ADVERTISEMENT

ನೃತ್ಯ ಕಲೆ ದೇಶದ ಸಂಸ್ಕೃತಿ ಪ್ರತೀಕ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 9:16 IST
Last Updated 20 ಫೆಬ್ರುವರಿ 2018, 9:16 IST

ಗೌರಿಬಿದನೂರು: ದೇಶದ ಸಂಸ್ಕೃತಿ ಪ್ರತಿಬಿಂಬಿಸುವ ಪ್ರಾಚೀನ ನೃತ್ಯ ಕಲೆಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಆಚಾರ್ಯ ಮಹಿಳಾ ಕಾಲೇಜು ಪ್ರಾಂಶುಪಾಲರಾದ ನಾಗರತ್ನಮ್ಮ ತಿಳಿಸಿದರು. ಪಟ್ಟಣದ ಎಚ್.ಎನ್. ಕಲಾಭವನದಲ್ಲಿ ದಿಕ್ಸೂಚಿ ನಾಟ್ಯಾಲಯ ವತಿಯಿಂದ ಆಯೋಜಿಸಿದ್ದ ಸ್ವರ ನೃತ್ಯಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸುಮಾರು 5 ಸಾವಿರ ವರ್ಷಗಳ ಹಿಂದೆಯೇ ನೃತ್ಯಕ್ಕೆ ಆದ್ಯತೆ ಕಲ್ಪಿಸಲಾಗಿತ್ತು. ಪ್ರಸಿದ್ಧ ದೇವಾಲಯಗಳ ಗೋಡೆಗಳ ಮೇಲೆ ಕೆತ್ತಿರುವ ನೃತ್ಯ ಕಲೆಗಳು ಇದಕ್ಕೆ ಸಾಕ್ಷಿಯಾಗಿವೆ. ಆಧುನಿಕತೆಯ ಪ್ರಭಾವದಲ್ಲಿ ಯುವಕರು ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇದರಿಂದಾಗಿ ಸಾಂಪ್ರದಾಯಿಕ ಕಲೆಗಳು ನಶಿಸುತ್ತಿರುವುದು ಆತಂಕದ ಸಂಗತಿ’ ಎಂದು ವಿಷಾದನೀಯ ವ್ಯಕ್ತಪಡಿಸಿದರು.

‘ಬೇಲೂರು, ಹಳೆಬೀಡು, ಸೋಮನಾಥಪುರ ದೇವಾಲಯಗಳಲ್ಲಿ ವಿಷ್ಣುವರ್ಧನನ ಪತ್ನಿ ಶಾಂತಲೆಯ ನೃತ್ಯ ಭಂಗಿಗಳನ್ನು ಶಿಲೆಗಳನ್ನು ಕಾಣಬಹುದಾಗಿದೆ. ಕೃಷ್ಣದೇವರಾಯರ ಪತ್ನಿ ಚಿನ್ನಾದೇವಿಯೂ ನೃತ್ಯ ಪಟುವಾಗಿದ್ದರು. ಪಾಶ್ಚಿಮಾತ್ಯ ಪ್ರಭಾವದಿಂದ ಸಂಗೀತ, ನೃತ್ಯ ಮರೆಯಾಗುತ್ತಿರುವುದು ದುರದೃಷ್ಟಕರ’ ಎಂದು ತಿಳಿಸಿದರು.

ADVERTISEMENT

ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಡಿ. ಗಣೇಶ್ ಮಾತನಾಡಿ, ಮಾನಸಿಕ ನೆಮ್ಮದಿಗೆ ಸಂಗೀತ ನೃತ್ಯಗಳು ಸಹಕಾರಿ. ಉತ್ತಮ ಸಮಾಜ ನಿರ್ಮಿಸಲು ಸಾಂಪ್ರದಾಯಿಕ ಕಲೆಗಳು ಅವಶ್ಯವಿರುವುದರಿಂದ ನೃತ್ಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕಿದೆ ಎಂದು ತಿಳಿಸಿದರು.

ಶ್ವೇತಾ ಅರುಣ್ ಅವರ ಕಥಕ್ ನೃತ್ಯಗಳು, ಮಾಲಿನಿ ಅಗ್ರಹಾರ್ ಅವರ ಭರತ ನಾಟ್ಯ, ದಿಕ್ಸೂಚಿ ನಾಟ್ಯಾಲಯದ ಮಕ್ಕಳಿಂದ ನೃತ್ಯಗಳು, ಕೋಟೆ ಶಾಲೆಯ ಮಕ್ಕಳಿಂದ ಜನಪದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನೃತ್ಯ ಶಿಕ್ಷಕಿ ದಿವ್ಯಾ ಶಿವನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಡಯಟ್ ಉಪನ್ಯಾಸಕರಾದ ಬಯ್ಯಪರೆಡ್ಡಿ, ಚಂದ್ರಕಲಾ, ಪ್ರಿಯಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.