ADVERTISEMENT

ವರ್ಷದ ಬಳಿಕ ಈಜುಕೊಳ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 10:22 IST
Last Updated 7 ಏಪ್ರಿಲ್ 2017, 10:22 IST
ಚಿಕ್ಕಬಳ್ಳಾಪುರ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಪುನರಾರಂಭಗೊಂಡ ಈಜುಕೊಳದಲ್ಲಿ ಈಜಾಟದಲ್ಲಿ ನಿರತರಾದ ಜನರು.
ಚಿಕ್ಕಬಳ್ಳಾಪುರ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಪುನರಾರಂಭಗೊಂಡ ಈಜುಕೊಳದಲ್ಲಿ ಈಜಾಟದಲ್ಲಿ ನಿರತರಾದ ಜನರು.   

ಚಿಕ್ಕಬಳ್ಳಾಪುರ: ವಿದ್ಯಾರ್ಥಿಯೊಬ್ಬನ ಸಾವಿನ ಘಟನೆಯಿಂದಾಗಿ ಒಂದು ವರ್ಷದಿಂದ ಬಾಗಿಲು ಮುಚ್ಚಿದ್ದ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಗುರುವಾರ ಪುನರಾರಂಭಗೊಂಡಿತು. ಮೊದಲ ದಿನವೇ ಕೊಳಕ್ಕೆ 373 ಜನರು ಭೇಟಿ ನೀಡಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಲ್ಲಿ ಖುಷಿ ತಂದಿದೆ.

ಈಜುಕೊಳ ಖಾಸಗಿಯವರ ನಿರ್ವಹಣೆಯಲ್ಲಿದ್ದಾಗ ಈಜಾಡಲು ಹೋಗಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಕಾರಣದಿಂದ ಕೊಳಕ್ಕೆ ಬೀಗ ಜಡಿಯಲಾಗಿತ್ತು. ನಾಗರಿಕರ ಒತ್ತಾಸೆಯಿಂದ ನವೀಕರಣಗೊಂಡು ಇದೀಗ ಸಿದ್ಧಗೊಂಡಿರುವ ಈಜು ಕೊಳವನ್ನು ಕ್ರೀಡಾ ಇಲಾಖೆಯೇ ಖಾಸಗಿಯವರಿಗೆ ಗುತ್ತಿಗೆ ನೀಡದೆ ತಾನೇ ನಿರ್ವಹಿಸಲು ತೀರ್ಮಾನಿಸಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಕೊಳದ ನವೀಕರಣ ಕಾರ್ಯ ನಡೆಸಲಾಯಿತು. ಅಲ್ಲಲ್ಲಿ ಕಿತ್ತುಹೋಗಿದ್ದ ಟೈಲ್ಸ್‌ಗಳನ್ನು ಅಳವಡಿಸಿ, ಒಡೆದ ಸ್ಥಳಗಳಲ್ಲಿ ಕಾಂಕ್ರಿಟ್‌ ಹಾಕಿ, ನೀರು ಶುದ್ಧೀಕರಣ ಘಟಕ, ನೀರು ಪೂರೈಕೆ ಮೋಟರ್‌ಗಳ ರಿಪೇರಿ ಮತ್ತು ಹಾಳಾಗಿರುವ ಪೈಪ್‌ಲೈನ್‌ನನ್ನು ಸರಿಪಡಿಸುವ ಕೆಲಸ ಮಾಡಲಾಗಿದೆ.

ADVERTISEMENT

ಕ್ರೀಡಾಂಗಣದಲ್ಲಿರುವ ಬೋರ್‌ ವೆಲ್‌ನಿಂದ ಈಜುಕೊಳಕ್ಕೆ ನೀರು ತುಂಬಿಸಲಾಗಿದೆ. ಆ ಬೋರ್‌ವೆಲ್ ನೀರಿನ ಇಳುವರಿ ಕಡಿಮೆ ಇದ್ದ ಕಾರಣ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಖರೀದಿಸಿ ಕೊಳ ತುಂಬಲಾಗಿದೆ.

‘ಮೊದಲ ದಿನವೇ ಈಜುಕೊಳಕ್ಕೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು ಖುಷಿ ತಂದಿದೆ. ಸದ್ಯ ಕೊಳ ನಿರ್ವಹಣೆಗಾಗಿ ಗೌರವಧನದ ಆಧಾರದ ಮೇಲೆ 8 ಸಿಬ್ಬಂದಿ ನೇಮಕ ಮಾಡಿಕೊಂಡಿವೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ ತಿಳಿಸಿದರು.

ಏಪ್ರಿಲ್‌ 10 ರಿಂದ ಒಂದು ತಿಂಗಳ ಕಾಲ ನುರಿತ ಈಜು ತಜ್ಞರಿಂದ ಮಕ್ಕಳಿಗೆ ಈಜು ತರಬೇತಿ ಕೊಡಿಸಲು ನಿರ್ಧರಿಸಿದ್ದೇವೆ’ ಎಂದು ಅವರು ತಿಳಿಸಿದರು.

‘ಈಜುಕೊಳ ನಿತ್ಯ ಬೆಳಿಗ್ಗೆ 8 ಗಂಟೆಗೆ ಬಾಗಿಲು ತೆರೆಯಲಿದೆ. ಸಂಜೆ 5ರ ವರೆಗೆ ಪುರುಷರಿಗೆ ಪ್ರವೇಶವಿರುತ್ತದೆ. ಸಂಜೆ 5 ರಿಂದ 6ರ ವರೆಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಲು ಉದ್ದೇಶಿಸಲಾಗಿದೆ. ಎಲ್ಲ ವಯೋಮಾನದವರಿಗೂ ಪ್ರತಿ ಗಂಟೆಗೆ ₹ 25 ಶುಲ್ಕ ನಿಗದಿಪಡಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.