ADVERTISEMENT

ಶಾಶ್ವತ ನೀರಾವರಿಗಾಗಿ ರೈತರ ಬೈಕ್ ರ್‌್ಯಾಲಿ

​ಪ್ರಜಾವಾಣಿ ವಾರ್ತೆ
Published 13 ಮೇ 2017, 8:40 IST
Last Updated 13 ಮೇ 2017, 8:40 IST

ಚಿಕ್ಕಬಳ್ಳಾಪುರ: ‘ಶಾಶ್ವತ ನೀರಾವರಿ ಒದಗಿಸುವಲ್ಲಿ ವಿಫಲವಾಗಿರುವ ಸರ್ಕಾರವನ್ನು ಎಚ್ಚರಿಸುವ ಉದ್ದೇಶದಿಂದ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಜೂನ್ 1ರಂದು ಬೆಂಗಳೂರಿಗೆ ಬೃಹತ್ ಬೈಕ್ ರ್‌್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಟ್ರ್ಯಾಕ್ಟರ್ ಚಳವಳಿ ನಡೆಸಿದಾಗ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಬಯಲು ಸೀಮೆಗೆ ಪ್ರತ್ಯೇಕ ನೀರಾವರಿ ನಿಗಮ, ತಜ್ಞರ ಸಮಿತಿ, ಉಸ್ತವಾರಿ ಸಮಿತಿ ರಚಿಸುವುದಾಗಿ ಭರವಸೆ ಕೊಟ್ಟು, 13 ತಿಂಗಳು ಕಳೆದರೂ ಈವರೆಗೆ ಅವು ಕಾರ್ಯ ರೂಪಕ್ಕೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇದೀಗ ಸರ್ಕಾರ ವೋಟ್‌ ಬ್‌್ಯಾಂಕ್‌ಗಾಗಿ ದಿನಕ್ಕೊಂದು ಯೋಜನೆ ಹೆಸರಿನಲ್ಲಿ ಬಯಲು ಸೀಮೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಯಲು ಸೀಮೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಬೆಲೆ ತೆರೆಯಬೇಕಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ನಿದ್ರಾವಸ್ಥೆಯಲ್ಲಿರುವ ಸರ್ಕಾರವನ್ನು ಎಚ್ಚರಿಸಲು ರೈತ ಸಂಘ ಮುಂದಾಗಿದೆ. ಜೂನ್‌ 1 ರಂದು ನಡೆಯುವ ರ್‌್ಯಾಲಿಯಲ್ಲಿ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ,  ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಿಂದ ಸಾವಿರಾರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.