ADVERTISEMENT

ವೀರಾಂಜನೇಯ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 7:22 IST
Last Updated 4 ಡಿಸೆಂಬರ್ 2017, 7:22 IST

ಚಿಕ್ಕಬಳ್ಳಾಪುರ: ನಗರದ ಹೊರವಲಯದಲ್ಲಿರುವ ವೀರಾಂಜನೇಯ­ಸ್ವಾಮಿ ದೇವಾಲಯದಲ್ಲಿ ಭಾನುವಾರ ಕಡಲೆಕಾಯಿ ಪರಿಷೆ ಮತ್ತು ವೀರಾಂಜನೇಯ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವದಲ್ಲಿ ಚಿಕ್ಕಬಳ್ಳಾಪುರ ನಗರ, ಜಡಲತಿಮ್ಮನಹಳ್ಳಿ, ಚೊಕ್ಕನಹಳ್ಳಿ, ಕೊತ್ತನೂರು, ಚದುರಪುರ, ಅರಸನಹಳ್ಳಿ, ನಂದಿಕ್ರಾಸ್, ಎಲುವಳ್ಳಿ ಮತ್ತಿತರ ಗ್ರಾಮಗಳ ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು.

ವೀರಾಂಜನೇಯ ದೇವಾಲಯಲ್ಲಿನ ಪ್ರಸನ್ನ ಮಹಾಗಣಪತಿ, ಕೋದಂಡರಾಮ ಹಾಗೂ ಆಂಜನೇಯ ದೇವರ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಅಭಿಷೇಕ, ಹೋಮ, ಮಹಾಮಂಗಳಾರತಿ ಒಳಗೊಂಡಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿದವು.

ADVERTISEMENT

ಜಡಲತಿಮ್ಮನಹಳ್ಳಿಯಿಂದ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಈ ವೇಳೆ ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಕುಣಿದು ಕುಪ್ಪಳಿಸಿದರು. ಡೊಳ್ಳುಕುಣಿತ, ಚಂಡೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರಗು ತುಂಬಿದ್ದವು. ಯುವಕರು ಮತ್ತು ವಯಸ್ಕರು ಮೆರವಣಿಗೆಯಲ್ಲಿ ನರ್ತಿಸಿದರು.

ದೇವಾಲಯದ ಬಳಿಗೆ ಬಂದ ವೀರಾಂಜನೇಯ ಮೂರ್ತಿಯನ್ನು ರಥದಲ್ಲಿ ಕೂರಿಸಲಾಯಿತು. ಈ ವೇಳೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಂದನಾಥ ಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ ಮತ್ತಿತರ ಮಠಾಧೀಶರು ಮೂರ್ತಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಜಯಘೋಷದೊಂದಿಗೆ ಭಕ್ತರು ದೇವಾಲಯದ ಆವರಣದಿಂದ ಮಠದ ಆವರಣದವರೆಗೂ ರಥವನ್ನು ಎಳೆದರು. ಈ ವೇಳೆ ಗೋವಿಂದ ಗೋವಿಂದ ಘೋಷಣೆಗಳು ಜೋರಾಗಿ ಮೊಳಗಿದವು.

ಪರಿಷೆ: ಇದೇ ವೇಳೆ ನಡೆದ ಕಡಲೆ ಕಾಯಿ ಪರಿಷೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಕಡಲೆ ಕಾಯಿಗಳನ್ನು ಭಕ್ತರ ಕಡೆಗೆ ತೂರಿದರು. ಪ್ರಸಾದ ರೂಪದ ಈ ಕಡಲೆ ಕಾಯಿಯನ್ನು ಪಡೆಯಲು ಯುವಕರು ನೂಕು ನುಗ್ಗಲಿನಲ್ಲಿ ಸಾಹಸ ಪಟ್ಟರು. ದೇವಾಲಯದ ಆವರಣದಲ್ಲಿ ಆದಿಚುಂಚನಗಿರಿಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ರಥೋತ್ಸವಕ್ಕೆ ಬಂದಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು. ಶಾಸಕ ಡಾ.ಕೆ.ಸುಧಾಕರ್, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.