ADVERTISEMENT

ಸಮಾವೇಶಕ್ಕೆ ತೆರಳಿದ ರೈತ ಮುಖಂಡರು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 8:32 IST
Last Updated 23 ಸೆಪ್ಟೆಂಬರ್ 2017, 8:32 IST

ಚಿಕ್ಕಬಳ್ಳಾಪುರ: ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿರುವ ದಕ್ಷಿಣ ಭಾರತದ ರೈತ ಜಾಥಾದ ಬೃಹತ್‌ ಸಮಾವೇಶದಲ್ಲಿ ಭಾಗವಹಿಸಲು ಶುಕ್ರವಾರ ಜಿಲ್ಲೆಯಿಂದ ರೈತಸಂಘದ ಮುಖಂಡರು ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಲಕ್ಷ್ಮೀ ನಾರಾಯಣ ರೆಡ್ಡಿ, ‘ರೈತರ ಎಲ್ಲಾ ಬಗೆಯ ಸಾಲ ಮನ್ನಾ ಮಾಡಬೇಕು. ಸ್ವಾಮಿನಾಥನ್‌ ಆಯೋಗದ ಶಿಫಾರಸಿನಂತೆ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದ ಮೇಲೆ ಶೇ 50 ರಷ್ಟು ಲಾಭಾಂಶ ಸೇರಿಸಿ ವೈಜ್ಞಾನಿಕ ರೀತಿಯಲ್ಲಿ ಬೆಂಬಲ ಬೆಲೆ ನಿಗದಿ ಮಾಡುವ ಕಾನೂನು ಜಾರಿಗೆ ತರಬೇಕು ಎನ್ನುವ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಬೆಂಬಲ ಬೆಲೆ ರೈತರ ಹಕ್ಕು. ಇದನ್ನು ಖಾತ್ರಿಗೊಳಿಸಲು ಮುಂಬರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ 174 ರೈತ ಸಂಘಟನೆಗಳು ಸೇರಿ ರಚಿಸಿಕೊಂಡಿರುವ ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿ ನವೆಂಬರ್ 20 ರಂದು ದೆಹಲಿಯಲ್ಲಿ ನಿರಂತರ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಿದೆ. ಅದಕ್ಕೆ ಪೂರ್ವಭಾವಿಯಾಗಿ ಈ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು

ADVERTISEMENT

ಬಾಗೇಪಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಎಚ್‌.ಎಸ್‌.ಬಾಜಿ ಸಾಬ್‌, ಗುಡಿಬಂಡೆ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ನಾರಾಯಣಸ್ವಾಮಿ, ಜಿಲ್ಲಾಯುವ ಘಟಕದ ಅಧ್ಯಕ್ಷ ಅರುಣ್‌ ಕುಮಾರ್‌, ಮುಖಂಡರಾದ ಅಶ್ವತ್ಥ ರೆಡ್ಡಿ, ಬಿ.ಆರ್‌.ವೆಂಕಟೇಶ್‌, ಫಯಾಜ್‌, ನರಸಿಂಹ ರೆಡ್ಡಿ, ವರದರಾಜು, ಎಸ್‌.ಎನ್‌.ಅಶ್ವತ್ಥ ರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.