಂಸ್ಕರಿಸಿದ ನೀರು ಬಹಳ ಅಪಾಯಕಾರಿ. ಅದರಿಂದ ಕ್ಯಾನ್ಸರ್ ಬರುತ್ತೆ ಎಂದೆಲ್ಲ ಇವತ್ತು ವದಂತಿ ಹಬ್ಬಿಸಲಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರ ನಗರದ ಕೆಳಗಿನ ತೋಟ ಪ್ರದೇಶದಲ್ಲಿ ದಶಕಗಳಿಂದ ರೈತರು ಒಳಚರಂಡಿ ನೀರು ಬಳಸಿ ಬೆಳೆ ಬೆಳೆಯುತ್ತಿದ್ದಾರೆ. ಆದರೂ ಅವರು ಆರೋಗ್ಯವಾಗಿದ್ದಾರೆ. ಆದ್ದರಿಂದ ಜಿಲ್ಲೆಯ ಕೆರೆಗಳನ್ನು ತುಂಬಿ ಕುಸಿದಿರುವ ಅಂತರ್ಜಲ ವೃದ್ಧಿಸುವ ಕಾರ್ಯಕ್ರಮ ಯೋಗ್ಯವಾದ್ದದ್ದೇ ಅಲ್ಲವೇ ಎನ್ನುವುದು ರೈತರು ಅರ್ಥ ಮಾಡಿಕೊಳ್ಳಬೇಕು’ ಎಂದು ಶಾಸಕ  ಡಾ. ಕೆ. ಸುಧಾಕರ್‌ ಹೇಳಿದರು.

‘ಜನರು, ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ದಯವಿಟ್ಟು ಅರ್ಥ ಮಾಡಿಕೊಳ್ಳಿ. ಬೇರೆ ಕಾರಣಗಳಿಗೆ ಸಂದೇಹಗಳಿದ್ದರೆ ನಾನಲ್ಲ ಯಾವ ವಿಜ್ಞಾನಿಗಳ ಮಾತನ್ನೂ ನೀವು ಕೇಳುವುದಿಲ್ಲ. ಕೇಳಬಾರದು. ತೀರ್ಮಾನಿಸಿದವರು ಏನು ಮಾಡಿದರೂ ಕೇಳುವುದಿಲ್ಲ’ ಎಂದರು.

* *

ಕೃಷಿ ಕ್ಷೇತ್ರದಲ್ಲಿ ಆಗಿರುವ ಹೊಸ ಆವಿಷ್ಕಾರಗಳ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು
ಡಾ.ಕೆ.ಸುಧಾಕರ್
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.