ADVERTISEMENT

ಕಂದಾಯ ಇಲಾಖೆ: 216 ಹುದ್ದೆ ಖಾಲಿ

ಚಿಕ್ಕಮಗಳೂರು: ಕಚೇರಿಯಲ್ಲಿ ಸಿಬ್ಬಂದಿ ಕೊರತೆ, ಆಗಬೇಕಾದ ಕೆಲಸಗಳು ಮಂದಗತಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 6:41 IST
Last Updated 2 ಫೆಬ್ರುವರಿ 2017, 6:41 IST
ಕಂದಾಯ ಇಲಾಖೆ: 216 ಹುದ್ದೆ ಖಾಲಿ
ಕಂದಾಯ ಇಲಾಖೆ: 216 ಹುದ್ದೆ ಖಾಲಿ   

ಚಿಕ್ಕಮಗಳೂರು: ‘ಇಂದಿಗೆ ಕೆಲಸಕ್ಕೆ ಸೇರಿ 35 ವರ್ಷಗಳು ಕಳೆದಿವೆ. ನಿವೃತ್ತಿಗೆ ಇನ್ನೇನು 2 ವರ್ಷಗಳು ಬಾಕಿ ಇವೆ. ನನ್ನ ಜತೆ ಹಾಗೂ ನಂತರದಲ್ಲಿ ಕೆಲಸಕ್ಕೆ ಸೇರಿದ ಸಹೋದ್ಯೋಗಿಗಳಿಗೆ 2ರಿಂದ 3 ಬಡ್ತಿಗಳಾಗಿವೆ. ನನಗೆ ಮಾತ್ರ ಇದುವರೆಗೂ ಒಂದೇ ಒಂದು ಬಡ್ತಿ ನೀಡಿಲ್ಲ’ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಂಗಸ್ವಾಮಿ ಅಳಲು ತೋಡಿಕೊಳ್ಳುತ್ತಾರೆ.

ಜಿಲ್ಲೆಯ ವಿವಿಧೆಡೆ ಕಂದಾಯ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಜಿಲ್ಲಾಧಿಕಾರಿ ಸಂಬಂ ಧಪಟ್ಟ ಇಲಾಖೆಗೆ ಹಲವು ಬಾರಿ ಪತ್ರ ಬರೆದಿದ್ದಾರೆ. ಕಂದಾಯ ಇಲಾಖೆಯನ್ನು ‘ಮಾತೃ ಇಲಾಖೆ’ ಎಂದು ಕರೆಯಲಾ ಗುತ್ತದೆ. ಸರ್ಕಾರ ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಬಹುತೇಕ ಸಿಬ್ಬಂದಿ. 1977ರಲ್ಲಿ ಜಿಲ್ಲೆಯ ಅಂದಿನ ಜನಸಂಖ್ಯೆಗೆ ಅನುಗುಣವಾಗಿ ಇಲಾಖೆಗೆ ಸಿಬ್ಬಂದಿ ನೇಮಿಸಲಾಗಿತ್ತು. ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತರುವ ಪೆನ್‌ಷನ್‌ ಯೋಜನೆಯ 94(ಎ), (ಬಿ), (ಸಿ), ಭೂ ಕಾಯ್ದೆ ತಿದ್ದುಪಡಿ ಯೋಜನೆ, ಅಕ್ರಮ–ಸಕ್ರಮ, ಬಹರ್‌ ಹುಕುಂ ಸಾಗುವಳಿ ಅರ್ಜಿ ಪರಿಶೀಲನೆ ಸೇರಿದಂತೆ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದೆ. ಜನಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ಸರ್ಕಾರ ಅಗತ್ಯ ಸಿಬ್ಬಂದಿ ಭರ್ತಿ ಹಾಗೂ ಸೇವಾ ಹಿರಿ ತನದ ಮೇಲೆ ಬಡ್ತಿಗೂ ಮುಂದಾಗಿಲ್ಲ ಎನ್ನುತ್ತಾರೆ ಅವರು.
 
ಜಿಲ್ಲಾ ಕೇಂದ್ರದ ಇಲಾಖೆ ವೊಂದರಲ್ಲೆ 2 ಶಿರಸ್ತೇದಾರ್‌ ಹುದ್ದೆಗಳು ಖಾಲಿ ಇವೆ. ಕಾರ್ಯಭಾರ ಹೆಚ್ಚಿದ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರದಿಂದ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಇಂದರಿಂದ ತಾಲ್ಲೂಕು ಕಚೇರಿಯಲ್ಲಿ ಆಗಬೇಕಾದ ಕೆಲಸಗಳು ಮಂದ ಗತಿಯಲ್ಲಿ ಸಾಗುತ್ತವೆ. ಇದಕ್ಕೆ ಸಂಬಂಧಿ ಸಿದಂತೆ ಜಿಲ್ಲಾಧಿಕಾರಿಗಳು ಆಡಳಿತ ಸುಧಾರಣಾ ಇಲಾಖೆ, ಕಾನೂನು ಇಲಾಖೆ, ಸಿಬ್ಬಂದಿ, ಕಂದಾಯ ಇಲಾಖೆ ಸಚಿವರು ಹಾಗೂ ಕಾನೂನು ಇಲಾಖೆಗೆ ಹಲವು ಬಾರಿ ಪತ್ರ ಬರೆದಿದ್ದಾರೆ. ಆದರೆ ಇದ್ಯಾವುದಕ್ಕೂ  ಪ್ರಯೋಜನವಾಗಿಲ್ಲ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತ ಪಡಿಸುತ್ತಾರೆ.

ಹೊಸದಾಗಿ ಆಯ್ಕೆಯಾಗುವ ಸಿಬ್ಬಂದಿಗೆ ಸರ್ಕಾರದ ಹೊಸ ಯೋಜನೆಗಳ ಬಗ್ಗೆ ತರಬೇತಿ ಅಗತ್ಯವಿದೆ. ತರಬೇತಿ ಇಲ್ಲದೆ,  ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವುದು ಕಷ್ಟಸಾಧ್ಯ. ಸರ್ಕಾರ ಕೇವಲ ತಹಸೀಲ್ದಾರ್‌, ಉನ್ನತ ದರ್ಜೆ ಅಧಿಕಾರಿಗಳಿಗೆ ಮಾತ್ರ ಕಾರ್ಯಾಗಾರ ಆಯೋಜಿಸಿ ತರಬೇತಿ ನೀಡುತ್ತಿದೆ. ತರಬೇತಿ ಪಡೆದ ಅಧಿಕಾರಿಗಳು ಒಂದೆರಡು ವರ್ಷದಲ್ಲಿ  ಬೆರೆಡೆಗೆ ವರ್ಗಾವಣೆಯಾಗುತ್ತಾರೆ. ಇದರಿಂದ ಪುನಾ ಸಮಸ್ಯೆಗಳಾಗುತ್ತವೆ ಎನ್ನುತ್ತಾರೆ ಅವರು.

ಜಿಲ್ಲೆಯ ಇಂದಿನ ಜನಸಂಖ್ಯೆಗೆ ಅನುಗುಣವಾಗಿ ಸರ್ಕಾರ ಸಿಬ್ಬಂದಿ ಭರ್ತಿಗೆ ಮುಂದಾಗಬೇಕು. ಸೇವಾ ಹಿರಿ ತನದ ಮೇಲೆ ಸಿಬ್ಬಂದಿಗೆ ಪದೋನ್ನತಿ ನೀಡಬೇಕು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಯೋಜನೆಗಳ ತಳ ಮಟ್ಟದ ಸಿಬ್ಬಂದಿಗೂ ತರಬೇತಿ ನೀಡಬೇಕು. ಹೀಗಾದಾಗ ಮಾತ್ರ ಆಮೆಗತಿಯಲ್ಲಿ ಸಾಗುತ್ತಿರುವ ಕಂದಾಯ ಇಲಾಖೆಯಲ್ಲಿನ ಕಾರ್ಯಗಳಿಗೆ ಚುರುಕುಮುಟ್ಟಿಸಲು ಸಾಧ್ಯವೆನ್ನುತ್ತಾರೆ  ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.