ADVERTISEMENT

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 7:12 IST
Last Updated 21 ನವೆಂಬರ್ 2017, 7:12 IST
ಬಿಜೆಪಿ ಮುಖಂಡ ಅರಿಕೆರೆ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ನೂರಾರು ಯುವಕರು ಬಿಜೆಪಿಗೆ ಸೇರ್ಪಡೆಗೊಂಡರು
ಬಿಜೆಪಿ ಮುಖಂಡ ಅರಿಕೆರೆ ಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ನೂರಾರು ಯುವಕರು ಬಿಜೆಪಿಗೆ ಸೇರ್ಪಡೆಗೊಂಡರು   

ಚೇಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನ ಇವತ್ತು ಇಡೀ ದೇಶವೇ ಕೊಂಡಾಡುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕೂಡ ಖಂಡಿತ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ಬಿಜೆಪಿ ಮುಖಂಡ ಅರಿಕೆರೆ ಸಿ.ಕೃಷ್ಣಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಚೇಳೂರು ಹೋಬಳಿಯ ನಲ್ಲಗುಟ್ಲಪಲ್ಲಿ ಗ್ರಾಮದ ಹೊರವಲಯದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ಅನುದಾನಗಳನ್ನ ತಂದು ಜನಪರ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತೇನೆ. ಬಾಗೇಪಲ್ಲಿಗೆ 500 ಹಾಸಿಗೆಗಳ ಆಸ್ಪತ್ರೆ, ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ವಸತಿ ನಿಲಯಗಳನ್ನ ಕಟ್ಟಿಸಿಕೊಡುತ್ತೇನೆ. ಹಿಂದುಳಿದ ಬಾಗೇಪಲ್ಲಿ ಕ್ಷೇತ್ರವನ್ನು ರಾಮ ರಾಜ್ಯವನ್ನಾಗಿ ಮಾಡಿ ತೋರಿಸುತ್ತೇನೆ’ ಎಂದು ಹೇಳಿದರು.

ಮುಖಂಡ ರಾಮಚಂದ್ರಾರೆಡ್ಡಿ ಮಾತನಾಡಿ, ‘ಹತ್ತು ಹನ್ನೆರಡು ವರ್ಷಗಳಿಂದ ಕೃಷ್ಣಾರೆಡ್ಡಿ ಅವರು ಅನೇಕ ಜನಪರ ಕೆಲಸಗಳನ್ನ ಮಾಡುತ್ತ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಇಂತಹ ಸಮಾಜ ಸೇವಕರಿಗೆ ಬಿಜೆಪಿ ಪಕ್ಷದಲ್ಲಿ ಹೈಕಮಾಂಡ್ ಬಿ.ಫಾರಂ ಕೊಟ್ಟರೆ ಕ್ಷೇತ್ರದ್ಯಾದಂತ ಓಡಾಡಿ ಗೆಲ್ಲಿಸಿಕೊಡಲು ಶ್ರಮಿಸುತ್ತೇವೆ’ ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ಕಾರ್ಕೂರು ರಾಮಚಂದ್ರಾರೆಡ್ಡಿ ನೇತೃತ್ವದಲ್ಲಿ ನಲ್ಲಗುಟ್ಲಪಲ್ಲಿ, ಪಾಳ್ಯಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನೂರಕ್ಕೂ ಅಧಿಕ ಸಂಖ್ಯೆಯ ಯುವಕರು ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿ ತಾಲ್ಲೂಕು ಘಟಕದ ಕೋಶಾಧ್ಯಕ್ಷ ಪಿ.ಎನ್.ಆಂಜನೇಯರೆಡ್ಡಿ, ಮುಖಂಡರಾದ ಎಲ್.ಕೃಷ್ಣಾರೆಡ್ಡಿ, ವೈ,ಎಸ್.ಲೋಕೇಶ್ ಕುಮಾರ್, ಷೇರ್‍ಖಾನ್ ಕೋಟೆ ಜಿ.ಮಂಜುನಾಥರೆಡ್ಡಿ, ಎಂ.ಎನ್.ರವಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.