ADVERTISEMENT

ಕಡೂರಿಗೆ ಶೀಘ್ರ ಒಳಚರಂಡಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 5:46 IST
Last Updated 23 ಮೇ 2017, 5:46 IST
ಕಡೂರು ಪುರಸಭೆಯ ಅನುದಾನದಡಿ ₹ 14 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ವೈ.ಎಸ್.ವಿ. ದತ್ತ ಚಾಲನೆ ನೀಡಿದರು.
ಕಡೂರು ಪುರಸಭೆಯ ಅನುದಾನದಡಿ ₹ 14 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ವೈ.ಎಸ್.ವಿ. ದತ್ತ ಚಾಲನೆ ನೀಡಿದರು.   

ಕಡೂರು: ಕಡೂರು ಪಟ್ಟಣಕ್ಕೆ ₹ 57 ಕೋಟಿ ಮೊತ್ತದ ಒಳಚರಂಡಿ ಕಾಮಗಾರಿಯ ಪರಿಷ್ಕೃತ  ಅಂದಾಜು ಪಟ್ಟಿ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿ ಮಂಜೂರಾತಿ ದೊರೆಯುವ ವಿಶ್ವಾಸ ವನ್ನು ಶಾಸಕ ವೈ.ಎಸ್.ವಿ. ದತ್ತ ವ್ಯಕ್ತಪಡಿಸಿದರು.ಸೋಮವಾರ ಪುರಸಭೆಯ ಅನು ದಾನದಡಿ ಪಟ್ಟಣದ ಜೈನ್‌ಟೆಂಪಲ್‌ ರಸ್ತೆಯಿಂದ ಕೆ.ಎಂ. ರಸ್ತೆಯವರೆಗಿನ
₹ 14 ಲಕ್ಷ ವೆಚ್ಚದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ  ಮಾತನಾಡಿದರು.

‘ನಾನು ವಿಧಾನ ಪರಿಷತ್ ಸದಸ್ಯನಾದ ಅವಧಿಯಲ್ಲಿ ಕಡೂರು ಮತ್ತು ಬೀರೂರು ಪಟ್ಟಣಕ್ಕೆ ಒಳಚರಂಡಿ ಕಾಮಗಾರಿ ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಪ್ರಮಾದವಶಾತ್ ಕಡೂರಿನ ಹೆಸರು ಬಿಟ್ಟುಹೋಯಿತು. ಆ ನಂತರ ಇದೀಗ ಕಡೂರು ಪಟ್ಟಣದ ಯುಜಿಡಿ ಕಾಮಗಾರಿಯ ಅಂದಾಜು ಪಟ್ಟಿ ಸಲ್ಲಿಕೆಯಾಗಿದ್ದು ಮಂಜೂರಾತಿ ದೊರೆಯಲಿದೆ’ ಎಂದರು.

‘ಪಟ್ಟಣದ ಅಭಿವೃದ್ಧಿಯಲ್ಲಿ ಯಾವುದೇ ಕ್ಷುಲ್ಲಕ ರಾಜಕಾರಣ ಮಾಡದೆ ಪುರಸಭೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು. ಪುರಸಭಾ ಅಧ್ಯಕ್ಷ ಎಂ. ಮಾದಪ್ಪ ಮಾತನಾಡಿ, ‘ನಗರೋತ್ಥಾನ ಯೋಜನೆಯಡಿಯಲ್ಲಿ ₹ 7.5 ಕೋಟಿ ಅನುದಾನ ಬಂದಿದೆ. ಈಗಾಗಲೇ ಅಭಿವೃದ್ಧಿ ದೃಷ್ಟಿಯಿಂದ ₹ 1.25 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ.

ADVERTISEMENT

ಪುರಸಭೆಯ ಒಟ್ಟು ₹ 98 ಲಕ್ಷ ಅನುದಾನದಡಿ ₹14 ಲಕ್ಷ ಈ ಕಾಮಗಾರಿಗೆ ಮೀಸಲಿಟ್ಟಿದೆ, ಈಗಾಗಲೇ ಪಟ್ಟಣದ ಎಲ್ಲಾ ವಾರ್ಡ್‌ಗಳಿಗೂ  ಭದ್ರಾ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ತರೀಕೆರೆ ತಾಲ್ಲೂಕಿನ ಶಾಸಕರು ಭದ್ರಾ ನೀರನ್ನು ತಮಗೂ ನೀಡಿ  ಎಂದು ಕೂಗೆಬ್ಬಿಸಿದ್ದು, ಇದರಿಂದ ಕಡೂರು ಬೀರೂರು ಪಟ್ಟಣಗಳಿಗೆ ತೊಂದರೆಯಾಗುವುದು ಖಂಡಿತ. ಹಾಗಾಗಿ ಸಂಭಾವ್ಯ ತೊಂದರೆಯನ್ನು ತಪ್ಪಿಸುವ ಕಾರ್ಯದತ್ತ ಶಾಸಕರು ಗಮನ ಹರಿಸಬೇಕು’ ಎಂದು ಕೋರಿದರು.

‘ಈ ಬಗ್ಗೆ ಯಾವುದೇ ಆತಂಕ ಬೇಡ. ಅಂತಹ ತೊಂದರೆ ಎದುರಾದ ಪಕ್ಷದಲ್ಲಿ ಹೋರಾಡಲು ಸಿದ್ಧನಿದ್ದೇನೆ’ ಎಂದು ಶಾಸಕರು ಭರವಸೆ ನೀಡಿದರು. ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು. ಪುರ ಸಭಾ ಸದಸ್ಯರಾದ ಸೋಮಶೇಖರ್, ಅನಿತಾ ರಾಜ್‌ಕುಮಾರ್, ಕೆ.ಎಸ್. ಮಂಜುನಾಥ್, ಕೆ.ಎಂ. ಮೋಹನ್‌ ಕುಮಾರ್(ಮುದ್ದು), ಜಯಮ್ಮ, ಲೋಕೇಶ್, ಎಪಿಎಂಸಿ ನಿದೇರ್ಶಕ ಕೆ.ಎಚ್. ಲಕ್ಕಪ್ಪ, ಮೈಲಾರಪ್ಪ, ಅಂಬೇ ಡ್ಕರ್ ನಗರ ಶಂಕರ್, ಖಾದರ್, ಗುತ್ತಿಗೆ ದಾರ ಕೆ.ಎಸ್. ರಮೇಶ್, ಮುಖ್ಯಾಧಿ ಕಾರಿ ಮಂಜಪ್ಪ, ಹರೀಶ್ ಇದ್ದರು.

* * 

ಪಟ್ಟಣದ ಹೃದಯಭಾಗ ದಲ್ಲಿರುವ ಜೈನ್‌ ಟೆಂಪಲ್‌ ರಸ್ತೆಯನ್ನು 4 ಮೀಟರ್ ನಿಂದ 9 ಮೀಟರ್ ಅಗಲಕ್ಕೆ ವಿಸ್ತರಿಸಲಾಗಿದ್ದು, ಕಾಮಗಾರಿ ಶೀಘ್ರ ಮುಗಿಯಲಿದೆ.
ವೈ.ಎಸ್‌.ವಿ. ದತ್ತ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.