ADVERTISEMENT

ಅನಂತ ಕುಮಾರ್ ಹೆಗಡೆ ಭಾಷಣಕ್ಕೆ ಸಿಪಿಐ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 6:25 IST
Last Updated 10 ನವೆಂಬರ್ 2017, 6:25 IST

ಕಳಸ: ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಅವರು ಮಂಗಳವಾರ ರಾತ್ರಿ ಹೊರನಾಡಿನಲ್ಲಿ ನಡೆದ ಚಿಟ್ಟಾಣಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಕಮ್ಯುನಿಸ್ಟರನ್ನು ಕೆಂಪಂಗಿಗಳು’ ಎಂದು ಟೀಕಿಸಿದ್ದನ್ನು ಸಿಪಿಐ ತಾಲ್ಲೂಕು ಸಮಿತಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಖಂಡಿಸಿದ್ದಾರೆ. ‘ಕಮ್ಯುನಿಸ್ಟರು ನಿಜವಾದ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳು. ಆದರೆ. ಬಿಜೆಪಿಯವರು ತೊಡುವ ಚಡ್ಡಿ ಬ್ರಿಟಿಷ್‌ ಅಧಿಕಾರಿಗಳು ಬಿಟ್ಟು ಹೋದ ಚಡ್ಡಿ’ ಎಂದು ಅವರು ಲೇವಡಿ ಮಾಡಿದ್ದಾರೆ.

‘ಕಮ್ಯುನಿಸ್ಟರಿಗೆ ಧರ್ಮದ ಪರಿಕಲ್ಪನೆ ಇಲ್ಲ ಎಂದು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿದ್ದೀರಿ. ಆದರೆ, ಕಮ್ಯುನಿಸ್ಟರು ನಿಮ್ಮಂತೆ ಜಾತಿಯ ವಿಷಬೀಜ ಬಿತ್ತಿ ಹೊಡೆದಾಡಿಸುವ ನೀತಿ ಪಾಲಿಸುವವರಲ್ಲ ಎಂಬುದನ್ನು ನೆನಪಿನಲ್ಲಿ ಇಡಿ. ಹಾಗೆಯೇ ಎಡಚರ ಸಾಹಿತ್ಯ ಎಂದು ಟೀಕಿಸುವ ಮುನ್ನ ದೇಶದ ಅರ್ಥಗರ್ಭಿತ ಸಾಹಿತ್ಯ ಎಡಪಂಥೀಯರದ್ದು ಎಂದು ತಿಳಿಯಿರಿ’ ಎಂದು ಗೋಪಾಲ ಶೆಟ್ಟಿ ಹೇಳಿದ್ದಾರೆ.

ADVERTISEMENT

ಬಂಡವಾಳಶಾಹಿ ಮತ್ತು ಪುರೋಹಿತಶಾಹಿ ಬರವಣಿಗೆಯನ್ನು ಮತ್ತು ಧೋರಣೆಯನ್ನು ಕಮ್ಯುನಿಸ್ಟರು ಹಿಂದೆಯೂ, ಇಂದೂ ಮತ್ತು ಮುಂದೆಯೂ ವಿರೋಧಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.