ADVERTISEMENT

ಶೀಘ್ರದಲ್ಲೇ ನಗರಸಭೆಗೆ ಹೊಸ ಕಟ್ಟಡ

ಈರಪ್ಪ ಹಳಕಟ್ಟಿ
Published 20 ನವೆಂಬರ್ 2017, 7:12 IST
Last Updated 20 ನವೆಂಬರ್ 2017, 7:12 IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ₹ 2 ಕೋಟಿ ಮಂಜೂರಾಗಿದ್ದು ಶೀಘ್ರದಲ್ಲಿಯೇ ನಗರಸಭೆ ಆವರಣದಲ್ಲಿಯೇ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಲಿದೆ.

ಚಿಕ್ಕಬಳ್ಳಾಪುರ ನಗರಸಭೆ, ಪಾವಗಡ, ಅಂಕೋಲಾ ಪುರಸಭೆಗಳಿಗೆ ಹೊಸ ಕಟ್ಟಡ ನಿರ್ಮಿಸಲು ಅನುದಾನ ಕೋರಿ ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಿದ ಪ್ರಸ್ತಾವಕ್ಕೆ ಪೌರಾಡಳಿತ ಸಚಿವ ಈಶ್ವರ ಖಂಡ್ರೆ  ಒಪ್ಪಿಗೆ ಸೂಚಿಸಿದ್ದರು. ಇದಾದ ಬಳಿಕ ಈ ಮೂರು ನಗರಸಭೆಗಳಿಗೆ ಅನುದಾನ ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

2017–18ನೇ ಸಾಲಿನ ಬಜೆಟ್‌ನ ರಾಜ್ಯ ಹಣಕಾಸು ಆಯೋಗದ (ಎಸ್‌ಎಫ್‌ಸಿ) ಅನುದಾನದಲ್ಲಿ ಚಿಕ್ಕಬಳ್ಳಾಪುರಕ್ಕೆ ₹ 2, ಪಾವಗಡಕ್ಕೆ ₹1.25 ಮತ್ತು ಅಂಕೋಲಾ ಪುರಸಭೆಗೆ ₹ 1 ಕೋಟಿಯನ್ನು ನಗರ ಸ್ಥಳೀಯ ಸಂಸ್ಥೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ.

ADVERTISEMENT

ಈ ಹಿಂದೆ ನಗರಸಭೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಅಮಾನಿ ಗೋಪಾಲಕೃಷ್ಣ ಕೆರೆ ಪ್ರದೇಶದಲ್ಲಿ ಬಟಾನಿಕಲ್‌ ಉದ್ಯಾನಕ್ಕೆ ಮಂಜೂರು ಮಾಡಿದ್ದ ಜಮೀನಿನ ಪೈಕಿ ಸ್ವಲ್ಪ ಭಾಗ ನೀಡಲು ಉದ್ದೇಶಿಸಲಾಗಿತ್ತು. ಕೆಲ ಪರಿಸರವಾದಿಗಳು ಕೆರೆ ಪ್ರದೇಶದಲ್ಲಿ ಕಟ್ಟಡ ಕಟ್ಟುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯಗಳ ಮೆಟ್ಟಿಲೇರಿದ ಕಾರಣಕ್ಕೆ ಅಲ್ಲಿ ನಗರಸಭೆ ಕಟ್ಟುವುದು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬರಲಾಗಿತ್ತು.

ಬಳಿಕ ಅನೇಕ ಕಡೆಗಳಲ್ಲಿ ಜಾಗದ ಹುಡುಕಾಟ ನಡೆಯಿತಾದರೂ ಎಲ್ಲಿ ಕೂಡ ಸೂಕ್ತ ಎನಿಸುವ ಸ್ಥಳಗಳು ಸಿಗದ ಕಾರಣಕ್ಕೆ ಕೊನೆಗೆ ನಗರಸಭೆ ಆವರಣದಲ್ಲಿಯೇ ಇರುವ ಶಿಥಿಲಗೊಂಡಿರುವ ಹಳೆಯ ದಾಸ್ತಾನು ಕಟ್ಟಡ ಕೆಡವಿ ಆ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು ಚಿಂತನೆ ನಡೆದಿದೆ. ಸದ್ಯ ನಗರಸಭೆ ಆವರಣದಲ್ಲಿರುವ ಜ್ಯೂಬಿಲಿ ಕಟ್ಟಡ ಶಿಥಿಲಗೊಂಡಿದೆ. ಆದರೆ ‘ಐತಿಹಾಸಿಕ ಕಟ್ಟಡ’ ಎನ್ನುವ ಕಾರಣಕ್ಕೆ ಅದರ ತಂಟೆಗೆ ಹೋಗದಿರಲು ನಿರ್ಧರಿಸಲಾಗಿದೆ.

‘ನಗರಸಭೆ ಹೊಸ ಕಟ್ಟಡಕ್ಕೆ ಅನುದಾನ ಮಂಜೂರಾಗಿರುವ ಬಗ್ಗೆ ಇತ್ತೀಚೆಗಷ್ಟೇ ಸರ್ಕಾರಿ ಆದೇಶ ಬಂದಿದೆ. ಜಾಗ ನಮ್ಮ ಕಚೇರಿ ಆವರಣದಲ್ಲಿಯೇ ಇರುವುದರಿಂದ ಯಾವ ಸಮಸ್ಯೆಗಳಿಲ್ಲ. ಹೀಗಾಗಿ ಸದ್ಯ ನಾವು ಸರ್ಕಾರದ ವಾಸ್ತುಶಿಲ್ಪಿಗಳಿಗೆ ನಗರಸಭೆ ಕಟ್ಟಡದ ಕೆಲ ವಿನ್ಯಾಸಗಳನ್ನು ನೀಡುವಂತೆ ಕೋರಿದ್ದೇವೆ. ವಿನ್ಯಾಸಗಳು ಲಭ್ಯವಾದ ಬಳಿಕ ಆಡಳಿತ ಮಂಡಳಿ ಸಭೆಯಲ್ಲಿ ವಿನ್ಯಾಸವೊಂದನ್ನು ಅಂತಿಮಗೊಳಿಸುತ್ತೇವೆ’ ಎಂದು ನಗರಸಭೆ ಆಯುಕ್ತ ಉಮಾಕಾಂತ್‌ ತಿಳಿಸಿದರು.

‘ಅತ್ಯುತ್ತಮವಾದ ಕಟ್ಟಡವೊಂದನ್ನು ನಿರ್ಮಿಸಲು ಉದ್ದೇಶಿಸಿದ್ದೇವೆ.  ಶಾಸಕ ಡಾ.ಕೆ.ಸುಧಾಕರ್ ಅವರು ಸಹ ಹೊಸ ಕಟ್ಟಡ ಚೆನ್ನಾಗಿ ಕಟ್ಟಿಸಿ ಇನ್ನಷ್ಟು ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಕೆಲಸ ಆರಂಭಿಸಲು ನಮಗೆ ಸದ್ಯ ವಿನ್ಯಾಸ ಬರುವುದಷ್ಟೇ ಬಾಕಿ ಇದೆ’ ಎಂದು ಹೇಳಿದರು.

* * 

ಕಟ್ಟಡ ವಿನ್ಯಾಸಗಳು ಲಭ್ಯವಾಗಿ, ಒಂದನ್ನು ಆಯ್ಕೆ ಮಾಡಿಕೊಂಡು ತಕ್ಷಣವೇ ಭೂಮಿಪೂಜೆ ಮಾಡುತ್ತೇವೆ. ನಂತರ ಆರೆಂಟು ತಿಂಗಳಲ್ಲಿ ಹೊಸ ಕಟ್ಟಡ ಸಿದ್ಧಗೊಳ್ಳಲಿದೆ.
ಉಮಾಕಾಂತ್, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.