ADVERTISEMENT

ಶೌಚಾಲಯ ನಿರ್ಮಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 6:38 IST
Last Updated 18 ನವೆಂಬರ್ 2017, 6:38 IST

ಬಾಗೇಪಲ್ಲಿ: 'ಬಯಲು ಶೌಚಾಲಯ ಮಾಡುವುದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತವೆ, ಕೂಲಿ ಮಾಡಿ ಸಂಪಾದನೆ ಮಾಡಿರುವ ಹಣ ವ್ಯಯಿಸಿದರೂ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಶುಚಿತ್ವದ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ರವಿಶಂಕರ್ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.

ಅವರು ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಪೈಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಬಯಲು ಶೌಚಮುಕ್ತ ಪರಿಸರದ ಬಗ್ಗೆ ಜನಜಾಗೃತಿ ಮೂಡಿಸಿ ಮಾತನಾಡಿದರು. ‘ಸಂಪಾದನೆ ಮಾಡಿದ ಹಣ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಕೂಡಲೇ ಶೌಚಾಲಯ ಮಹತ್ವ ಅರಿತು ಶೌಚಾಲಯ ನಿರ್ಮಿಸಿಕೊಳ್ಳಬೇಕು’ ಎಂದರು.

‘ಕಲ್ಲು ಬಂಡೆಯ ಮೇಲೆ ಮನೆ ನಿರ್ಮಿಸಿಕೊಂಡಿದ್ದೇವೆ, ಶೌಚಾಲಯ ನಿರ್ಮಿಸಿಕೊಳ್ಳಲು ಗುಣಿ ತೆಗೆಯಲು ಆಗುತ್ತಿಲ್ಲ, ಬೇರೆ ಕಡೆ ಶೌಚಾಲಯ ನಿರ್ಮಿಸಿಕೊಳ್ಳಲು ನಮಗೆ ನಿವೇಶನವಿಲ್ಲ, ಶೌಚಾಲಯ ನಿರ್ಮಿಸಿಲ್ಲವೆಂದರೆ ಪಡಿತರ ವಸ್ತುಗಳು ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸುತ್ತಾರೆ’ ಎಂದು ಪೈಪಾಳ್ಯ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ತಾಲ್ಲೂಕು ಆಡಳಿತ ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ಪ್ರತಿಕ್ರಿಯಿಸಿ, 'ಗ್ರಾಮದಲ್ಲಿ ಶೇ 70ರಷ್ಟು ಶೌಚಾಲಯ ನಿರ್ಮಿಸಿಕೊಳ್ಳಲು ಸಮಸ್ಯೆಯಿಲ್ಲ, ಕೇವಲ ಶೇ 30ರಷ್ಟು ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಳ್ಳಲು ಸಮಸ್ಯೆಯಿರುವುದರಿಂದ ಪರ್ಯಾಯ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

ಗಡವು ನೀಡಿ: 'ಕೃಷಿ ಚಟುವಟಿಕೆಯ ಕೆಲಸಗಳು ಹೆಚ್ಚಾಗಿವೆ, ಶೌಚಾಲಯ ನಿರ್ಮಿಸಿಕೊಳ್ಳಲು ನಮಗೆ 15 ರಿಂದ 20 ದಿನಗಳ ಕಾಲ ಗಡವು ನೀಡಿ' ಎಂದು ಅಧಿಕಾರಿಗಳಿಗೆ ಗ್ರಾಮಸ್ಥರು ಕೇಳಿಕೊಂಡರು.

ಜೂಲಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಿಗೆರೆ, ಬಂಡೋಳ್ಳಪಲ್ಲಿ, ನಡಿಂಪಲ್ಲಿ, ಯಗವಪಲ್ಲಿ, ಬೋಡಿಕದಿರೆಪಲ್ಲಿ, ಶ್ರೀಧರವಾರಪಲ್ಲಿ, ಜೂಲಪಾಳ್ಯ ಗ್ರಾಮಗಳು ಸೇರಿದಂತೆ ಪರಿಶಿಷ್ಠ ಜಾತಿ, ಪಂಗಡದ ಕಾಲೊನಿಗಳಿಗೆ ಭೇಟಿ ನೀಡಿ ಜನಜಾಗೃತಿ ಮಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯೂಬ್‌ ಖಾನ್‌, ಗ್ರಾಮಲೆಕ್ಕಾಧಿಕಾರಿ ಶ್ರೀನಿವಾಸರೆಡ್ಡಿ, ಗಣಕಯಂತ್ರದ ಸಹಾಯಕ ಶಿವಾರೆಡ್ಡಿ, ಮುಖಂಡರಾದ ಶ್ರೀರಂಗಪ್ಪ, ರಾಮಚಂದ್ರ, ವೆಂಕಟರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.