ADVERTISEMENT

ಹೈನುಗಾರಿಕೆ ಪ್ರಗತಿಗೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:30 IST
Last Updated 8 ಫೆಬ್ರುವರಿ 2017, 6:30 IST

ಗುಡಿಬಂಡೆ: ರೈತ ಕುಟುಂಬಗಳು ಹೈನುಗಾರಿಕೆಯನ್ನು ಮುಖ್ಯ ಉಪ ಕಸಬನ್ನಾಗಿ ಪರಿಗಣಿಸಿ, ಆ ಮೂಲಕ ಹೈನುಗಾರಿಕೆಯಿಂದ ಆರ್ಥಿಕ ಸಬಲೀಕರಣ ಕಂಡುಕೊಂಡಿದ್ದಾರೆ. ಇದನ್ನರಿತು ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿ ದೇಸಿಯ ಗೋ ತಳಿ ಸಂರಕ್ಷಣೆಗೆ ಸಹಕರಿಸಬೇಕು ಎಂದು ಜಿಲ್ಲಾ ಎಸ್.ಸಿ/ಎಸ್.ಟಿ ಜಾಗೃತಿ ಸಮಿತಿ ಸದಸ್ಯ ಉನ್ನತಿ ವಿಶ್ವನಾಥ್ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಸಹಯೋಗದಲ್ಲಿ ಆಯೋಜಿಸಿದ್ದ ಹೈನುಗಾರಿಕಾ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎಸ್.ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲದೆ ಪಟ್ಟಣಗಳಲ್ಲೂ ರೈತ ಮಹಿಳೆಯರು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಸ್ಥಳಿಯ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ಹಲವು ವರ್ಷಗಳಿಂದ ಹಮ್ಮಿಕೊಳ್ಳುತ್ತಿರುವ ಸಾಮೂಹಿಕ ವಿವಾಹಗಳಲ್ಲಿ ವಧು ವರರಿಗೆ ಸೀಮೆ ಹಸುವನ್ನು ವಿತರಿಸಿ, ಅವರ ಕುಟುಂಬದ ಆರ್ಥಿಕ ನೆರವಿಗೆ ಮತ್ತು ಗೋ ಸಂತತಿಯ ಉಳಿವಿಗೂ ಮುಂದಾಗಿರುವುದು ಉತ್ತಮ ಸಂಗತಿ ಎಂದರು.

ಕೋಚಿಮುಲ್ ಪಶು ವೈದ್ಯ ಗಜರಾಜ್ ‘ಲಾಭದಾಯಕ ಹೈನುಗಾರಿಕೆ’ ಎಂಬ ವಿಚಾರದ ಕುರಿತಾಗಿ ಮಾತನಾಡಿದರು. ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪಿ.ರಾಧಕೃಷ್ಣರಾವ್ ಮಾತಡಿದರು.

ತಾಲ್ಲೂಕಿನ ವಿವಿಧ ಪ್ರಗತಿಪರ ಸಣ್ಣ, ಅತಿ ಸಣ್ಣ ರೈತ ಕುಟುಂಬದ ಮಹಿಳೆಯರಿಗೆ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರೋತ್ಸಾಹದಾಯಕ ನೆರವಿನ ಆದೇಶ ಪ್ರತಿಗಳನ್ನು ವಿತರಿಸಿದರು.

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‍ನ ಪ್ರಬಂಧಕ ಎಂ.ಎಸ್.ರಮೇಶ್, ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಅಧಿಕಾರಿ ಯಶೋಧರ್ ಕುದ್ಮಾರ್, ತಾಲ್ಲೂಕು ಮೇಲ್ವಿಚಾರಕ ಪ್ರದೀಪ್, ಕೃಷಿ ಅಧಿಕಾರಿ ಗುರು ಪ್ರಸಾದ್ ಸೇರಿದಂತೆ  ತಾಲ್ಲೂಕಿನ 216 ಸ್ವ ಸಹಾಯ ಸಂಘದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.