ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ 18ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 13 ಮೇ 2017, 7:12 IST
Last Updated 13 ಮೇ 2017, 7:12 IST
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿ ಶಾಸನಾ ಅವರಿಗೆ ಪೋಷಕರಾದ ಎಂ.ಎಸ್‌.ಲಂಕೇಗೌಡ ಮತ್ತು ಕೆ.ಬಿ.ಸವಿತಾ ಸಿಹಿ ತಿನಿಸಿ ಅಭಿನಂದಿಸಿದರು
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿ ಶಾಸನಾ ಅವರಿಗೆ ಪೋಷಕರಾದ ಎಂ.ಎಸ್‌.ಲಂಕೇಗೌಡ ಮತ್ತು ಕೆ.ಬಿ.ಸವಿತಾ ಸಿಹಿ ತಿನಿಸಿ ಅಭಿನಂದಿಸಿದರು   

ಚಿಕ್ಕಮಗಳೂರು:  ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಈ ಬಾರಿ ಜಿಲ್ಲೆಗೆ ರಾಜ್ಯದಲ್ಲಿ ಶೇ 74.4 ಫಲಿತಾಂಶ ಸಂದಿದ್ದು, 18ನೇ ಸ್ಥಾನ ಪಡೆದಿದೆ.
ಕಳೆದ ಬಾರಿ ಶಾಲೆ ಶೇ 86.9 ಫಲಿತಾಂಶ ದಾಖಲಿಸಿ, 5ನೇ ಸ್ಥಾನ ಪಡೆದಿತ್ತು. ಈ ಬಾರಿ 13 ಸ್ಥಾನ ಕುಸಿದಿದೆ. ಜಿಲ್ಲೆಯಲ್ಲಿ ಒಟ್ಟು 313 ಶಾಲೆಗಳಿದ್ದು, 14,443 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ನಗರದ ಸೇಂಟ್‌ ಮೇರೀಸ್‌ ಶಾಲೆಯ ವಿದ್ಯಾರ್ಥಿನಿ ಎಲ್‌.ಶಾಸನಾ ಅವರು 625ಕ್ಕೆ 619 (ಶೇ 99.04) ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಹಿಂದಿ, ಸಮಾಜವಿಜ್ಞಾನ, ವಿಜ್ಞಾನ ವಿಷಯಗಳಲ್ಲಿ 100ಕ್ಕೆ 100, ಕನ್ನಡದಲ್ಲಿ 125ಕ್ಕೆ 122, ಇಂಗ್ಲಿಷ್‌ನಲ್ಲಿ 99, ಗಣಿತದಲ್ಲಿ 98 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಇದೇ ಶಾಲೆಯ ನಿಹಾರಿಕಾ ಜಿ.ಮೇಗಳಮನೆ ಮತ್ತು ಎಸ್‌.ಬಿ.ದೀಪಾ ಅವರು 613 (98.08) ಅಂಕ ಗಳಿಸಿ ಸಾಧನೆ ಮಾಡಿದ್ದಾರೆ. ನಿಹಾರಿಕಾ ಅವರು  ಹಿಂದಿ ಮತ್ತು ಗಣಿತದಲ್ಲಿ 100ಕ್ಕೆ 100, ಕನ್ನಡ–123, ಇಂಗ್ಲಿಷ್‌– 99, ಸಮಾಜವಿಜ್ಞಾನ– 96, ವಿಜ್ಞಾನದಲ್ಲಿ 95 ಅಂಕ ಪಡೆದಿದ್ದಾರೆ. ದೀಪಾ ಅವರು ಇಂಗ್ಲಿಷ್‌, ಹಿಂದಿಯಲ್ಲಿ 100ಕ್ಕೆ 100, ಕನ್ನಡ–122, ಗಣಿತ–99, ಸಮಾಜವಿಜ್ಞಾನ– 94 ಹಾಗೂ ವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾರೆ. ಪರೀಕ್ಷೆ ಬರೆದಿದ್ದ 109 ವಿದ್ಯಾರ್ಥಿಗಳ ಪೈಕಿ 42 ಮಂದಿ ಅತ್ಯುತ್ತಮ ಶ್ರೇಣಿ ಪಡೆದಿದ್ದಾರೆ.

ADVERTISEMENT

‘ಅಂದಿನ ಪಾಠವನ್ನು ಅಂದೇ ಓದುವನ್ನು ರೂಢಿಸಿಕೊಂಡಿದ್ದೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ತಯಾರಿ ಆರಂಭಿಸಿದ್ದೆ. ರಾತ್ರಿ ಹೊತ್ತು ಜಾಸ್ತಿ ಅಭ್ಯಾಸ ಮಾಡುತ್ತಿದ್ದೆ. ಪಠ್ಯಪುಸ್ತಕವನ್ನು ಅಧ್ಯಯನ ಮಾಡುತ್ತಿದ್ದೆ. ಗೊಂದಲಗಳಿದ್ದರೆ ಶಿಕ್ಷಕರಿಂದ ಬಗೆಹರಿಸಿಕೊಳ್ಳುತ್ತಿದ್ದೆ. ಪರಿಶ್ರಮಕ್ಕೆ ಫಲ ಸಿಕ್ಕಿದೆ. ವೈದ್ಯೆಯಾಗಬೇಕೆಂಬ ಗುರಿ ಇಟ್ಟುಕೊಂದ್ದೇನೆ’ ಎಂದು ಶಾಸನಾ ಅವರು ಸಂತಸ ಹಂಚಿಕೊಂಡರು.

‘ಟ್ಯೂಷನ್‌ಗೆ ಹೋಗಿರಲಿಲ್ಲ. ಶೈಕ್ಷಣಿಕ ವರ್ಷದ ಆರಂಭದಿಂದಲೇ ತಯಾರಿ ಆರಂಭಿಸಿದ್ದೆ. ಶಿಕ್ಷಕರು ಚೆನ್ನಾಗಿ ವಿಷಯಗಳನ್ನು ಮನನ ಮಾಡಿಸುತ್ತಿದ್ದರು. ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ, ಅಭ್ಯಾಸ ಮಾಡಿದ್ದೆ. ವೈದ್ಯೆಯಾಗುವ ಗುರಿ ಇಟ್ಟುಕೊಂಡಿದ್ದೇನೆ’ ಎಂದು ಎಸ್‌.ಬಿ.ದೀಪಾ ಅವರು ಖುಷಿ ಹಂಚಿಕೊಂಡರು.  

ಶೇ100 ಫಲಿತಾಂಶ:  ನಗರದ ಹಳೆಉಪ್ಪಳ್ಳಿಯ ಜ್ಞಾನರಶ್ಮಿ ಆಂಗ್ಲ ಮಾಧ್ಯಮ ಶಾಲೆಯು ಶೇ100 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದಿದ್ದ 32 ವಿದ್ಯಾರ್ಥಿಗಳ ಪೈಕಿ ಮೂವರು ಅತ್ಯುತ್ತಮ ಶ್ರೇಣಿ ಪಡೆದಿದ್ದಾರೆ. ಎಚ್.ವಿ.ಸಂಜಯ್ ಅವರು 567 (ಶೇ 90.72) ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಹಿಂದಿಯಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ ಎಂದು ಪ್ರಾಚಾರ್ಯೆ ಪಾಲಕ್ಷಮ್ಮ ನಂದಕುಮಾರ್ ತಿಳಿಸಿದ್ದಾರೆ.

ಶೇ 96 ಫಲಿತಾಂಶ : ‌ ನಗರದ  ವಾಸವಿ ವಿದ್ಯಾಸಂಸ್ಥೆಯ ಶಾರದಮ್ಮ ಎಂ.ಜೆ.ಪಟ್ಟಾಭಿರಾಮಶೆಟ್ಟಿ ಪ್ರೌಢಶಾಲೆಯು ಶೇ 96 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದಿದ್ದ 49 ವಿದ್ಯಾರ್ಥಿಗಳ ಪೈಕಿ 47 ಮಂದಿ ತೇರ್ಗಡೆಯಾಗಿದ್ದಾರೆ. 12 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಪಡೆದಿದ್ದಾರೆ. ಸಿ.ಕೆ.ಪ್ರಜ್ವಲ್  ಅವರು 585 (ಶೇ 93.6) ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜ್ಯೋತಿನಗರದ ಎಸ್‌ಎಸ್‌ಆರ್‌ ಪ್ರಾಯೋಗಿಕ ಪ್ರೌಢಶಾಲೆಯು ಶೇ 88.59 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದಿದ್ದ 114 ವಿದ್ಯಾರ್ಥಿಗಳಲ್ಲಿ 101 ಮಂದಿ ಉತ್ತೀರ್ಣರಾಗಿದ್ದಾರೆ. 15 ಮಂದಿ ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ. ಎಚ್‌.ಎಂ.ಲಿಖಿತಾ ಅವರು 614 (ಶೇ 98.24) ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.