ADVERTISEMENT

ಕಳಸ ತಲುಪಿದ ಹೊನ್ನೆಕಾಡು ನೀರು

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 9:24 IST
Last Updated 24 ಜೂನ್ 2017, 9:24 IST

ಕಳಸ: ಪಟ್ಟಣದ ಅನೇಕ ವರ್ಷಗಳ ದಾಹ ತೀರಿಸಲೆಂದು ರೂಪುಗೊಂಡಿ ರುವ ಹೊನ್ನೆಕಾಡು ಯೋಜನೆಯ ನೀರು ವಿವಾದದ ನಡುವೆಯೂ ಶುಕ್ರವಾರ ಕಳಸ ಪಟ್ಟಣ ತಲುಪಿದೆ. ಈ ನೀರು ಶನಿವಾರ ಗಣಪತಿ ಕಟ್ಟೆಯ ವಿತರಣಾ ಟ್ಯಾಂಕ್‌ ತಲುಪುವ ನಿರೀಕ್ಷೆ ಇದೆ. ಇದೇ ಗುರುವಾರ ಈ ನೀರನ್ನು ಕಳಸೇಶ್ವರನಿಗೆ ಸಮರ್ಪಣೆ ಮಾಡಿದ ನಂತರ ಸ್ಥಳೀಯರಿಗೆ ವಿತರಣೆ ಮಾಡಲಾಗುತ್ತದೆ ಎಂದು ಕಳಸ ನೀರು ಬಳಕೆದಾರರ ಕ್ರಿಯಾ ಸಮಿತಿ ತಿಳಿಸಿದೆ.

ಗ್ರಾಮ ಪಂಚಾಯಿತಿ ಸಭಾಂಗಣ ದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು ಈ ಮಾಹಿತಿ ನೀಡಿದರು. ಹೊನ್ನೆಕಾಡು ನೀರು ಕಳಸಕ್ಕೆ ತಲುಪುವುದೇ ಇಲ್ಲ ಎಂದು ಕೆಲವರು ಪುಕಾರು ಹಬ್ಬಿಸಿದ್ದರು. ಆದರೆ, ಇದೀಗ ನೀರು ಪಟ್ಟಣಕ್ಕೆ ತಲುಪಿದೆ. ಈ ಹಿಂದೆ ಹೊನ್ನೆಕಾಡಿನಲ್ಲಿ ಮಾಡಿಕೊಂಡಿದ್ದ ಹರಕೆಯಂತೆ ಮೊದಲಿಗೆ ಕಳಸೇಶ್ವರನಿಗೆ ನೀರು ಸಮರ್ಪಣೆ ಮಾಡಲಾಗುತ್ತದೆ ಎಂದು ಸಮಿತಿಯ ಗೌರವಾಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಹೇಳಿದರು.

ಕಳಸಕ್ಕೆ ನೀರು ಸರಾಗವಾಗಿ ಹರಿದ ನಂತರ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ಬಳಿಗೆ ತೆರಳಿ ಗುತ್ತಿಗೆ ದಾರರಿಗೆ ಹಣ ಪಾವತಿಸಲು ಕೂಡ ಸಮಿತಿ ಶ್ರಮಿಸಬೇಕಾಗುತ್ತದೆ ಎಂದೂ ಅವರು ಹೇಳಿದರು.

ADVERTISEMENT

₹ 7 ಕೋಟಿ  ಮೊತ್ತದ ಯೋಜನೆಯು ವಿಳಂಬವಾಗಲು  ಗುತ್ತಿಗೆದಾರರಿಗಿಂತ ಅಧಿಕಾರಿಗಳ ನಿರ್ಲಕ್ಷ್ಯವೇ ದೊಡ್ಡ ಮಟ್ಟದ್ದು. ಕಾಮಗಾರಿಯ ಗುಣಮಟ್ಟದ ಪರೀಕ್ಷೆಯನ್ನು ಯಾವಾಗ ಬೇಕಾದರೂ ನಡೆಸಬಹುದು. ಕಾನೂನಿನ ಚೌಕಟ್ಟಿನಲ್ಲಿ ಸರ್ಕಾರ  ಗುತ್ತಿಗೆದಾರನಿಗೆ ಹಣ ಸಂದಾಯ ಮಾಡಲೇಬೇಕಾಗುತ್ತದೆ ಎಂದು ಮಂಜಪ್ಪಯ್ಯ ವಿವರಿಸಿದರು.

ಗುರುವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಹೊನ್ನೆಕಾಡು ನೀರನ್ನು ಗಣಪತಿಕಟ್ಟೆಯಿಂದ ಕಳಸೇಶ್ವರ ದೇವ ಸ್ಥಾನದವರೆಗೆ ವೈಭವವಾದ ಮೆರವಣಿಗೆ ಯಲ್ಲಿ ಪೂರ್ಣಕುಂಭ ಕಲಶ ಕೊಂಡೊ ಯ್ದು ಕಳಸೇಶ್ವರನಿಗೆ ಸಮರ್ಪಣೆ ಮಾಡಲು ಸಭೆಯಲ್ಲಿ ತೀರ್ಮಾ ನಿಸಲಾಯಿತು.

ಜೆಡಿಎಸ್‌ ಮುಖಂಡ ಜ್ವಾಲನಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ರಫೀಕ್‌, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್‌, ಸದಸ್ಯರಾದ ಸಂತೋಷ್‌, ರಂಗನಾಥ್‌, ಶಾಮಪ್ರಸಾದ್‌ ಪೈ, ಸುಜಯಾ,ರಾಮಮೂರ್ತಿ, ಮೋಹನ್‌, ನೀರು ಬಳಕೆದಾರರ ಸಮಿತಿಯ ಜಿನರಾಜಯ್ಯ, ಬ್ರಹ್ಮದೇವ,ಅನಿಲ್‌ ಡಿಸೋಜ, ಕಾರ್ತಿಕ್‌ ಶಾಸ್ತ್ರಿ,ಸುರೇಶ್‌, ಗೋಪಾಲ ಪ್ರಭು, ಗೋಪಾಲ, ರಾಜ್‌ಕುಮಾರ್‌ ಪೈ,ರುದ್ರಯ್ಯ ಆಚಾರ್‌, ಪ್ರಸನ್ನ, ಮಂಜಪ್ಪ ಪುಜಾರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.