ADVERTISEMENT

ಸಿ.ಎಂಗಾಗಿ ಕಾಯುತ್ತಿರುವ ಎಸ್‌ಪಿ ಕಚೇರಿ

ಈರಪ್ಪ ಹಳಕಟ್ಟಿ
Published 24 ಮೇ 2017, 6:49 IST
Last Updated 24 ಮೇ 2017, 6:49 IST
ಚಿಕ್ಕಬಳ್ಳಾಪುರ ಹೊರವಲಯದ ಅಣಕನೂರು ಬಳಿ ನಿರ್ಮಾಣಗೊಂಡಿರುವ ನೂತನ ಎಸ್‌ಪಿ ಕಚೇರಿ
ಚಿಕ್ಕಬಳ್ಳಾಪುರ ಹೊರವಲಯದ ಅಣಕನೂರು ಬಳಿ ನಿರ್ಮಾಣಗೊಂಡಿರುವ ನೂತನ ಎಸ್‌ಪಿ ಕಚೇರಿ   

ಚಿಕ್ಕಬಳ್ಳಾಪುರ: ನಗರ ಹೊರವಲಯದ ಅಣಕನೂರು ಬಳಿ ನಿರ್ಮಾಣಗೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನೂತನ ಕಚೇರಿ ಉದ್ಘಾಟನೆಗೆ ಸಿದ್ಧಗೊಂಡಿದ್ದು, ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಯ ನಿಗದಿಗಾಗಿ ಎದುರು ನೋಡುತ್ತಿದ್ದಾರೆ.

ಹೆಬ್ಬಾಳ –ನಾಗವಾರ ಕೆರೆಗಳಲ್ಲಿ ಸಂಗ್ರಹವಾಗುವ ಕೊಳಚೆ ನೀರು ಶುದ್ಧೀಕರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ, ಕೆಎಸ್‌ಆರ್‌ಟಿಸಿ ನೂತನ ಬಸ್‌ ನಿಲ್ದಾಣ ಮತ್ತು ಎಸ್‌ಪಿ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮೇ 20 ರಂದು ಮೂಹೂರ್ತ ನಿಗದಿ ಮಾಡಲಾಗಿತ್ತು.

ಆದರೆ ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ದೇವನಹಳ್ಳಿಗೆ ಸ್ಥಳಾಂತರಿಸಲಾಯಿತು. ಹೀಗಾಗಿ ಬಸ್‌ ನಿಲ್ದಾಣ, ಎಸ್‌ಪಿ ಕಚೇರಿ ಸಿದ್ಧಗೊಂಡರೂ ಉದ್ಘಾಟನೆ ಭಾಗ್ಯ ಬರಲಿಲ್ಲ.

ADVERTISEMENT

ಸದ್ಯ, ಚದುಲಪುರ ಕ್ರಾಸ್ ಬಳಿ ಇರುವ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪೊಲೀಸ್ ಆಡಳಿತ ಯಾವಾಗ ಹೊಸ ಕಚೇರಿ ಉದ್ಘಾಟನೆಗೊಂಡು ಅಲ್ಲಿಗೆ ಸ್ಥಳಾಂತರಗೊಳ್ಳುತ್ತೇವೆ ಎಂದು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದೆ.

ಅಣಕನೂರು ಬಳಿ ಇರುವ ಜಿಲ್ಲಾ ಕಾರಾಗೃಹಕ್ಕೆ ಸಮೀಪದಲ್ಲಿಯೇ 7 ಎಕರೆ 36 ಗುಂಟೆ ವಿಶಾಲ ಜಾಗದಲ್ಲಿ ಎಸ್‌ಪಿ ಕಚೇರಿ ತಲೆ ಎತ್ತಿದೆ. ₹ 7.1 ಕೋಟಿ ವೆಚ್ಚದ ಈ ಯೋಜನೆಗೆ 2015ರ ಅಕ್ಟೋಬರ್‌ 21 ರಂದು ಶಂಕುಸ್ಥಾಪನೆ ನಡೆದಿತ್ತು. ಈ ಸಂದರ್ಭದಲ್ಲಿ ದಿವ್ಯಾ ಗೋಪಿನಾಥ್ ಅವರು ಜಿಲ್ಲೆಯ ಎಸ್‌ಪಿಯಾಗಿದ್ದರು.

ಕಾಮಗಾರಿ ಆರಂಭಗೊಂಡು 1 ವರ್ಷ 7 ತಿಂಗಳ ಒಳಗೆ ವಿಶಾಲ ಜಾಗದ ನಡುವೆ ಒಂದೂವರೆ ಎಕರೆ ಜಾಗದಲ್ಲಿ ಭವ್ಯವಾದ  ಜಿಲ್ಲಾ ಪೊಲೀಸ್ ಆಡಳಿತ ಕಚೇರಿ ನಿರ್ಮಾಣಗೊಂಡಿದೆ. ಈ ನೂತನ ಕಚೇರಿಯಲ್ಲಿ ಪೊಲೀಸ್ ಆಡಳಿತಕ್ಕೆ ಅಗತ್ಯವಾದ 24 ಕೊಠಡಿಗಳು ಸಿದ್ಧಗೊಂಡಿವೆ. ಆ ಪೈಕಿ ಈಗಾಗಲೇ ಎಸ್‌ಪಿ ಮತ್ತು ವಿಡಿಯೊ ಕಾನ್ಫರೆನ್ಸ್ ಕೊಠಡಿಗಳ ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಉಳಿದ ಕೊಠಡಿಗಳಿಗೆ ಪೀಠೋಪಕರಣಗಳು ಬರಬೇಕಿದೆ.

ಎಸ್‌ಪಿ ಕಚೇರಿ ಆವರಣದಲ್ಲಿಯೇ 9 ಕೊಠಡಿಗಳುಳ್ಳ ಸಶಸ್ತ್ರ ಮೀಸಲು ಪಡೆ (ಡಿಎಆರ್) ಕಚೇರಿ ಕೂಡ ಸಿದ್ಧಗೊಂಡಿದೆ. ಸದ್ಯ, ಆವರಣದೊಳಗೆ ರಸ್ತೆ ನಿರ್ಮಾಣದ ಜತೆಗೆ ಉದ್ಯಾನ, ಭೂದೃಶ್ಯ (ಲ್ಯಾಂಡ್‌ಸ್ಕೇಪ್‌) ಮತ್ತು ಕವಾಯತು ಮೈದಾನ ನಿರ್ಮಿಸುವ ಕೆಲಸ ಬಾಕಿ ಇದೆ.

ಇಷ್ಟವಾಗದ ವಿನ್ಯಾಸ
ಜಿಲ್ಲಾ ಪೊಲೀಸ್ ಆಡಳಿತದ ಸಿಬ್ಬಂದಿ ಹೊಸ ಕಚೇರಿಗೆ ಹೋಗಲು ಉತ್ಸುಕತೆ ತೋರುತ್ತಿದ್ದಾರೆ. ಮುಖ್ಯ ರಸ್ತೆ, ಜನ ವಸತಿ ಪ್ರದೇಶಗಳನ್ನು ಬಿಟ್ಟು ನಿರ್ಜನ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಿಸಿರುವುದು ಅಧಿಕಾರಿಗಳಿಗೆ ಬೇಸರ ಮೂಡಿಸಿದೆ. ಅದರಲ್ಲೂ ಹೊಸ ಕಟ್ಟಡದ ವಿನ್ಯಾಸ ಇಷ್ಟವಾಗಿಲ್ಲ ಎನ್ನಲಾಗಿದೆ.

‘ಚಿತ್ರಾವತಿ ಬಳಿ ಹೆದ್ದಾರಿಗೆ ಹೊಂದಿಕೊಂಡಂತೆ ಪೊಲೀಸ್‌ ಇಲಾಖೆಗೆ ಸೇರಿದ ಜಾಗವಿತ್ತು. ಅಲ್ಲಿ ಹೊಸ ಕಟ್ಟಡ ನಿರ್ಮಿಸಿದ್ದರೆ ಸಾರ್ವಜನಿಕರಿಗೆ, ಸಿಬ್ಬಂದಿ, ಅಧಿಕಾರಿಗಳಿಗೆ ಅನುಕೂಲವಾಗುತ್ತಿತ್ತು. ಅದನ್ನು ಬಿಟ್ಟು ರಸ್ತೆ ಬಿಟ್ಟು ಒಳ ಪ್ರದೇಶದಲ್ಲಿ ನಿರ್ಮಿಸಿದ್ದಾರೆ. ಎಸ್‌ಪಿ ಕಚೇರಿ ಎಂದರೆ ಅದಕ್ಕೆ ಅದರದೇ ಆದ ಭವ್ಯತೆ ಇರಬೇಕು.

ಬೇಕಿದ್ದರೆ ಕೋಲಾರ, ರಾಮನಗರ, ತುಮಕೂರು ಎಸ್‌ಪಿ ಕಚೇರಿಗಳನ್ನು ನೋಡಿ. ಆದರೆ ನಮ್ಮ ಕಚೇರಿ ಕಟ್ಟಡ ಸರ್ಕಾರಿ ಶಾಲೆ ಇದ್ದಂತೆ ಇದೆ. ಅದರ ವಿನ್ಯಾಸವಂತೂ ಇಷ್ಟವಾಗಲಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

* * 

ನೂತನ ಎಸ್‌ಪಿ ಕಚೇರಿ ಉದ್ಘಾಟನೆಗೆ ಸಿದ್ಧಗೊಂಡಿದೆ. ಮುಖ್ಯಮಂತ್ರಿ ಅವರು ಉದ್ಘಾಟನೆ ಕಾರ್ಯಕ್ರಮದ ದಿನಾಂಕ ನಿಗದಿ ಮಾಡಬೇಕಿದೆ
ಕಾರ್ತಿಕ್ ರೆಡ್ಡಿ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.