ADVERTISEMENT

15 ವರ್ಷಗಳಿಂದ ಬಾಗಿಲು ತೆರೆಯದ ಶೈತ್ಯಾಗಾರ!

ಈರಪ್ಪ ಹಳಕಟ್ಟಿ
Published 24 ಏಪ್ರಿಲ್ 2017, 5:33 IST
Last Updated 24 ಏಪ್ರಿಲ್ 2017, 5:33 IST
ಚಿಕ್ಕಬಳ್ಳಾಪುರದ ಎಪಿಎಂಸಿ ಪ್ರಾಂಗಣದಲ್ಲಿ ಕಳೆದ ಒಂದೂವರೆ ದಶಕದಿಂದ ಬಾಗಿಲು ಮುಚ್ಚಿರುವ ಶೈತ್ಯಾಗಾರ
ಚಿಕ್ಕಬಳ್ಳಾಪುರದ ಎಪಿಎಂಸಿ ಪ್ರಾಂಗಣದಲ್ಲಿ ಕಳೆದ ಒಂದೂವರೆ ದಶಕದಿಂದ ಬಾಗಿಲು ಮುಚ್ಚಿರುವ ಶೈತ್ಯಾಗಾರ   

ಚಿಕ್ಕಬಳ್ಳಾಪುರ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ನಿರ್ಮಿಸಿರುವ ಶೈತ್ಯಾಗಾರ ಉದ್ಘಾಟನೆಗೊಂಡು 15 ವರ್ಷಗಳೇ ಕಳೆದರೂ ಒಂದೇ ಒಂದು ದಿನ ಕೂಡ ರೈತರ ಉಪಯೋಗಕ್ಕೆ ಬಳಕೆಯಾಗದೆ ದೂಳು ತಿನ್ನುತ್ತಿದ್ದು, ಯಂತ್ರೋಪಕರಣಗಳೆಲ್ಲ ತುಕ್ಕು ಹಿಡಿದಿವೆ.

ಚಿಕ್ಕಬಳ್ಳಾಪುರ ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದ ಸಂದರ್ಭದಲ್ಲಿ 2002 ಮೇ 4 ರಂದು ಅಂದಿನ ಕೃಷಿ ಸಚಿವ ಬಿ.ಎಸ್.ಪಾಟೀಲ್ ಸಾಸನೂರು ಅವರು ಈ ಶೈತ್ಯಾಗಾರವನ್ನು ಉದ್ಘಾಟಿಸಿದ್ದರು.

‘ವರ್ತಕರಿಗೆ ಬಾಡಿಗೆ ನೀಡಲು ನಿರ್ಮಿಸಿದ 17 ಮಳಿಗೆಗಳನ್ನು ಸೇರಿಸಿ ಅವೈಜ್ಞಾನಿಕವಾಗಿ ತರಾತುರಿಯಲ್ಲಿ ಶೈತ್ಯಾಗಾರ ನಿರ್ಮಿಸಲಾಗಿದೆ. ಇದರಿಂದ ರೈತರಿಗೆ ಉಪಯೋಗವಾಗಲಿ ಎನ್ನುವುದಕ್ಕಿಂತಲೂ ಎಪಿಎಂಸಿ ಅಧಿಕಾರಿಗಳು ದುಡ್ಡು ಲಪಟಾಯಿಸಲು ಈ ಕೆಲಸ ಮಾಡಿದ್ದಾರೆ. ತಮ್ಮ ಕೆಲಸ ಮುಗಿಯುತ್ತಿದ್ದಂತೆ ಶೈತ್ಯಾಗಾರಕ್ಕೆ ಬೀಗ ಜಡಿದು ಕೈತೊಳೆದುಕೊಂಡಿದ್ದಾರೆ. ಈವರೆಗೆ ಬಂದ ಯಾವೊಬ್ಬ ಅಧಿಕಾರಿ ಕೂಡ ಶೈತ್ಯಾಗಾರದ ಗೊಡವೆಗೆ ಹೋಗುವ ಧೈರ್ಯ ತೋರಿಲ್ಲ. ಇದರಿಂದಾಗಿ ಕೋಟಿಗಟ್ಟಲೇ ಆದಾಯ ನಷ್ಟವಾಗಿದೆ’ ಎನ್ನುವುದು ಎಪಿಎಂಸಿಯ ಅನೇಕ ನಿರ್ದೇಶಕರ ಆರೋಪ.

ADVERTISEMENT

‘ಅಧಿಕಾರಿಗಳು ಕೋಟ್ಯಂತರ ಮೌಲ್ಯದ ಯಂತ್ರೋಪಕರಣ ಖರೀದಿ ಮತ್ತು ಗುತ್ತಿಗೆದಾರರಿಂದ ಕಮಿಷನ್‌ಗಳ ಆಸೆಯಿಂದ ಶೈತ್ಯಾಗಾರ ಯೋಜನೆ ಕೆಲಸ ಕೈಗೆತ್ತಿಕೊಂಡಿದ್ದಾರೆ. ಗುತ್ತಿಗೆದಾರ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದಾಗಲೂ ಅಧಿಕಾರಿಗಳು ಪ್ರಶ್ನಿಸುವ ಗೋಜಿಗೆ ಹೋಗಿಲ್ಲ. ಈವರೆಗೆ ಶೀತಲಗೃಹ ರೈತರ ಬಳಕೆಗೆ ದೊರೆತಿಲ್ಲ. ಗುತ್ತಿಗೆ ನೀಡುವ ಉದ್ದೇಶದಿಂದ 3 ಬಾರಿ ಟೆಂಡರ್‌ ಕರೆದರೂ ಯಾರೊಬ್ಬರು ಮುಂದೆ ಬಂದಿಲ್ಲ’ ಎಂದು ಎಪಿಎಂಸಿ ಅಧ್ಯಕ್ಷ ಎಚ್‌.ವಿ.ಗೋವಿಂದಸ್ವಾಮಿ ತಿಳಿಸಿದರು.

‘ಯಂತ್ರೋಪಕರಣಗಳು ಹಾಳಾಗಿರುವುದರಿಂದ ಮಾರುಕಟ್ಟೆಯಲ್ಲಿರುವ ಶೈತ್ಯಾಗಾರ ವ್ಯವಸ್ಥೆಯನ್ನು ತೆರವುಗೊಳಿಸಲು ಉದ್ದೇಶಿಸಲಾಗಿದೆ. ಹೀಗೆ ಮಾಡುವುದರಿಂದ 17 ಮಳಿಗೆಗಳನ್ನು ವರ್ತಕರಿಗೆ ಬಾಡಿಗೆ ನೀಡಬಹುದು. ಅದರಿಂದ ತಿಂಗಳಿಗೆ ಲಕ್ಷಾಂತರ ಬಾಡಿಗೆ ಆದಾಯ ಬರುತ್ತದೆ. ಈ ವಿಚಾರದಲ್ಲಿ ಮುಂದುವರಿಯಲು ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರ ಉತ್ತರವನ್ನು ಎದುರು ನೋಡುತ್ತಿದ್ದೇವೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಸಿ.ರಾಮದಾಸ್.

ನಡೆಯಲೇ ಇಲ್ಲ ಲೋಕಾಯುಕ್ತ ತನಿಖೆ: ‘ಶೈತ್ಯಾಗಾರ ನಿರ್ಮಾಣದಲ್ಲಿ ನಡೆದಿರುವ ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು 2012ರಲ್ಲಿ ಅಸ್ತಿತ್ವಕ್ಕೆ ಬಂದ ಎಪಿಎಂಸಿ ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿಯೇ ನಿರ್ಣಯ ಕೈಗೊಳ್ಳಲಾಗುತ್ತದೆ. ಸ್ವತಃ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರೇ ಅಧ್ಯಕ್ಷರು ಸೇರಿದಂತೆ ಅನೇಕ ನಿರ್ದೇಶಕರಿಗೆ ಕರೆ ಮಾಡಿ ಲೋಕಾಯುಕ್ತ ತನಿಖೆಗೆ ಶಿಫಾರಸು ಮಾಡದಂತೆ ಒತ್ತಡ ಹಾಕಿದರು. ಅಧಿಕಾರಿಗಳು ಕೂಡ ನಿರ್ದೇಶಕರಿಗೆ ತನಿಖೆ ಬೇಡ ಎಂದು ದುಂಬಾಲು ಬಿದ್ದರು. ಹೀಗಾಗಿ ಆ ನಿರ್ಣಯ ಹಾಗೇ ನನೆಗುದಿಗೆ ಬಿತ್ತು’ ಎಂದು ಎಪಿಎಂಸಿ ನಿರ್ದೇಶಕ ಕೆ.ವಿ.ಶ್ರೀನಿವಾಸ್ ರೆಡ್ಡಿ ತಿಳಿಸಿದರು.

‘ರೈತರ ಅನುಕೂಲಕ್ಕಾಗಿ ಎಪಿಎಂಸಿಗಳಲ್ಲಿ ಶೈತ್ಯಾಗಾರ ನಿರ್ಮಿಸಿ ಎಂದು ಆಗಾಗ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಆದರೆ ಇಲ್ಲಿ ರೈತರಿಗೆ ಸೌಲಭ್ಯ ದೊರಕಿಸಿ ಕೊಡಬೇಕಾದ ಅಧಿಕಾರಿಗಳೇ ಶೈತ್ಯಾಗಾರದ ಹೆಸರಿನಲ್ಲಿ ಲೂಟಿ ಹೊಡೆಯಲು ವ್ಯವಸ್ಥಿತ ಹುನ್ನಾರ ನಡೆಸಿ, ದ್ರೋಹ ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು’ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಒತ್ತಾಯಿಸಿದರು.

₹ 2 ಕೋಟಿ ಆದಾಯ ನಷ್ಟ
‘₹ 80 ಲಕ್ಷ ಖರ್ಚು ಮಾಡಿ ಗೋದಾಮುಗಳನ್ನು ಶೈತ್ಯಾಗಾರವಾಗಿ ಪರಿವರ್ತಿಸಲಾಗಿದೆ. ಸದ್ಯ ಒಂದು ಗೋದಾಮಿನ ಬಾಡಿಗೆ ಪ್ರತಿ ತಿಂಗಳಿಗೆ ₹ 10 ಸಾವಿರ. ಈವರೆಗೆ ಸುಮಾರು ₹ 1.80 ಕೋಟಿ ಬಾಡಿಗೆ ಆದಾಯ ನಷ್ಟವಾಗಿದೆ. ಇನ್ನು ಶೈತ್ಯಾಗಾರ ನಿರ್ಮಾಣಕ್ಕೆ ಮಾಡಿದ ಖರ್ಚು ಲೆಕ್ಕ ಹಾಕಿದರೆ ಎಪಿಎಂಸಿಗೆ ₹2 ಕೋಟಿಗಿಂತಲೂ ಅಧಿಕ ನಷ್ಟವಾಗಿದೆ. ಇಷ್ಟಾದರೂ ಅಧಿಕಾರಿಗಳು ಮೌನವಾಗಿದ್ದುಕೊಂಡು ದಿನದೂಡುತ್ತ ಬಂದಿದ್ದಾರೆ’ ಎಂದು ಗೋವಿಂದಸ್ವಾಮಿ ತಿಳಿಸಿದರು.

ಮೊದಲ ದಿನವೇ ತಣ್ಣಗಾಗಿಲ್ಲ!
‘ಶೈತ್ಯಾಗಾರಕ್ಕೆ ಅಳವಡಿಸಿದ ಯಂತ್ರೋಪಕರಣಗಳೆಲ್ಲ ನಕಲಿ. ಸೋಜಿಗದ ಸಂಗತಿ ಎಂದರೆ ಅದ್ಧೂರಿಯಾಗಿ ಹಮ್ಮಿಕೊಂಡಿದ್ದ ಉದ್ಘಾಟನೆ ದಿನವೇ ಆ ಶೀತಲಗೃಹ ತಣ್ಣಗೆ ಆಗುವ ಸ್ಥಿತಿಯಲ್ಲಿ ಇರಲಿಲ್ಲ. ಕೃಷಿ ಸಚಿವರು ಉದ್ಘಾಟನೆಗೆ ಬಂದ ವೇಳೆ ಅದನ್ನು ಕೃತಕವಾಗಿ ತಂಪು ಮಾಡುವ ಕೆಲಸವನ್ನು ವ್ಯಕ್ತಿಯೊಬ್ಬನಿಗೆ ₹ 11 ಸಾವಿರ ನೀಡಿ ವಹಿಸಲಾಗಿತ್ತು. ಆತ ವ್ಯಾನ್‌ನಲ್ಲಿ ಗ್ಯಾಸ್‌ ತಂದು ತಾತ್ಕಾಲಿಕವಾಗಿ ತಂಪು ಮಾಡಿ ಹೋಗಿದ್ದ. ಅಂದಿನಿಂದ ಒಂದೇ ಒಂದು ದಿನ ಕೂಡ ಶೈತ್ಯಾಗಾರ ತಂಪಾಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಎಪಿಎಂಸಿ ನಿರ್ದೇಶಕರೊಬ್ಬರು ತಿಳಿಸಿದರು.

ಶೈತ್ಯಾಗಾರವನ್ನು ಗೋದಾಮು ಆಗಿ ಪರಿವರ್ತಿಸಿ ಬಾಡಿಗೆ ನೀಡಲು ಅನುಮತಿ ಕೊಡಿ ಎಂದು ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರಿಗೆ ಒಂದು ತಿಂಗಳ ಹಿಂದೆ ಪ್ರಸ್ತಾವ ಕಳುಹಿಸಲಾಗಿದೆ.
-ಎಚ್‌.ವಿ.ಗೋವಿಂದಸ್ವಾಮಿ, ಎಪಿಎಂಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.