ADVERTISEMENT

ವಾಲ್ಮೀಕಿ ಪ್ರತಿಮೆಗೆ ಅಪಮಾನ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2012, 9:10 IST
Last Updated 28 ಸೆಪ್ಟೆಂಬರ್ 2012, 9:10 IST

ಚಿಕ್ಕಬಳ್ಳಾಪುರ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಶಾಂತಿಪುರದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಕಿಡಿಗೇಡಿಗಳು ಅಪಚಾರ ಮಾಡಿರುವುದನ್ನು ಖಂಡಿಸಿ ಜಿಲ್ಲಾ ವಾಲ್ಮೀಕಿ ನಾಯಕ ಮಹಾಸಭಾದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿಮಂದಿರದಿಂದ ಶಿಡ್ಲಘಟ್ಟ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡ ಮಹಾಸಭಾದ ಸದಸ್ಯರು, `ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಅಪಚಾರ ಮಾಡಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.

ಮಹಾಸಭಾ ಉಪಾಧ್ಯಕ್ಷ ಎನ್.ಸುಬ್ಬರಾಯಪ್ಪ ಮಾತನಾಡಿ, `ರಾಮಾಯಣ ಮಹಾಕಾವ್ಯ ರಚಿಸಿ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ದಾರಿ ತೋರಿರುವ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ದುರುದ್ದೇಶಪೂರಿತವಾಗಿ ಅಪಚಾರ ಮಾಡಲಾಗಿದೆ. ಹೀನ ಕೃತ್ಯ ಮಾಡುವ ಮೂಲಕ ಅಪಮಾನ ಮಾಡಿದ್ದಾರೆ.

ಕೀಳು ಮತ್ತು ವಿಕೃತ ಅಭಿರುಚಿಯನ್ನು ಹೊಂದಿರುವ ಕಿಡಿಗೇಡಿಗಳನ್ನು ಬಂಧಿಸಬೇಕು. ಇಂತಹ ಕೃತ್ಯಗಳು ನಡೆಯದಂತೆ ಕಡಿವಾಣ ಹಾಕಬೇಕು~ ಎಂದು ಆಗ್ರಹಿಸಿದರು. ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕೆ.ವಿ.ಗವಿರಾಯಪ್ಪ ಮಾತನಾಡಿ, `ಎಲ್ಲ ವರ್ಗದ ಜನರು ಮುಖ್ಯವಾಹಿನಿಗೆ ಬರಲು, ಅಧ್ಯಾತ್ಮಿಕ ಭಾವನೆ ಮೂಡಿಸುವಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿಸಿದ ಮಹರ್ಷಿ ವಾಲ್ಮೀಕಿಯನ್ನು ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕು.

ಅವರನ್ನು ಅಪಚಾರ ಮಾಡುವಂತಹ ಕೃತ್ಯಕ್ಕೆ ಯಾರೂ ಸಹ ಮುಂದಾಗಬಾರದು. ಮಹರ್ಷಿ ಕೊಡುಗೆಯನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು~ ಎಂದರು. ಮುಖಂಡರಾದ ಕೆ.ಟಿ.ನಾರಾಯಣಸ್ವಾಮಿ, ಪಿ.ಮುನಿವೆಂಕಟಸ್ವಾಮಿ, ಜಿ.ಎ.ಮೂರ್ತಿ, ವಿ.ಮಂಜುನಾಥ್, ಆರ್.ನರಸಿಂಹಮೂರ್ತಿ, ಜಿ.ಎ.ಶಿವಕುಮಾರ್, ಎಂ.ಮಹೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT