ADVERTISEMENT

ಶಿಡ್ಲಘಟ್ಟ: ಬೇಸಿಗೆ ಬೇಗೆಗೆ ಜನ ಕಂಗಾಲು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 8:48 IST
Last Updated 21 ಏಪ್ರಿಲ್ 2014, 8:48 IST

ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ಬಿಸಿಲಿನ ಝಳಕ್ಕೆ ಜನ ಮತ್ತು ಜಾನುವಾರು ತತ್ತರಿಸುವಂತಾಗಿದೆ. ವಿದ್ಯುತ್‌, ನೀರಿನ ಸಮಸ್ಯೆ ಒಂದೆಡೆ ಕಾಡುತ್ತಿದ್ದರೆ, ಬೇಸಿಗೆ­ಯಲ್ಲಿ ತಲೆದೋರುವ ಕಾಯಿಲೆಗಳು ಮತ್ತೊಂದೆಡೆ ಬಾಧಿಸುತ್ತಿವೆ.

ಈ ಬಾರಿ ಬೇಸಿಗೆ ಬಿಸಿ ಜೋರಾ­ಗಿದ್ದು, ತಾಪಮಾನ 38 ಡಿಗ್ರಿ ದಾಟಿದೆ. ನೀರಿನ ಸೆಲೆಗಳು ಬತ್ತಿಹೋಗಿವೆ. ಜಾನು­ವಾರು ನೀರಿನ ಬವಣೆ ಅನುಭವಿ­ಸುತ್ತಿದ್ದರೆ, ಪಕ್ಷಿಗಳು ಸಂಕಷ್ಟದಲ್ಲಿವೆ. ರೈತರು ಅಂತರ್ಜಲ ಕುಸಿತದಿಂದ ಮಳೆ­ಗಾಲದವರೆಗೂ ಜಮೀನಿನಲ್ಲಿರುವ ಬೆಳೆ­ಗಳ ರಕ್ಷಣೆಗೆ ಹರಸಾಹಸ ಪಡು­ವಂತಾಗಿದೆ. ರೇಷ್ಮೆ ಹುಳುಗಳನ್ನು ಸಾಕುವ ಹುಳುಮನೆಗಳ ತಾಪಮಾನ ಏರಿಕೆಯಾಗದಂತೆ ಕಾಪಾಡಿಕೊಳ್ಳು­ವುದು ರೇಷ್ಮೆ ಸಾಕಾಣಿಕೆದಾರರಿಗೆ ದೊಡ್ಡ ಸವಾಲಾಗಿದೆ.

ತಾಲ್ಲೂಕಿನ ಹಲ ಗ್ರಾಮ­ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ­ದೋರಿದ್ದು, ಪಟ್ಟಣದಲ್ಲೂ ಇದೇ ಸಮಸ್ಯೆ ಕಾಡುತ್ತಿದೆ. ಹತ್ತು– ಹನ್ನೆರಡು ದಿನಕ್ಕೊಮ್ಮೆ ಬರುವ ಕುಡಿಯುವ ನೀರಿ­ಗಾಗಿ ಮಹಿಳೆಯರು ಬಿಂದಿಗೆ ಹಿಡಿದು ಕಾಯುವ ದೃಶ್ಯ ಸಾಮಾನ್ಯ­ವಾಗಿದೆ.

ಬೇಸಿಗೆಯಲ್ಲಿ ತಾಪಮಾನ ಏರಿಕೆ­ಯಿಂದಾಗಿ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುತ್ತದೆ. ಆಹಾರ ವ್ಯತ್ಯಯ­ದಿಂದಾಗಿ ವಾಂತಿ, ಭೇದಿ ಕಾಣಿಸಿಕೊಳ್ಳು­ವುದು ಹೆಚ್ಚು. ಬಾಯಿಯಲ್ಲಿ ಹುಣ್ಣಾಗಿ ಏನೂ ತಿನ್ನಲಾಗದಂತಾಗುತ್ತದೆ. ರೇಷ್ಮೆ ಗುಡಿ ಕೈಗಾರಿಕೆಯಲ್ಲಿ ಕೆಲಸ ಮಾಡು­ವವರು ಬಿಸಿಲಿನ ಬಿಸಿಯೊಂದಿಗೆ ಕುದಿ­ಯುವ ನೀರು, ಧಗೆಯೊಂದಿಗೆ ಇದ್ದು ದೇಹದ ನೀರಿನ ಅಂಶ ಕಳೆದುಕೊಂಡು ಕಾಯಿಲೆ ಬೀಳುತ್ತಾರೆ.

ಇನ್ನು ಆಹಾರ ಪದ್ಧತಿ ಬಗ್ಗೆ ಹೇಳು­ವುದಾದರೆ, ‘ಬೇಸಿಗೆಯಲ್ಲಿ ಆಹಾರ ಸೇವನೆ ಕ್ರಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸೂರ್ಯನ ತಾಪಕ್ಕೆ ದೇಹ ಬಳಲುತ್ತದೆ. ನೀರಿನ ಅಂಶ ಕಡಿಮೆಯಾಗಿ ಶಕ್ತಿ ಕುಂದುತ್ತದೆ. ಜೀರ್ಣಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ದೇಹ ತಂಪು ಮಾಡುವ, ನೀರಿನ ಅಂಶ ಹೆಚ್ಚು ಇರುವ ಆಹಾರ, ಪಾನೀಯಗಳನ್ನು ಸೇವಿಸಬೇಕು. ಅವು ಜೀರ್ಣಕ್ರಿಯೆಗೂ ಸಹಕಾರಿಯಾಗುವಂತೆ ಇರಬೇಕು.

ಉಷ್ಣದ ಪಾನೀಯಗಳನ್ನು ಸೇವಿಸಕೂಡದು. ಉಪ್ಪು, ಹುಳಿ, ಖಾರವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳಿಂದ ದೂರವಿರಬೇಕು. ಮೈದಾ ಹಿಟ್ಟಿನಿಂದ ತಯಾರಿಸಿದ ಸಿಹಿ ಮತ್ತು ಖಾರದ ತಿಂಡಿ ಸೇವಿಸಲೇಬಾರದು’ ಎನ್ನುತ್ತಾರೆ ವೈದ್ಯೆ ಮಮತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.