ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:30 IST
Last Updated 8 ಜುಲೈ 2017, 10:30 IST

ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯ ಹೋಬಳಿ ಬಿ.ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂಚಾನಹಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ಬಿ.ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆರ್. ರವಿಚಂದ್ರರೆಡ್ಡಿ ಮಾತನಾಡಿ, ‘ಯರ್ರನಾಗೇನಹಳ್ಳಿ ಗ್ರಾಮದ ಜನ ಹಾಗೂ ದನ ಕುರಿ, ಮೇಕೆಗಳು ಬೆಟ್ಟಕ್ಕೆ ಹೋಗಿ ಬರಲು ರಸ್ತೆ ಇಲ್ಲದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದ ನರಸಿಂಹಸ್ವಾಮಿ ದೇಗುಲದಿಂದ ಬೆಟ್ಟಕ್ಕೆ ದನ–ಕರುಗಳು ಹೋಗಿ ಬರಲು ರಸ್ತೆ ನಿರ್ಮಿಸಬೇಕು. ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಿ, ಅರ್ಹ ಫಲಾನುಭವಿಗಳಿಗೆ ವಸತಿ ಹಾಗೂ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಚಿಂಚಾನಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸಿಸ್ಟನ್‌ಗಳಿಗೆ ನೀರು ಸರಬರಾಜು ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರತಿಭಟನಾಕಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಬೇಡಿಕೆಗಳನ್ನು ಹದಿನೈದು ದಿನಗಳೊಳಗಾಗಿ ಈಡೇರಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು. ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ಆರ್.ಎನ್. ರಾಜು, ಕಾರ್ಯಕರ್ತರಾದ ನರಸಿಂಹಪ್ಪ, ಗಂಗಾಧರಪ್ಪ, ಮಂಜುನಾಥ್, ಕೃಷ್ಣಪ್ಪ, ವೆಂಕಟೇಶ್, ಆದಿಲಕ್ಷ್ಮಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.