ADVERTISEMENT

ವಿದ್ಯಾರ್ಥಿಗಳಿಗೆ ಯೋಗ ಕಡ್ಡಾಯ: ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 9:58 IST
Last Updated 22 ಜೂನ್ 2017, 9:58 IST

ಚಿಂತಾಮಣಿ: ‘ರೋಗ ಹಾಗೂ ಒತ್ತಡಮುಕ್ತ ಜೀವನ ನಡೆಸಬೇಕಾದರೆ, ಶಾಲಾ ಕಾಲೇಜುಗಳಿಂದಲೇ ಕಡ್ಡಾಯವಾಗಿ ಯೋಗಾಭ್ಯಾಸದಲ್ಲಿ ಭಾಗವಹಿಸಬೇಕು’ ಎಂದು ಶಾಸಕ ಎಂ.ಕೃಷ್ಣಾರೆಡ್ಡಿ ಸಲಹೆ ನೀಡಿದರು.

ನಗರದ ಝಾನ್ಸಿರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಇಡೀ ವಿಶ್ವದಲ್ಲಿ ಯೋಗಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಯಾವುದೇ ಜಾತಿ, ಮತ, ಧರ್ಮದ ತಾರತಮ್ಯವಿಲ್ಲ. ಆರೋಗ್ಯದ ಜತೆಗೆ ಆರೋಗ್ಯಕರ ಸಮಾಜದ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಯೋಗಾಭ್ಯಾಸದಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.

ADVERTISEMENT

ಎಂ.ಗಂಗಪ್ಪ ಮಾತನಾಡಿ, ‘ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಪತಂಜಲಿ  ಮಹರ್ಷಿಯಿಂದ ಪ್ರಾರಂಭವಾಯಿತು. ಯೋಗ  ಎಂದರೆ ಆತ್ಮ ಪರಮಾತ್ಮನಲ್ಲಿ ವಿಲೀನವಾಗುವುದು, ಯೋಗದಲ್ಲಿ 7 ಹಂತಗಳಿರುತ್ತವೆ. ಶರೀರ ಮತ್ತು ಮನಸ್ಸನ್ನು ಒಂದುಗೂಡಿಸುವುದು, ದೀರ್ಘಾಯುಷ್ಯ ಪಡೆಯಬಹುದು’ ಎಂದರು.

ನೂರಾರು ಜನ ಯೋಗ ಬಂಧುಗಳು ಸಾಮೂಹಿಕ ಯೋಗಾಭ್ಯಾಸ ಮಾಡಿದರು. ಡೆಲ್ಲಿ ಪಬ್ಲಿಕ್‌ ಶಾಲೆಯ ಚಿಣ್ಣರು ನಡೆಸಿಕೊಟ್ಟ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು. ಕಾರ್ಯಕ್ರಮದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಯಿತು. ನಗರಸಭೆ ಅಧ್ಯಕ್ಷೆ ಸುಜಾತಮ್ಮಶಿವಣ್ಣ, ಉಪಾಧ್ಯಕ್ಷೆ ಸುಜಾತಶಿವಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.