ADVERTISEMENT

ಹೂವಿಗೆ ಬೆಲೆ ಇಲ್ಲ, ಬೆಳೆದವರ ನೋವು ಕೇಳೋರಿಲ್ಲ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 9:26 IST
Last Updated 13 ಸೆಪ್ಟೆಂಬರ್ 2017, 9:26 IST
ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆ ಆವರಣದೊಳಗೆ ರೈತರು ಸುರಿದು ಹೋದ ಹೂವಿನ ರಾಶಿ
ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆ ಆವರಣದೊಳಗೆ ರೈತರು ಸುರಿದು ಹೋದ ಹೂವಿನ ರಾಶಿ   

ಚಿಕ್ಕಬಳ್ಳಾಪುರ: ಪಿತೃಪಕ್ಷ ಬಂದಿದ್ದೇ ನಗರದ ಹೂವಿನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಸಾಮಾನ್ಯ ದಿನಗಳಲ್ಲಿ ಭರಾಟೆಯ ವಹಿವಾಟು ಕಂಡುಬರುವ ಹೂವಿನ ಮಾರುಕಟ್ಟೆಯಲ್ಲಿ ಸದ್ಯ ಸೂತಕದ ಛಾಯೆ ಮನೆ ಮಾಡಿದೆ. ಬೆಳೆದು ತಂದ ಹೂವು ಕೇಳುವವರಿಲ್ಲದ ಆಕ್ರೋಶಕ್ಕೆ ರೈತರು ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ಹೂವು ಸುರಿದು ಹೋಗುತ್ತಿದ್ದಾರೆ.

ಇತ್ತೀಚೆಗಷ್ಟೇ ವರಮಹಾಲಕ್ಷ್ನೀ, ಗೌರಿ ಗಣೇಶ ಹಬ್ಬದಲ್ಲಿ ಹೂವಿನ ಮಾರಾಟದ ಭರಾಟೆ ಕಂಡು ಹಿಗ್ಗಿದ್ದ ರೈತರು ಇದೀಗ ‘ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ’ಎಂದು ನೋವಿನಲ್ಲಿದ್ದಾರೆ. ಪಿತೃಪಕ್ಷದಲ್ಲಿ ಯಾವುದೇ ದೇವತಾ ಕಾರ್ಯಗಳನ್ನಾಗಲಿ, ಮಂಗಲ ಕಾರ್ಯಗಳನ್ನಾಗಲಿ ಮಾಡುವುದು ಶ್ರೇಯಸ್ಕರ ಅಲ್ಲ ಎನ್ನುವ ಪ್ರಚಲಿತ ನಂಬಿಕೆ ಸದ್ಯ ಹೂವಿನ ಮಾರುಕಟ್ಟೆಯನ್ನು ಸ್ತಬ್ಧಗೊಳಿಸಿದೆ.

ಬರಗಾಲ, ಅಂತರ್ಜಲ ಕುಸಿತ ಸೇರಿದಂತೆ ಅನೇಕ ಸವಾಲುಗಳನ್ನು ಮೆಟ್ಟಿ ಹೂವು ಬೆಳೆದು ಮಾರುಕಟ್ಟೆಗೆ ತಂದವರ ನೋವು ಸದ್ಯ ಕೇಳುವವರಿಲ್ಲದಂತಾಗಿದೆ. ಹಾಕಿದ ಬಂಡವಾಳವಾದರೂ ವಾಪಸ್‌ ಬಂದರೆ ಸಾಕು ಎಂದು ಮಾರುಕಟ್ಟೆಗೆ ಬಂದವರು ಕೊಳ್ಳುವವರಿಲ್ಲದೆ, ಹೂವು ಚೆಲ್ಲಿ ಬರಿಗೈಯಲ್ಲಿ ಬಾಡಿದ ಮುಖದಿಂದ ಮನೆಯತ್ತ ಮರಳುತ್ತಿದ್ದಾರೆ.

ADVERTISEMENT

‘ಬಯಲು ಸೀಮೆಯ ಜಿಲ್ಲೆಯಲ್ಲಿ ನೀರಿನ ಅಭಾವವಿದ್ದರೂ ರೈತರು ಸೊಪ್ಪು, ತರಕಾರಿ, ಹಣ್ಣಿನ ಬೆಳೆಗಳಿಗೆ ಸರಿಸಾಟಿಯಾಗಿ ಹೂ ಬೆಳೆಯುತ್ತಾರೆ. ಪಿತೃಪಕ್ಷದಿಂದ ಹೂವು ಕೇಳುವವರಿಲ್ಲದಂತಾಗಿದೆ. ಹೂ ಬಿಡಿಸಿದ ಆಳಿನ ಕೂಲಿ ಸಹ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಹೀಗಾಗಿ ಅನೇಕರು ಹೂವು ಕೀಳದೆ ತೊಟಗಳಲ್ಲಿ ಹಾಗೇ ಬಿಟ್ಟಿದ್ದಾರೆ’ ಎಂದು ಮಂಡಿಕಲ್ಲು ರೈತ ಶ್ರೀನಿವಾಸ್‌ ಹೇಳಿದರು.

‘ವರಮಹಾಲಕ್ಷ್ನೀ ಹಬ್ಬ, ಗಣೇಶ ಚತುರ್ಥಿ ಸಮಯದಲ್ಲಿ ನೂರಾರು ರೂಪಾಯಿಗೆ ಕೆ.ಜಿಯಂತೆ ಮಾರಿದ ಹೂವನ್ನು ಇವತ್ತು ₨10ಗೆ ಕೊಳ್ಳುವವರಿಲ್ಲ. ಕಳೆದ ಮೂರು ವರ್ಷಗಳಿಂದ ಅಲ್ಪ ಪ್ರಮಾಣದ ನೀರಿನಲ್ಲಿ ಕೆಂಪು ಚೆಂಡು ಹೂ ಬೆಳೆಯುತ್ತಿದೆ. ಈಗ ಬಂದಿರುವ ಸ್ಥಿತಿ ನೋಡಿ ಮುಂದೆಂದೂ ಹೂಗಳನ್ನು ಬೆಳೆಯುವುದೇ ಬೇಡ ಅನ್ನಿಸುತ್ತಿದೆ’ಎಂದು ಬೇಸರ ವ್ಯಕ್ತಪಡಿಸಿದರು.

‘ಎಂಟು ಟ್ಯಾಂಕರ್‌ ನೀರು ಖರೀದಿಸಿ ಹಾಯಿಸಿ ಬಿಳಿ ಸೇವಂತಿಗೆ ಬೆಳೆದಿದ್ದೆ. ಸಾಲ ಮಾಡಿ ಔಷಧಿ ತಂದು ಗಿಡಗಳ ಉಪಚಾರ ಮಾಡಿದ್ದೆ. ಆದರೆ ಗಣೇಶ ಹಬ್ಬಕ್ಕೆ ಹೂ ಬರಲಿಲ್ಲ. ಈಗ ಗಿಡದ ತುಂಬಾ ಹೂ ಅರಳಿದೆ. ಮಾರುಕಟ್ಟೆಯಲ್ಲಿ ಖರೀದಿಸುವವರು ಇಲ್ಲ. ಹೀಗಾಗಿ ತೋಟದಲ್ಲೇ ಕಿತ್ತು ಹಾಕುತ್ತಿದ್ದೇವೆ. ಸದ್ಯ ರೈತರಿಗೆ ಹೂವಿನ ಬೆಳೆಗೆ ಹಾಕಿದ ಬಂಡವಾಳ ಕೂಡ ವಾಪಸ್‌ ಬರುತ್ತಿಲ್ಲ’ ಎಂದರು.

‘ನಮ್ಮ ಮಾರುಕಟ್ಟೆಗೆ ಚಿಕ್ಕಬಳ್ಳಾಪುರ, ಕೋಲಾರ, ಮುಳಬಾಗಿಲು, ಮಾಲೂರು, ಚಿಂತಾಮಣಿ, ಬಾಗೇಪಲ್ಲಿ ಕಡೆಗಳಿಂದ ನಿತ್ಯ ಸುಮಾರು 30 ರಿಂದ 40 ಟನ್‌ನಷ್ಟು ಹೂವು ಬರುತ್ತದೆ. ಸದ್ಯ ಬೆಲೆ ಕುಸಿತದಿಂದಾಗಿ ಅದರ ಪ್ರಮಾಣ 5 ರಿಂದ 10 ಟನ್‌ನಷ್ಟು ಕೆಳಗೆ ಬಂದಿದೆ. ಇಲ್ಲಿಂದ ಹೈದರಾಬಾದ್‌, ಮುಂಬೈ, ಗೋವಾ, ಚೆನ್ನೈ, ಬೆಂಗಳೂರು, ಮಂಗಳೂರು, ಕಲಬುರ್ಗಿ, ದಾವಣಗೆರೆ ಮುಂತಾದ ಕಡೆಗೆ ಹೂ ನಿತ್ಯ ರಫ್ತು ಮಾಡಲಾಗುತ್ತದೆ. ಸದ್ಯ ಹೂವಿಗೆ ಮಾರುಕಟ್ಟೆ ಇಲ್ಲದಂತಾಗಿದೆ’ ಎನ್ನುತ್ತಾರೆ ಹೂವಿನ ವರ್ತಕ ನಾರಾಯಣಸ್ವಾಮಿ.

‘ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಹೂವಿನ ಇಳುವರಿ ಹೆಚ್ಚಿದೆ. ಆದರೆ ಸದ್ಯ ಪಿತೃಪಕ್ಷ ಇರುವ ಕಾರಣಕ್ಕೆ ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಜನರೂ ಹೂವು ಖರೀದಿಸುತ್ತಿಲ್ಲ. ಸದ್ಯ ಕನಿಷ್ಠ ಪ್ರಮಾಣದಲ್ಲಿ ಮಾತ್ರ ಗುಣಮಟ್ಟದ ಹೂವು ಅಲ್ಪ ಬೆಲೆಗೆ ಮಾರಾಟವಾಗುತ್ತಿದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.