ADVERTISEMENT

ಉತ್ತಮ ಕಲಿಕೆಗೆ ಉತ್ತೇಜನ ನೀಡಿ

ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಸಂಸದ ವೀರಪ್ಪ ಮೊಯಿಲಿ ಅವರಿಂದ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 13:49 IST
Last Updated 7 ಜುಲೈ 2018, 13:49 IST
ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಸಂಸದ ವೀರಪ್ಪ ಮೊಯಿಲಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಸಂಸದ ವೀರಪ್ಪ ಮೊಯಿಲಿ ಅವರು ಶಂಕುಸ್ಥಾಪನೆ ನೆರವೇರಿಸಿದರು.   

ಬಾಗೇಪಲ್ಲಿ: ‘ಶಿಕ್ಷಣ ಎಲ್ಲರ ಹಕ್ಕು. ವಿದ್ಯಾರ್ಥಿಗಳು ಶ್ರದ್ಧೆಯಿಟ್ಟು, ಆಸಕ್ತಿಯಿಂದ ವ್ಯಾಸಂಗ ಮಾಡಬೇಕು. ಕೀಳರಿಮೆ ಭಾವನೆ ತೊಡೆದು ಚೆನ್ನಾಗಿ ಓದಬೇಕು. ನಿರಂತರ ಕಲಿಕೆಯಿಂದ ಉತ್ತಮ ಯಶಸ್ಸು ಸಿಗಲಿದೆ. ಪೋಷಕರು, ಶಿಕ್ಷಕರು ಸಹ ವಿದ್ಯಾರ್ಥಿಗಳ ಉತ್ತಮ ಕಲಿಕೆಗೆ ಉತ್ತೇಜನ ನೀಡಬೇಕು’ ಎಂದು ಸಂಸದ ಎಂ.ವೀರಪ್ಪಮೊಯಿಲಿ ತಿಳಿಸಿದರು.

ಪಟ್ಟಣದ ಹೊರವಲಯದ ಅಗ್ನಿಶಾಮಕ ಠಾಣೆಯ ಹಿಂಭಾಗದ ಬೆಟ್ಟದ ಮೇಲೆ ಸುಮಾರು ₨11.52 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿದ ಅವರು, ಬಳಿಕ ತಾಲ್ಲೂಕಿನ ಪೂಲವಾರಪಲ್ಲಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲಾವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಉತ್ತಮ ಕಾರ್ಯಕ್ಕೆ ಶ್ರದ್ಧೆಯ ಕಲಿಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ನಾನು ಬಾಲ್ಯದಲ್ಲಿ ಚೆನ್ನಾಗಿ ಓದಿ ತಿಳಿದುಕೊಂಡ ಪರಿಣಾಮ ರಾಜಕಾರಣದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಮತ್ತು ಮೂರು ಮಹಾಗ್ರಂಥಗಳನ್ನು ಬರೆಯಲು ಸಾಧ್ಯವಾಯಿತು’ ಎಂದರು.

ADVERTISEMENT

‘ಬಯಲುಸೀಮೆ ಪ್ರದೇಶಗಳಿಗೆ ಮುಂದಿನ ಒಂದೂವರೆ ವರ್ಷದಲ್ಲಿ ಶಾಶ್ವತವಾದ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಿ, ಈ ಭಾಗದ ಜನ-ಜಾನುವಾರುಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ’ ತಿಳಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ನರಸಿಂಹಪ್ಪ, ಸದಸ್ಯೆ ನಾರಾಯಣಮ್ಮ, ತಹಶೀಲ್ದಾರ್ ಮಹಮದ್ ಅಸ್ಲಂ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ರೆಡ್ಡಪ್ಪ, ಅಧ್ಯಕ್ಷ ನರೇಂದ್ರಬಾಬು, ಉಪಾಧ್ಯಕ್ಷೆ ಸರಸ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ತೇಜಾನಂದಾರೆಡ್ಡಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸಿ.ಎನ್.ಶೇಷಾದ್ರಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಜಯಲಕ್ಷ್ಮಮ್ಮ, ಪರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯಿತ್ರಿ, ಹಿರಿಯ ಮುಖಂಡರಾದ ಟಿ.ಎನ್.ರವಿಚಂದ್ರಾರೆಡ್ಡಿ, ವಸತಿ ಶಾಲೆ ಪ್ರಾಂಶುಪಾಲೆ ಭಾಗ್ಯಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.