ADVERTISEMENT

ರಂಗಮಂದಿರ ಕಾಮಗಾರಿ ಆರಂಭ

ಈರಪ್ಪ ಹಳಕಟ್ಟಿ
Published 8 ಮೇ 2017, 7:05 IST
Last Updated 8 ಮೇ 2017, 7:05 IST
ರಂಗಮಂದಿರ ಕಾಮಗಾರಿ ಆರಂಭ
ರಂಗಮಂದಿರ ಕಾಮಗಾರಿ ಆರಂಭ   
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಕ್ಷಣ, ಸಾಹಿತ್ಯ, ಜನಪದ, ಸಂಸ್ಕೃತಿಯರಕ್ಷಣೆ ಮತ್ತು ಪೋಷಣೆಯ ಕೇಂದ್ರವಾಗ ಬೇಕಿರುವ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ರಂಗಮಂದಿರ ನಿರ್ಮಾಣ ಕಾಮಗಾರಿಗೆ ಮೂರು ವರ್ಷಗಳ ಬಳಿಕ ಚಾಲನೆ ದೊರೆತಿದೆ.
 
ಸಂಸದ ವೀರಪ್ಪ ಮೊಯಿಲಿ ಅವರು 2014 ರಲ್ಲಿ ನಗರದ ಬಿ.ಬಿ.ರಸ್ತೆಯ ಲ್ಲಿರುವ ಬಸಪ್ಪ ಛತ್ರದ ಸ್ಥಳದಲ್ಲಿ ₹ 12.5 ಕೋಟಿ ವೆಚ್ಚದ ರಂಗಮಂದಿರ ನಿರ್ಮಾ ಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ‘ವರ್ಷ ಕಳೆಯುವುದರೊಳಗೆ ರಂಗಮಂದಿರ ನಿರ್ಮಾಣಗೊಳ್ಳಲಿದೆ’ ಎಂದು ಆಶಾಭಾವನೆ ಕೂಡ ವ್ಯಕ್ತಪಡಿ ಸಿದ್ದರು. ಆದರೆ ಇಲ್ಲಿಯವರೆಗೂ ಅವರ ಆಶಯ ಈಡೇರಿರಲಿಲ್ಲ.  ಬಸಪ್ಪ ಛತ್ರ ‘ತಿಪ್ಪೆಗುಂಡಿ’ಯಾಗಿತ್ತು.
 
ಜಿಲ್ಲೆಯ ರಂಗ ಚಟುವಟಿಕೆಗೆ ಉತ್ತೇ ಜನ ನೀಡುವ ಉದ್ದೇಶದಿಂದ ಕೈಗೆತ್ತಿಕೊಂಡಿದ್ದ ಯೋಜನೆಗೆ ಗ್ರಹಣ ಹಿಡಿದ್ದದ್ದು ರಂಗಾಸಕ್ತರು, ರಂಗಕರ್ಮಿಗಳು, ಸಾಹಿತಿಗಳಲ್ಲಿ ಬೇಸರ ತಂದಿತ್ತು. ಇದೀಗ ಬಸಪ್ಪ ಛತ್ರದ ಸ್ಥಳದಲ್ಲಿ ಸ್ವಚ್ಛತೆ ಕಾರ್ಯ ಚುರುಕಿನಿಂದ ಸಾಗಿದೆ. ಶೀಘ್ರ  ಕಾಮಗಾರಿ ಆರಂಭಗೊಳ್ಳಲಿದೆ.
 
‘ರಂಗಮಂದಿರ ನಿರ್ಮಾಣಕ್ಕೆ ಕನ್ನಡ ಮತ್ತು ಸಂಸ್ಕತಿ ಇಲಾಖೆ ₹ 4 ಕೋಟಿ ಮತ್ತು ಉಳಿದಂತೆ ಸಂಸದರ ಕ್ಷೇತ್ರಾಭಿವೃದ್ಧಿ ಯೋಜನೆ ಅನುದಾನ ಮತ್ತು ಮುಖ್ಯಮಂತ್ರಿ ನಿಧಿಯಿಂದ ಅನುದಾನ ದೊರೆತಿದೆ. ನಿರ್ಮಾಣ ಕಾಮಗಾರಿ ಹೊಣೆಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ.

ಈಗಾಗಲೇ ₹ 8.50 ಕೋಟಿಯನ್ನು ಮಂಡಳಿಯಲ್ಲಿ ಠೇವಣಿ ಯಾಗಿ ಇಡಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ತಿಳಿಸಿದರು.
 
‘ಮಂಡಳಿ ಈಗಾಗಲೇ ರಾಜ್ಯಮಟ್ಟ ದಲ್ಲಿ ಟೆಂಡರ್‌ ಕರೆದು ಗೋವರ್ಧನ್ ಎಂಬ ಗುತ್ತಿಗೆದಾರರಿಗೆ ಕಾಮಗಾರಿ ನೀಡಿದೆ. ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಅವರು ಕಾರ್ಯಾದೇಶ ನೀಡಿದ್ದಾರೆ. ಇನ್ನೇನು ಕಾಮಗಾರಿ ಆರಂಭಗೊಳ್ಳಬೇಕಿದೆ. ಮುಂದಿನ ವರ್ಷದ ಏಪ್ರಿಲ್ ಹೊತ್ತಿಗೆ ರಂಗಮಂದಿರ ಉದ್ಘಾಟನೆ ಗೊಳ್ಳಲಿದೆ’ ಎಂದು ಹೇಳಿದರು.

‘1,000 ಆಸನಗಳ ಸಾಮರ್ಥ್ಯದ ಒಳಾಂಗಣ ರಂಗಮಂದಿರ, ಸಭಾಂಗಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ, ಮೊಗಸಾಲೆ ಇರಲಿವೆ. ಜತೆಗೆ ಸದ್ಯ ಬಸಪ್ಪ ಛತ್ರದಲ್ಲಿರುವ ಪುಷ್ಕರಣಿಯನ್ನು ನವೀಕರಿಸಿ ಐತಿಹಾಸಿಕ ಸ್ಮಾರಕ ಎಂದು ಉಳಿಸಿಕೊಳ್ಳಲಾಗುತ್ತದೆ. ಈಗಾಗಲೇ ಕಾಮಗಾರಿಗೆ ₹ 1 ಕೋಟಿ ಬಿಡುಗಡೆಯಾಗಿದೆ. ಸದ್ಯ ₹ 3 ಕೋಟಿ ಬಿಡುಗಡೆ ಹಂತದಲ್ಲಿದೆ’ ಎಂದರು.
 
‘ನಗರದ ಹೆಮ್ಮೆಯ ತಾಣವಾಗ ಬೇಕಿದ್ದ ಬಸಪ್ಪ ಛತ್ರ ಪ್ರದೇಶ ಅಸಹ್ಯ ಹುಟ್ಟಿಸುವಷ್ಟರ ಮಟ್ಟಿಗೆ ಗಲೀಜಿನಿಂದ ತುಂಬಿದ್ದು ನೋಡಿ ಬೇಸರವಾಗುತ್ತಿತ್ತು. ಗಿಡಗಂಟಿಗಳು, ಒಡೆದು ಹಾಕಿದ ಹಳೇ ಕಟ್ಟಡಗಳ ಅವಶೇಷಗಳು, ಕಸ–ಮುಸುರೆ, ತ್ಯಾಜ್ಯದಿಂದ ಹಾವು, ಹೆಗ್ಗಣಗಳ ವಾಸಸ್ಥಾನವಾಗಿತ್ತು. ಇದೀಗ ಆ ಗಲೀಜನ್ನು ತೆಗೆದಿದ್ದು ಖುಷಿ ತಂದಿದೆ. ರಂಗಮಂದಿರ ಯಾವಾಗ ನಿರ್ಮಾಣ ವಾಗುವುದೋ ಎಂದು ಎದುರು ನೋಡುತ್ತಿದ್ದೇನೆ’ ಎಂದು ಬಿ.ಬಿ.ರಸ್ತೆ ನಿವಾಸಿ ಅವಿನಾಶ್ ತಿಳಿಸಿದರು
****
ರಂಗಮಂದಿರ ನಿರ್ಮಾಣ ಕಾಮಗಾರಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣ ಗೊಳಿಸುವಂತೆ ಷರತ್ತು ವಿಧಿಸಲಾಗಿದೆ.
ಬಿ.ಎಸ್.ವೆಂಕಟಾಚಲಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.