ADVERTISEMENT

‘ಹೊಗೆ ಮುಕ್ತ’ಗೊಳ್ಳುವ ಹಾದಿಯಲ್ಲಿ ಪಂಚಾಯಿತಿ

ಕಲ್ಲಿನಾಯಕಹಳ್ಳಿ: ಸ್ವಂತ ಸಂಪನ್ಮೂಲದಿಂದ 500 ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ

ಈರಪ್ಪ ಹಳಕಟ್ಟಿ
Published 24 ಮಾರ್ಚ್ 2017, 4:58 IST
Last Updated 24 ಮಾರ್ಚ್ 2017, 4:58 IST
ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ
ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ   

ಚಿಕ್ಕಬಳ್ಳಾಪುರ:  ಗೌರಿಬಿದನೂರು ತಾಲ್ಲೂಕಿನ ಕಲ್ಲಿನಾಯಕಹಳ್ಳಿ ಗ್ರಾಮ ಪಂಚಾಯಿತಿಯು ತಾನು ಸಂಗ್ರಹಿಸಿದ ಸ್ಥಳೀಯ ಸಂಪನ್ಮೂಲದಿಂದ ತನ್ನ ವ್ಯಾಪ್ತಿಯ 12 ಗ್ರಾಮಗಳ 500 ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ವಿತರಿಸಲು ಮುಂದಾಗಿದೆ. ಈ ಮೂಲಕ ಪಂಚಾಯಿತಿಯು ಹೊಗೆ ಮುಕ್ತಗೊಳ್ಳುವ ಹಾದಿಯಲ್ಲಿದೆ.

ಕಲ್ಲಿನಾಯಕಹಳ್ಳಿಯಲ್ಲಿ ಶುಕ್ರವಾರ (ಮಾ. 23) ಉಚಿತ ಎಲ್‌ಪಿಜಿ ಸಂಪರ್ಕ ವಿತರಣೆ ಕಾರ್ಯಕ್ರಮ ನಡೆಯಲಿದೆ. ‘ರಾಜ್ಯದಲ್ಲಿ ತನ್ನದೆ ಸಂಪನ್ಮೂಲದಲ್ಲಿ ಹೊಗೆ ಮುಕ್ತ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಹೊರಟಿರುವ ಮೊದಲ ಗ್ರಾಮ ಪಂಚಾಯಿತಿ ನಮ್ಮದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಿ.ಪಿ.ಅಶ್ವತ್ಥನಾರಾಯಣ ಗೌಡ ಹೆಮ್ಮೆಯಿಂದ ಹೇಳಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಷಿಕವಾಗಿ ಆಸ್ತಿ, ನಿವೇಶನ ಮತ್ತು ನೀರಿನ ಕರ ₹ 10 ಲಕ್ಷ ಸಂಗ್ರಹವಾಗುತ್ತದೆ. ಜತೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆಲ ಬೀಜ ಉತ್ಪಾದನಾ ಕಂಪೆನಿಗಳು ಅನೇಕ ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ತೆರಿಗೆಯನ್ನು ಈ ಬಾರಿ ವಸೂಲಿ ಮಾಡಲಾಗಿದೆ. ಅದರಿಂದಾಗಿ ಈ ವರ್ಷ ₹ 20 ಲಕ್ಷಕ್ಕೂ ಅಧಿಕ ಕಂದಾಯ ಸಂಗ್ರಹವಾಗಿತ್ತು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ ಬಾಬು ತಿಳಿಸಿದರು.

ಆರ್ಥಿಕ ವರ್ಷದಲ್ಲಿ ಸಂಗ್ರಹವಾದ ಈ ದೊಡ್ಡ ಮೊತ್ತದ ಸಂಪನ್ಮೂಲವನ್ನು ಹೇಗೆ ವಿನಿಯೋಗಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸುವ ವೇಳೆ ಹೊಳೆದದ್ದೇ ಉಚಿತ ಎಲ್‌ಪಿಜಿ ವಿತರಣೆ ಚಿಂತನೆ. ಅದಕ್ಕಾಗಿ ಕಳೆದ ಆರು ತಿಂಗಳಿಂದ ಪಂಚಾಯಿತಿ ವ್ಯಾಪ್ತಿಯ ಸದ್ದಿಲ್ಲದೆ ಸಿದ್ಧತೆ ನಡೆಸಿತ್ತು.

ಪಂಚಾಯಿತಿ ಸಿಬ್ಬಂದಿ ಪ್ರತಿ ಗ್ರಾಮಕ್ಕೆ ಹೋಗಿ ಸ್ಥಳೀಯ ಸದಸ್ಯರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಅಡುಗೆ ಮಾಡಲು ಸೌದೆ, ಇದ್ದಿಲು ಮತ್ತು ಸೀಮೆಎಣ್ಣೆ ಸ್ಟೌ ಬಳಸುವ ಕುಟುಂಬಗಳ ಮಾಹಿತಿ ಕಲೆ ಹಾಕಿದ್ದರು.

ಅಂತಿಮವಾಗಿ ಮಾಹಿತಿ ಕ್ರೋಡೀಕರಿಸಿದಾಗ ಪಂಚಾಯಿತಿ ವ್ಯಾಪ್ತಿಯಲ್ಲಿ 500 ಕುಟುಂಬಗಳು ಅಡುಗೆ ಮಾಡಲು ಸಿಲಿಂಡರ್‌ ಬಳಸುತ್ತಿಲ್ಲ ಎನ್ನುವ ಅಂಶ ತಿಳಿದು ಬಂದಿತ್ತು. ಬಳಿಕ ಎಲ್‌ಪಿಜಿ  ಸಂಪರ್ಕ ಪೂರೈಸುವ ‘ಇಂಡಿಯನ್‌ ಆಯಿಲ್‌’ ಕಂಪೆನಿ ಜತೆ ಪಂಚಾಯಿತಿಯವರು ಚೌಕಾಸಿ ನಡೆಸಿ ಒಂದು ಸಂಪರ್ಕಕ್ಕೆ ₹ 4,000ದಂತೆ ಖರೀದಿ ವ್ಯವಹಾರ ಕುದುರಿಸಿದ್ದರು’ ಎಂದು ಬಿ.ಪಿ.ಅಶ್ವತ್ಥನಾರಾಯಣ ಗೌಡ ತಿಳಿಸಿದರು.

‘ಪ್ರಸ್ತುತ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಸಂಪರ್ಕವೊಂದನ್ನು ಖರೀದಿಸಬೇಕಾದರೆ ಕನಿಷ್ಠ ₹ 5,500 ಖರ್ಚಾಗುತ್ತದೆ. ಆರ್ಥಿಕವಾಗಿ ಕೆಳವರ್ಗದ ಜನರು ಇಷ್ಟೊಂದು ಮೊತ್ತ ಕೊಟ್ಟು ಖರೀದಿಸಲು ಮುಂದೆ ಬರುವುದಿಲ್ಲ. ಬದಲು ಸೌದೆ ಒಲೆಯಲ್ಲಿಯೇ ಜೀವನ ನಡೆಸುತ್ತಾರೆ. ಆದ್ದರಿಂದ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಕುಟುಂಬವನ್ನು ಹೊಗೆ ಮುಕ್ತಗೊಳಿಸಲೇ ಬೇಕು ಎನ್ನುವ ಸಂಕಲ್ಪದಿಂದ ಇಂತಹದೊಂದು ನಿರ್ಧಾರಕ್ಕೆ ಬಂದೆವು’ ಎಂದು ಅವರು ಹೇಳಿದರು.

‘8 ತಿಂಗಳ ಹಿಂದೆ ಪ್ರಾಯೋಗಿಕ ಪರೀಕ್ಷೆಗಾಗಿ ಕಲ್ಲಿನಾಯಕನಹಳ್ಳಿಯಲ್ಲಿ ಎಲ್‌ಪಿಜಿ ಸಂಪರ್ಕವಿಲ್ಲದ ಪ್ರತಿ ಮನೆಗೂ ಉಚಿತವಾಗಿ ಸಂಪರ್ಕ ನೀಡಿದ್ದೆವು. ಆ ಬಳಿಕ ಜನರಲ್ಲಿ ಎಲ್‌ಪಿಜಿ ಬಳಕೆ ಕುರಿತು ಸ್ಫೂರ್ತಿಯ ಜತೆಗೆ ಪಂಚಾಯಿತಿಗೆ ಅದರ ಬೇಡಿಕೆ ಹೆಚ್ಚಿತು.

ಹೀಗಾಗಿ ಪ್ರತಿಯೊಂದು ಗ್ರಾಮದಲ್ಲಿಯೂ ವಿತರಿಸುವ ತೀರ್ಮಾನಕ್ಕೆ ಬರಲಾಯಿತು. ಈ ನಮ್ಮ ನಿರ್ಧಾರ ನೆರೆ ಹೊರೆಯ ಗ್ರಾಮ ಪಂಚಾಯಿತಿಯವರ ಗಮನ ಸೆಳೆದಿದ್ದು, ಈಗಾಗಲೇ ಕೆಲ ಪಂಚಾಯಿತಿಯವರು ಇದು ಹೇಗೆ ಸಾಧ್ಯವಾಯಿತು ಎನ್ನುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ’ ಎಂದರು.

ಇದೇ ತಾಲ್ಲೂಕಿನ ತಾಲ್ಲೂಕಿನ ಕಾದಲವೇಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಚಕುರಹಳ್ಳಿ ಗ್ರಾಮ 2015ರಲ್ಲಿ ದೇಶದ ಪ್ರಥಮ ಹೊಗೆಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

*
ಅನೇಕ ಪಂಚಾಯಿತಿಗಳು ವಿವಿಧ ಅನುದಾನ, ಕಂಪೆನಿಗಳ ಪ್ರಾಯೋಜಕತ್ವದಲ್ಲಿ ಉಚಿತ ಎಲ್‌ಪಿಜಿ ಸಂಪರ್ಕ ವಿತರಿಸಿರಬಹುದು. ಪಂಚಾಯಿತಿಯೊಂದು ತನ್ನದೆ ಸಂಪನ್ಮೂಲದಲ್ಲಿ ಈ ರೀತಿ ನೀಡುತ್ತಿರುವುದು ಇದೇ ಮೊದಲು.
-ಬಿ.ಪಿ.ಅಶ್ವತ್ಥನಾರಾಯಣ ಗೌಡ,
ಕಲ್ಲಿನಾಯಕಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.