ADVERTISEMENT

ಎಸ್ಟೇಟ್‌ ಮಾಲೀಕರ ವಿರುದ್ಧ ಕ್ರಮಕ್ಕೆ ಸೂಚನೆ

ಕಡೆಮಾಡ್ಕಲ್‌: ನೀರು ದುರ್ಬಳಕೆ– ಡಿಸಿ ಸತ್ಯವತಿ ಖುದ್ದು ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 6:49 IST
Last Updated 11 ಮಾರ್ಚ್ 2017, 6:49 IST
ಮೂಡಿಗೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕುಡಿಯುವ ನೀರಿನ ಮೂಲ ಗಳಾಗಿರುವ ನದಿಗಳನ್ನು ದುರ್ಬಳಕೆ ಮಾಡಿಕೊಂಡಿರುವ ಸ್ಥಳಗಳನ್ನು ಶುಕ್ರ ವಾರ ಜಿಲ್ಲಾಧಿಕಾರಿ ಜಿ. ಸತ್ಯವತಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್‌. ರಾಗಪ್ರಿಯಾ ಅವರೊಂದಿಗೆ ಶುಕ್ರವಾರ ತಾಲ್ಲೂಕಿಗೆ ಬಂದಿದ್ದ ಅವರು, ಹೆಸ್ಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೆಮಾಡ್ಕಲ್‌ ಗ್ರಾಮದ ಖಾಸಗಿ ಎಸ್ಟೇಟ್‌ಗೆ ಭೇಟಿ ನೀಡಿದರು. ಕಚ್ಚಾ ರಸ್ತೆಯಿಂದ ಸುಮಾರು ಒಂದು ಕಿ. ಮೀ ಕಾಲ್ನಡಿಗೆಯಲ್ಲಿಯೇ ಸಾಗಿದ ಜಿಲ್ಲಾಧಿ ಕಾರಿ ಹಾಗೂ ಇತರೆ ಅಧಿಕಾರಿಗಳು, ಖಾಸಗಿ ಎಸ್ಟೇಟಿನಲ್ಲಿ ನಿರ್ಮಿಸಿರುವ ನೂತನ ಕೆರೆಯನ್ನು ವೀಕ್ಷಿಸಿದರು. 
 
‘ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸುಂಡೇಕೆರೆ ನದಿಯು, ಇದೇ ಪ್ರದೇಶದಿಂದ ಹರಿಯುತ್ತಿದ್ದು, ನದಿಯನ್ನು ತಿರುಗಿಸಿ ಕೆರೆಯನ್ನು ನಿರ್ಮಿಸಲಾಗಿದೆ. ನದಿಗೆ ಚೆಕ್‌ ಡ್ಯಾಮ್‌ ಮಾದರಿಯಲ್ಲಿ ತಡೆಗೋಡೆಯನ್ನು ನಿರ್ಮಿಸಿದ್ದು, ತಡೆಗೋಡೆಯಲ್ಲಿ ನೀರನ್ನು ತಡೆಹಿಡಿದರೆ ಕೆರೆ ತುಂಬುತ್ತದೆ’ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಸಿಇಒ ಅವರಿಗೆ ನೀರಿನ ದುರ್ಬಳಕೆಯ ಕುರಿತು ವಿವರಿಸಿದರು. 
 
ಜೇಸಿಬಿ ಯಂತ್ರವನ್ನು ತಂದು ನದಿಯನ್ನು ಸಂಪೂರ್ಣ ಬಿಡಿಸಬೇಕು, ಕೆರೆಯನ್ನು ತೆರವುಗೊಳಿಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ತಹಶೀಲ್ದಾರ್‌ ಡಿ. ನಾಗೇಶ್‌ಗೆ ಆದೇ ಶಿಸಿದರು.
 
ಇಂದಿರಾ ನಗರಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಮೂಲಗಳನ್ನು ಪರಿಶೀಲನೆ ನಡೆಸಿದರು. ಪಟ್ಟಣಕ್ಕೆ ನೀರು ಪೂರೈಸುವ ಟ್ಯಾಂಕ್‌ ಇರುವ ಬೀಜುವಳ್ಳಿಗೆ ಭೇಟಿ ನೀಡಿದರು. ಪಟ್ಟಣ ಪಂಚಾಯಿತಿಯು ಸುಂಡೇಕೆರೆ ನದಿಗೆ ಸಂಪೂರ್ಣ ತಡೆಗೋಡೆ ನಿರ್ಮಿಸಿದ್ದು, ನದಿ ಹರಿಯುವುದನ್ನೇ ಸ್ಥಗಿತಗೊಳಿಸಿರು ವುದರಿಂದ ಹಳೇಮೂಡಿಗೆರೆ ಗ್ರಾಮ ಪಂಚಾಯಿತಿಗೆ ನೀರಿಲ್ಲದಂತಾಗಿದೆ ಎಂ ದು ಹಳೇಮೂಡಿಗೆರೆ ಗ್ರಾಮ ಪಂ ಚಾಯಿತಿ ಸದಸ್ಯರು ದೂರು ನೀಡಿದರು. 
 
ಪಟ್ಟಣ ಪಂಚಾಯಿತಿಯು ಎಲ್ಲಾ ನೀರನ್ನು ತಾನೇ ಬಳಸಿಕೊಳ್ಳದೇ ಸ್ವಲ್ಪವಾ ದರೂ ನೀರು ಮುಂದೆ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದರು. ನಂತರ ಕಿತ್ತಲೆಗಂಡಿಯಲ್ಲಿರುವ ಹೇಮಾವತಿ ನೀರು ಪೂರೈಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
 
ಸಿಇಒ ಡಾ. ಆರ್‌. ರಾಗಪ್ರಿಯಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ರಾಜ್‌ಗೋಪಾಲ್‌, ತಹಶೀಲ್ದಾರ್‌ ಡಿ. ನಾಗೇಶ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.
 
ಎಂಜಿನಿಯರ್‌ಗಳಿಗೆ ತರಾಟೆ
ಸ್ವಾಭಾವಿಕವಾಗಿ ಹರಿಯುವ ಸುಂಡೇಕೆರೆ ನದಿಯನ್ನು ಕಾಫಿ ಎಸ್ಟೇಟ್‌ ಒಳಗೆ, ಕೆರೆಗೆ ಆಧುನಿಕವಾಗಿ ತಿರುಗಿಸಿ ದುರ್ಬಳಕೆ ಮಾಡಿಕೊಂಡಿರುವುದನ್ನು ಕಂಡ ಜಿಲ್ಲಾಧಿಕಾರಿ ಜಿ. ಸತ್ಯವತಿ, ಕೃತ್ಯಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರು. ನಮ್ಮ ಎಂಜಿನಿಯರ್‌ಗಳಿಗೆ ಒಂದು ಕೆಲಸ ನೀಡಿದರೆ ಪಂಚವಾರ್ಷಿಕ ಯೋಜನೆ ಮಾಡುತ್ತೀರಿ, ಇಲ್ಲಿ ನೋಡಿ ಹೇಗೆ ಪ್ಲಾನ್‌ ಮಾಡಿ ಜನರಿಗೆ ತೊಂದರೆ ನೀಡುತ್ತಿದ್ದಾರೆ. ನಮ್ಮಲ್ಲಿ ಇರುವ ನೀರನ್ನೇ ಜನರಿಗೆ ನೀಡಲಾಗುವುದಿಲ್ಲ! ಬರೀ ವೇಸ್ಟ್‌ ಬಾಡಿಗಳು ಎಂದಾಗ ವೀಕ್ಷಣೆಗೆ ಬಂದವರು ನಗೆಗಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.