ADVERTISEMENT

ಸವಾರರಿಗೆ ತೊಂದರೆ ಮಾಡುತ್ತಿರುವ ಮ್ಯಾನ್‌ಹೋಲ್‌ಗಳು

ನಗರದಲ್ಲಿ ಹೆಚ್ಚುತ್ತಿರುವ ಅವೈಜ್ಞಾನಿಕ ಕಾಮಗಾರಿಗಳು, ನಗರಸಭೆ ಅಧಿಕಾರಿಗಳಿಂದ ಜಾಣ ಕುರುಡು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 7:21 IST
Last Updated 27 ಮಾರ್ಚ್ 2017, 7:21 IST
ಚಿಕ್ಕಬಳ್ಳಾಪುರ: ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸುತ್ತಿರುವ ಮ್ಯಾನ್‌ಹೋಲ್‌ಗಳಿಂದ ವಾಹನ ಸವಾರರು ತೊಂದರೆ ಎದುರಿಸುತ್ತಿದ್ದಾರೆ. ಈ ಕುರಿತು ಗಮನ ಹರಿಸಬೇಕಾದ ನಗರಸಭೆಯ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 
 
ನಗರವನ್ನು ಒಂದು ಸುತ್ತಿ ಹಾಕಿದರೆ ಅಲ್ಲಲ್ಲಿ ಮ್ಯಾನ್‌ಹೋಲ್‌ಗಳು ಸೃಷ್ಟಿಸಿರುವ ಸಮಸ್ಯೆಗಳು ಕಣ್ಣಿಗೆ ಗೋಚರಿಸುತ್ತವೆ. ಕೆಲವೆಡೆ ಮ್ಯಾನ್‌ಹೋಲ್‌ಗಳನ್ನು ರಸ್ತೆಗಿಂತಲೂ ಎತ್ತರವಾಗಿ ನಿರ್ಮಿಸಲಾಗಿದ್ದರೆ, ಇನ್ನೂ ಕೆಲವೆಡೆ ಮ್ಯಾನ್‌ಹೋಲ್‌ಗಳ ಮುಚ್ಚಳಗಳು ಒಡೆದು ಹಾಳಾಗಿ ಸವಾರರು ಭಯದ ನಡುವೆ ಸವಾರಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. 
 
ಇತ್ತೀಚೆಗಷ್ಟೇ ಡಾಂಬರೀಕರಣಗೊಂಡ ನೂತನ ಜಿಲ್ಲಾಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಮ್ಯಾನ್‌ಹೋಲ್‌ ರಸ್ತೆಗಿಂತಲೂ ಒಂದು ಅಡಿ ಎತ್ತರದಲ್ಲಿದೆ. ಜತೆಗೆ ಅದರ ಮೇಲೆ ಕಲ್ಲುಗಳನ್ನು ಕೂಡ ಪೇರಿಸಲಾಗಿದೆ. ಹೀಗಾಗಿ ಇದು ಸವಾರರಿಗೆ ಕಂಟಕದಂತೆ ಭಾಸವಾಗುತ್ತಿದೆ. 
 
ಇತ್ತೀಚೆಗಷ್ಟೇ ಈ ರಸ್ತೆ ಉದ್ಘಾಟಿಸಿದ ಸಂದರ್ಭದಲ್ಲಿ ಶಾಸಕ ಡಾ.ಕೆ.ಸುಧಾಕರ್‌ ಅವರು ನಗರವನ್ನು ವೈಜ್ಞಾರಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದ್ದರು. ಅದೇ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಮ್ಯಾನ್‌ಹೋಲ್‌ ಅವರ ಮಾತನ್ನು ಅಣಕಿಸುವಂತೆ ಗೋಚರಿಸುತ್ತದೆ. 
 
ಸಾಧುಮಠ ರಸ್ತೆಯಿಂದ ನೂತನ ಜಿಲ್ಲಾಸ್ಪತ್ರೆಯ ಮುಂಭಾಗದ ರಸ್ತೆಗೆ ಸಂಪರ್ಕ ಬೆಸೆಯುವ ರಸ್ತೆಯಂತೂ ಅಧ್ವಾನಗೊಂಡು ಹೋಗಿದ್ದು, ಅಲ್ಲಿರುವ ಮ್ಯಾನ್‌ಹೋಲ್‌ ಕೂಡ ಬಲಿಗಾಗಿ ಕಾಯುತ್ತಿರುವಂತೆ ಕಾಣುತ್ತದೆ. ರಸ್ತೆಗಿಂತಲೂ ತುಂಬಾ ಮೇಲ್ಮಟ್ಟದಲ್ಲಿರುವ ಈ ಮ್ಯಾನ್‌ಹೋಲ್‌ ವಾಹನಗಳಿಗೆ ತೊಂದರೆ ಮಾಡುತ್ತಲೇ ಇದೆ. 
 
ನಗರಸಭೆ ಕಾರ್ಯಾಲಯದ ಬಳಿಯ ನಗರ್ತಪೇಟೆಯ ಮುಖ್ಯ ರಸ್ತೆಯಲ್ಲಿಯೇ ಮ್ಯಾನ್‌ಹೋಲ್ ಮುಚ್ಚಳ ಒಡೆದು ಹಾಳಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಸಮೀಪದಲ್ಲಿಯೇ ಇರುವ ನಗರಸಭೆಯವರಿಗೆ ಇದು ಕಣ್ಣಿಗೆ ಬೀಳದಿರುವುದು ಆಶ್ಚರ್ಯ ಮೂಡಿಸುತ್ತದೆ. ಕಿರಿದಾದ ಈ ರಸ್ತೆಯಲ್ಲಿ ಸವಾರರು ಸರ್ಕಸ್‌ ಮಾಡುತ್ತ ಚಾಲನೆ ಮಾಡಬೇಕಾಗಿದೆ. 
 
‘ನಿತ್ಯ ನಗರದ ಹಲವಾರು ರಸ್ತೆಗಳಲ್ಲಿ ನಾನು ಓಡಾಡುತ್ತಲೇ ಇರುತ್ತೇನೆ. ಕೆಲವು ರಸ್ತೆಗಳಲ್ಲಿ ಅಂತೂ ತುಂಬಾ ಜಾಗರೂಕತೆಯಿಂದ ಬೈಕ್ ಓಡಿಸುತ್ತೇನೆ. ಅಲ್ಲೆಲ್ಲ ಸ್ವಲ್ಪ ಮೈಮರೆತರೂ ಅಪಾಯಕ್ಕೆ ಒಳಗಾಗುವ ಪರಿಸ್ಥಿತಿ ಇದೆ.

ಆದ್ದರಿಂದ ನಗರಸಭೆಯವರು ನಗರದಲ್ಲಿ ಒಂದು ಸಮೀಕ್ಷೆ ಮಾಡಿ ಅವೈಜ್ಞಾನಿಕವಾಗಿರುವ ಮತ್ತು ಹಾಳಾಗಿರುವ ಮ್ಯಾನ್‌ಹೋಲ್‌ಗಳನ್ನು ಗುರುತಿಸಿ ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಚಾಮರಾಜಪೇಟೆಯ ನಿವಾಸಿ ವೆಂಕಟೇಶ್ ಹೇಳಿದರು. 
 
‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಕೆಲಸ ಮಾಡಿಸುವವರಿಗೆ ಇಂತಹ ಸಣ್ಣ ವಿಚಾರಗಳು ಏಕೆ ಗಮನಕ್ಕೆ ಬರುವುದಿಲ್ಲ? ಚಿಕ್ಕ ಚಿಕ್ಕ ನಿರ್ಲಕ್ಷಿತ ಸಮಸ್ಯೆಗಳಿಂದ ಜನರು ಬಲಿಯಾಗುತ್ತಾರೆ. ಮ್ಯಾನ್‌ಹೋಲ್‌ ಸಮಸ್ಯೆಗಳು ಇದ್ದಲ್ಲಿ ರಸ್ತೆಗಳು ಕೂಡ ಹಾಳಾಗುತ್ತವೆ.
 
ಆದ್ದರಿಂದ ನಗರಸಭೆಯವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ನಗರ್ತಪೇಟೆ ನಿವಾಸಿ ಮಂಜುನಾಥ್ ತಿಳಿಸಿದರು. 
-ಬೊಮ್ಮೇಕಲ್ಲು ವೆಂಕಟೇಶ
 
ನಗರದ ಕೆಲವೆಡೆ ಮ್ಯಾನ್‌ಹೋಲ್‌ಗಳಿಂದ ಸವಾರರಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲಿಯೇ ಸರಿಪಡಿಸುವ ಕೆಲಸ ಮಾಡುತ್ತೇವೆ.
ನಾಗೇಂದ್ರ, ಪ್ರಭಾರ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.