ADVERTISEMENT

ಸಾಲ ಮನ್ನಾ ಮಾಡದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 6:44 IST
Last Updated 15 ನವೆಂಬರ್ 2017, 6:44 IST

ಬಾಗೇಪಲ್ಲಿ: 'ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲಾ ಮನ್ನಾ ಮಾಡಿ ಎಂದು ಕೇಳಿದರೆ, ಕಿಂಚಿತ್ತು ಗಮನಹರಿಸುತ್ತಿಲ್ಲ’ ಎಂದು ಸಂಸದ ವೀರಪ್ಪ ಮೊಯಿಲಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದರು.

ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಜಿಲ್ಲಾ ಸಹಕಾರ ಒಕ್ಕೂಟ ನಿ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕೋಚಿಮುಲ್ ಪ್ರಾಥಮಿಕ ಸಹಕಾರ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಮಹಿಳಾ ಸಹಕಾರ ಸಂಘಗಳು ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ 64ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

'ಮಾಜಿ ಪ್ರಧಾನಿ ಡಾ.ಮನಮೋಹನಸಿಂಗ್ ಆಡಳಿತ ಅವಧಿಯಲ್ಲಿ ರೈತರ ಆತ್ಮಹತ್ಯೆಗಳು ತಡೆಯಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಮಾರು ₹ 73 ಸಾವಿರ ಕೋಟಿ ರೈತರ ಸಾಲಾ ಮನ್ನಾ ಮಾಡಿದ್ದಾರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಾ ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಿದ್ದಾರೆ' ಎಂದರು.

ADVERTISEMENT

'ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಳನ್ನು ಒದಗಿಸಬೇಕು ಎಂದು ಸಂಕಲ್ಪ ಮಾಡಿ ಎತ್ತಿನ ಹೊಳೆ ಯೋಜನೆಯನ್ನು ₹ 13 ಸಾವಿರ ಕೋಟಿ ಕಾಮಗಾರಿ ನಡೆಯುತ್ತಿದೆ. ಹಾಗೇಯೆ ಹೆಬ್ಬಾಳ ಕೆರೆಯಿಂದ ಸುಮಾರು ₹ 800 ಕೋಟಿ ವೆಚ್ಚದಲ್ಲಿ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಹರಿಸಲಾಗುವುದು' ಎಂದು ಭರವಸೆ ನೀಡಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, 'ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಈ ತಾಲ್ಲೂಕಿನ ಸಹಕಾರ ಸಂಘಗಳಿಗೆ ಸುಮಾರು ₹ 34 ಕೋಟಿ ಬಿಡುಗಡೆ ಮಾಡಿಸಿದ್ದೇನೆ. ಅದರಲ್ಲಿ ಮಹಿಳಾ ಸಂಘಗಳಿಗೆ ₹ 12 ರಿಂದ 15 ಕೋಟಿ ಬಡ್ಡಿ ರಹಿತ ಸಾಲ ನೀಡಲಾಗಿದೆ. ಹೊಗೆ ಮುಕ್ತ ತಾಲ್ಲೂಕನ್ನಾಗಿ ಮಾಡಲು ಪ್ರತಿ ಮನೆಗೂ ಗ್ಯಾಸ್‌ಸ್ಟೌ ಮತ್ತು ಸಿಲಿಂಡರ್ ನೀಡಲಾಗುವುದು' ಎಂದರು. ವಿವಿಧ ಸಹಕಾರ ಸಂಘಗಳಲ್ಲಿ ಸಾಧನೆ ಮಾಡಿದ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳನ್ನು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಕೆಪಿಸಿಸಿ ಕಾರ್ಯದರ್ಶಿ ಶ್ರೀಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಬೂರಗಮಡಗು ನರಸಿಂಹಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಅರ್.ನರೇಂದ್ರಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಎ.ಪಿ.ಎಂ.ಸಿ ಅಧ್ಯಕ್ಷ ನಾರಾಯಣರೆಡ್ಡಿ, ಉಪಾಧ್ಯಕ್ಷ ಎನ್.ರಾಮಚಂದ್ರಪ್ಪ, ಕೋಚಿಮುಲ್ ನಿರ್ದೇಶಕ ಪ್ರಭಾಕರ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ನರೇಂದ್ರ, ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಚೇತನ್, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ನಿರ್ದೇಶಕರಾದ ಅಶ್ವತ್ರೆಡ್ಡಿ, ನರಸಿಂಹರೆಡ್ಡಿ, ಹನುಮಂತರೆಡ್ಡಿ, ನಾಗರಾಜರೆಡ್ಡಿ, ಯರ್ರಕೃಷ್ಣಪ್ಪ, ಮುತ್ತಿರೆಡ್ಡಿ ಇದ್ದರು.

ಹಸಿರು ಕ್ರಾಂತಿ ಸೃಷ್ಟಿ
‘ನ.14 ರಂದು ನಮ್ಮ ದೇಶದ ಮೊಟ್ಟ ಮೊದಲ ಮಾಜಿ ಪ್ರಧಾನಿಯಾದ ದಿ.ಜವಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಸಹಕಾರ ಸಂಘಗಳ ಸಪ್ತಾಹ ದಿನಾಚರಣೆ ಮಾಡುತ್ತಿದ್ದೇವೆ’ ಎಂದು ಡಾ.ಎಂ.ವೀರಪ್ಪ ಮೊಯಿಲಿ ಹೇಳಿದರು.

‘ನೆಹರೂ ಅವರ ದೂರದೃಷ್ಟಿಯಿಂದ ಸಹಕಾರ ಸಂಘಗಳು ಬೆಳೆಯಲು ಕಾರಣವಾಗಿವೆ. ಹಾಗೆಯೇ ಅವರ ಪುತ್ರಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಈ ಸಹಕಾರ ಸಂಘಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಹಸಿರು ಕ್ರಾಂತಿಯನ್ನು ಸೃಷ್ಟಿ ಮಾಡಿದರು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.