ADVERTISEMENT

ಶೀಘ್ರದಲ್ಲಿಯೇ ‘ಮಾಸ್ಟರ್ ಪ್ಲ್ಯಾನ್’ ಅಂತಿಮ

ಈಗಾಗಲೇ ಏಳೆಂಟು ಖಾಸಗಿ ಕಂಪೆನಿಗಳಿಂದ ಪ್ರವಾಸೋದ್ಯಮ ಇಲಾಖೆಗೆ ‘ಸಮಗ್ರ ನೀಲನಕ್ಷೆ’ ಸಲ್ಲಿಕೆ

ಈರಪ್ಪ ಹಳಕಟ್ಟಿ
Published 12 ಜನವರಿ 2017, 6:02 IST
Last Updated 12 ಜನವರಿ 2017, 6:02 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಮುಖ ಪ್ರೇಕ್ಷಣೀಯ ತಾಣವಾದ ನಂದಿ ಗಿರಿಧಾಮದಲ್ಲಿ ಪ್ರವಾಸಿಗರು ವಿಹರಿಸುತ್ತಿರುವ ದೃಶ್ಯ
ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಮುಖ ಪ್ರೇಕ್ಷಣೀಯ ತಾಣವಾದ ನಂದಿ ಗಿರಿಧಾಮದಲ್ಲಿ ಪ್ರವಾಸಿಗರು ವಿಹರಿಸುತ್ತಿರುವ ದೃಶ್ಯ   

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ತಾಣವಾದ ನಂದಿ ಗಿರಿಧಾಮ ಮತ್ತದರ ಸುತ್ತಲಿನ ಬೆಟ್ಟಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಉತ್ಸುಕತೆ ತೋರಿರುವ ಪ್ರವಾಸೋದ್ಯಮ ಇಲಾಖೆಯು, ಶೀಘ್ರದಲ್ಲಿಯೇ ಅಭಿವೃದ್ಧಿಯ ಯೋಜನೆಯ ‘ಸಮಗ್ರ ನೀಲನಕ್ಷೆ’ಯನ್ನು (ಮಾಸ್ಟರ್ ಪ್ಲ್ಯಾನ್) ಅಂತಿಮಗೊಳಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ.

ಪ್ರಾಥಮಿಕ ಅಂದಾಜು ₹ 50 ಕೋಟಿ ವೆಚ್ಚದ ಈ ಯೋಜನೆಯನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಟಾನಗೊಳಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದ್ದು, ಈಗಾಗಲೇ ಏಳೆಂಟು ಖಾಸಗಿ ಕಂಪೆನಿಗಳು ತಾವು ಸಿದ್ಧಪಡಿಸಿದ ಮಾಸ್ಟರ್‌ ಪ್ಲ್ಯಾನ್‌ಗಳನ್ನು ಇಲಾಖೆಗೆ ಸಲ್ಲಿಸಿವೆ. ಸದ್ಯ ಅವುಗಳ ಅಧ್ಯಯನ ಕಾರ್ಯ ನಡೆದಿದೆ.

‘ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಾವು ನೀಲನಕ್ಷೆ ಸಿದ್ಧಪಡಿಸಬೇಕಿದೆ. ಹೀಗಾಗಿ ಇಲಾಖೆಗೆ ಸಲ್ಲಿಕೆಯಾಗಿರುವ ಏಳೆಂಟು ಮಾಸ್ಟರ್‌ ಪ್ಲ್ಯಾನ್‌ಗಳನ್ನು ಸಲಹಾ ಸಂಸ್ಥೆಗಳಾದ ‘ಮೂಲಸೌಕರ್ಯ ಅಭಿವೃದ್ಧಿ ನಿಗಮ’ (ಐಡೆಕ್‌) ಮತ್ತು  ಕೆಪಿಎಂಜಿ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಒಂದೂವರೆ, ಎರಡು ತಿಂಗಳಲ್ಲಿ ಮಾಸ್ಟರ್‌ ಪ್ಲ್ಯಾನ್‌ ಅಂತಿಮಗೊಳಿಸಲಾಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

‘ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸಲು ಮತ್ತದರ ಅನುಷ್ಟಾನಕ್ಕೆ ನಮಗೆ ಹಣದ ಕೊರತೆ ಇಲ್ಲ. ಅದಕ್ಕಾಗಿಯೇ ಬಜೆಟ್‌ನಲ್ಲಿ ಅನುದಾನ ಮೀಸಲಾಗಿಡಲಾಗಿದೆ. ನೀಲನಕ್ಷೆ ಅಂತಿಮಗೊಳಿಸುತ್ತಿದ್ದಂತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತದೆ’ ಎಂದು ಹೇಳಿದರು.

‘ನಂದಿ ಬೆಟ್ಟ ಬೆಂಗಳೂರಿನಿಂದ ಹೆಚ್ಚಿನ ಪ್ರಮಾಣದ ಪ್ರವಾಸಿಗರನ್ನು ಆಕರ್ಷಿಸುವ ಜತೆಗೆ ಸ್ಥಳೀಯ ಆರ್ಥಿಕ ಬೆಳವಣಿಗೆ ಮಾಡುವ ಶಕ್ತಿ ಹೊಂದಿದೆ. ಹೀಗಾಗಿಯೇ ಬೆಟ್ಟದ ಅಭಿವೃದ್ಧಿ ಕಾರ್ಯವನ್ನು ನಾವು ಆದ್ಯತೆಯ ಮೇಲೆ ಕೈಗೊಳ್ಳಲು ತೀರ್ಮಾನಿಸಿದ್ದೇವೆ’ ಎಂದರು.

ಮಾಸ್ಟರ್‌ ಪ್ಲ್ಯಾನ್‌ ಅನುಷ್ಟಾನಕ್ಕೆ ಬರುತ್ತಿದ್ದಂತೆ ಬೆಟ್ಟದ ಪರಿಸರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಲಿದ್ದು, ಬೆಟ್ಟಕ್ಕೆ ರೂಪ್‌ವೇ ಅಳವಡಿಸುವ ಮತ್ತು ಭೋಗನಂದೀಶ್ವರ ದೇವಸ್ಥಾನ ಪುನರುತ್ಥಾನ ಯೋಜನೆಗಳು ಚಾಲನೆಗೊಳ್ಳಲಿವೆ.

ಮಾಸ್ಟರ್‌ ಪ್ಲ್ಯಾನ್‌ನಂತೆ ಅಭಿವೃದ್ಧಿ ಕಾರ್ಯಗಳು ನಡೆದದ್ದೇ ಆದರೆ ಬೆಟ್ಟ ವಾಹನ ಸಂಚಾರ, ತ್ಯಾಜ್ಯ, ಪ್ಲಾಸ್ಟಿಕ್ ಮುಕ್ತ ವಲಯವಾಗಲಿದೆ. ಹೊಸದಾಗಿ ಹೊಗೆ ರಹಿತ ಎಲೆಕ್ಟ್ರಿಕಲ್ ಬಸ್ ಸಂಚಾರ ಅಸ್ತಿತ್ವಕ್ಕೆ ಬರಲಿದೆ.

ಬೆಟ್ಟದ ತಪ್ಪಲಲ್ಲಿ ಸಾಹಸ ಕ್ರೀಡೆಗಳ ಕಲರವ ಕೇಳಿಬರಲಿವೆ. ಸುತ್ತಲಿನ ಬೆಟ್ಟಗಳಲ್ಲಿ ಉತ್ಸಾಹಿಗಳಿಗೆ ಚಾರಣದ ಹಾದಿಗಳು ತೆರೆದುಕೊಳ್ಳಲಿವೆ. ಬೆಟ್ಟದ ತುದಿಗಳಲ್ಲಿ ಕ್ಯಾಂಪಿಂಗ್‌ ಸೈಟ್‌ಗಳು ಸ್ಥಾಪನೆಯಾಗಲಿವೆ ಎನ್ನುತ್ತವೆ ಪ್ರವಾಸೋದ್ಯಮ ಇಲಾಖೆ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.