ADVERTISEMENT

ರಜೆಯ ಮೋಜಿಗೆ ಬಂದವರು ಜಲ ಸಮಾಧಿ

ಶ್ರೀನಿವಾಸ ಸಾಗರ ಜಲಾಶಯದಲ್ಲಿ ಒಂದೇ ಕುಟುಂಬದ ಮೂರು ಮಕ್ಕಳು ಮತ್ತು ಚಾಲಕ ಮುಳುಗಿ ಸಾವು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 9:26 IST
Last Updated 26 ಏಪ್ರಿಲ್ 2018, 9:26 IST
ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿದವರ ಶೋಧ ನಡೆಸಿದ ಮೀನುಗಾರರು
ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿದವರ ಶೋಧ ನಡೆಸಿದ ಮೀನುಗಾರರು   

ಚಿಕ್ಕಬಳ್ಳಾಪುರ: ಮಕ್ಕಳ ಬೇಸಿಗೆ ರಜೆಯ ಪ್ರಯುಕ್ತ ಜಿಲ್ಲೆಯ ಪ್ರೇಕ್ಷಣೀಯ ಸ್ಥಳ ನೋಡಲು ಬಂದಿದ್ದ ಕುಟುಂಬದ ಮೂವರು ಮಕ್ಕಳು ಸೇರಿ ನಾಲ್ಕು ಜನ ಜಲ ಸಮಾಧಿಯಾಗಿದ್ದಾರೆ.

ಕುಟುಂಬ ಸಮೇತ ಬಂದಿದ್ದ ಬೆಂಗಳೂರಿನ ನೀಲಸಂದ್ರದ ಕುಟುಂಬವೊಂದರ ಮೂರು ಮಕ್ಕಳು ಮತ್ತು ಭೂಪಸಂದ್ರದ ನಿವಾಸಿ, ಚಾಲಕ ಆರೀಫ್ (26) ಬುಧವಾರ ಮಧ್ಯಾಹ್ನ ತಾಲ್ಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮೃತಪಟ್ಟಿದ್ದಾರೆ.

ನೀಲಸಂದ್ರದ ಅಬೂಬಕ್ಕರ್‌ ಅವರ ಕುಟುಂಬ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಒಟ್ಟು 12 ಜನರು ಬುಧವಾರ ಟಾಟಾ ಸಫಾರಿ ವಾಹನದಲ್ಲಿ ಬೆಳಿಗ್ಗೆ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಶ್ರೀನಿವಾಸ ಸಾಗರ ಜಲಾಶಯಕ್ಕೆ ಬಂದು ಕುಟುಂಬದವರೆಲ್ಲ ಊಟ ಮಾಡುತ್ತಿದ್ದರು.

ADVERTISEMENT

ನೀರಾಟವಾಡಲು ಕೆರೆಗೆ ಇಳಿದ ಅಬೂಬಕ್ಕರ್‌ ಅವರ ಪುತ್ರಿ ಸಭಾ (12), ಪುತ್ರ ಸಾದತ್ (7) ಮತ್ತು ಜಾವೀದ್ ಎಂಬುವರ ಪುತ್ರಿ ಹುರಿಯಾ (8) ನೀರಿನಲ್ಲಿ ಮುಳುಗುತ್ತ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಮುಳುಗಿದ ಮಕ್ಕಳನ್ನು ರಕ್ಷಿಸುವ ಸಲುವಾಗಿ  ನೀರಿಗಿಳಿದ ಆರೀಫ್ ಸಹ ಈಜಲಾಗದೆ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರು ಜಲಾಶಯದಲ್ಲಿ ಹುಡುಕಾಟ ನಡೆಸಿ ಸಂಜೆ ವೇಳೆ ನಾಲ್ಕು ದೇಹಗಳನ್ನು ಹೊರತೆಗೆದರು. ಬಳಿಕ ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಯಿತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.