ADVERTISEMENT

ಅನುದಾನ ಹಂಚಿಕೆ: ತಾರತಮ್ಯ ಮಾಡಿಲ್ಲ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:05 IST
Last Updated 15 ಜುಲೈ 2017, 6:05 IST

ಚಿಕ್ಕಮಗಳೂರು: ಕಾಂಗ್ರೆಸ್‌ ಕಾರ್ಯ ಕರ್ತರು ಗುರುವಾರ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌ ಇಲ್ಲಿ ಶುಕ್ರವಾರ ಟೀಕಿಸಿದರು. ಕುಡಿಯುವ ನೀರು ಹಾಗೂ ವಾರ್ಡ್‌ಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಿಲ್ಲ. ಎಸ್‌ಎಫ್‌ಸಿ, 14ನೇ  ಹಣಕಾಸಿನ ಆಯೋಗ, ನಗರೋತ್ಥಾನ ಯೋಜನೆ ಯಲ್ಲಿ ಬಿಡುಗಡೆಯಾದ ಅನುದಾನ ವನ್ನು ಎಲ್ಲ ವಾರ್ಡ್‌ಗಳ ಕಾಮಗಾರಿಗೆ ಸಮನಾಗಿ ಹಂಚಿಕೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್‌ ಸದಸ್ಯೆ ಸುರೇಖಾ ಸಂಪತ್‌ ರಾಜ್‌ ವಾರ್ಡ್‌ಗೆ ₹ 1.34 ಕೋಟಿ, ಹಿರೇಮಗಳೂರು ಪುಟ್ಟಸ್ವಾಮಿ ವಾರ್ಡ್‌ಗೆ ₹ 89.50 ಲಕ್ಷ, ಅನುಮಧುಕರ್‌ ವಾರ್ಡ್‌ ಗೆ ₹ 33 ಲಕ್ಷ, ಸಿ.ವೈ.ತೇಜ್‌ ಕುಮಾರ್‌ ವಾರ್ಡ್‌ಗೆ ₹22.00 ಲಕ್ಷ, ಜಬೇದ ಬಾನು ವಾರ್ಡ್‌ಗೆ ₹1 ಕೋಟಿ, ಸಿ.ಪಿ. ಲಕ್ಷಣ ವಾರ್ಡ್‌ಗೆ ₹ 41 ಲಕ್ಷ, ಯಶೋದಾರವರ ವಾರ್ಡ್‌ಗೆ ₹ 44.25 ಲಕ್ಷ, ರೂಬೆನ್‌ ಮೊಸೆಸ್‌ ವಾರ್ಡ್‌ಗೆ ₹ 54.90 ಲಕ್ಷ ಅನುದಾನ ಹಂಚಿಕೆ ಮಾಡ ಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ಕಲ್ದೊಡ್ಡಿ ವಾರ್ಡ್‌ಗೆ ನಗರಸಭೆಯಿಂದ ಪ್ರತಿ ನಿತ್ಯ ನಾಲ್ಕು ಟ್ಯಾಂಕರ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಲ್ಕು ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ನಲ್ಲಿ ನೀರು ವಿತರಿಸಿದ ನಂತರ ಸ್ಥಳೀಯರು ಹಾಗೂ ವಾರ್ಡ್ ಸದಸ್ಯರ ಸಹಿ ಪಡೆದುಕೊಳ್ಳಲಾಗುತ್ತಿದೆ. ಹೀಗಿರುವಾಗ ತಾರತಮ್ಯ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ADVERTISEMENT

ಬಾಳೆಹಳ್ಳಿ, ಕರ್ತಿಪೇಟೆಗೆ ವಾರಕ್ಕೆ ಎರಡು ದಿನ ಟ್ಯಾಂಕರ್‌ ಮೂಲಕ ನೀರು ವಿತರಿಸಲಾಗುತ್ತಿದೆ. ಹಿರೇಕೊಳಲೆ ಕೆರೆಯಲ್ಲಿ ನಾಲ್ಕು ಅಡಿ ನೀರಿದೆ. ಈ ನೀರು ಬಳಕೆಗೆ ಯೋಗ್ಯವಾಗಿಲ್ಲ. ಯಗಚಿ ಜಲಾಶಯದಲ್ಲಿ ಒಂದು ತಿಂಗಳಿಗಾಗುವಷ್ಟು ನೀರಿದೆ ಎಂದರು.

ಎಮ್‌ಎಡಿಪಿ ಯೋಜನೆಯಡಿ ಕಲ್ದೊಡ್ಡಿಗೆ ಶುದ್ಧ ಕುಡಿಯುವ ನೀರು ಘಟಕ ಮಂಜೂರಾಗಿದೆ. ಸ್ಥಳೀಯರ ಒತ್ತಾಯದ ಮೇರೆಗೆ ಘಟಕ ಸ್ಥಾಪನೆ ಮಾಡುವ ಜಾಗ ಸಮತಟ್ಟು ಮಾಡಲು ಜೆಸಿಬಿ ಕಳುಹಿಸಲಾಗಿತ್ತು. ನಗರಸಭೆ ಜೆಸಿಬಿಯನ್ನು ಖಾಸಗಿ ಬಳಕೆಗಾಗಿ ಉಪಯೋಗಿಸಿಲ್ಲ ಎಂದರು. ನಗರಸಭೆ ಉಪಾಧ್ಯಕ್ಷ ರವೀಂದ್ರ ಪ್ರಭು, ಸದಸ್ಯರಾದ ಎಚ್‌.ಡಿ.ತಮ್ಮಯ್ಯ, ಟಿ.ರಾಜಶೇಖರ, ಪುಷ್ಪರಾಜ, ಮುಖಂಡ ವರಸಿದ್ಧಿ ವೇಣುಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.