ADVERTISEMENT

‘ಕಾಫಿ ಕೆಫೆ ಆರಂಭಕ್ಕೆ ಕಾಫಿ ಮಂಡಳಿ ನಿರ್ಧಾರ’

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 9:31 IST
Last Updated 14 ಡಿಸೆಂಬರ್ 2017, 9:31 IST

ಚಿಕ್ಕಮಗಳೂರು: ಕಾಫಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಜಿಲ್ಲೆಯ ವಿವಿಧೆಡೆ ಇಂಡಿಯಾ ಕಾಫಿ ಹೌಸ್‌ ಕೆಫೆಗಳನ್ನು (ಔಟ್‌ಲೆಟ್‌) ತೆರೆಯಲು ಕಾಫಿ ಮಂಡಳಿ ಮುಂದಾಗಿದೆ ಎಂದು ಕಾಫಿ ಮಂಡಳಿ ಸದಸ್ಯ ಮನುಕುಮಾರ್‌ ಇಲ್ಲಿ ಬುಧವಾರ ತಿಳಿಸಿದರು.

‘ಮಹಾನಗರಗಳಲ್ಲಿರುವ ಕಾಫಿ ಹೌಸ್‌ ಕೆಫೆಗಳಂತೆಯೇ ಇಲ್ಲಿಯೂ ಪರಿಚಯಿಸಲಾಗುವುದು. ಕೆಮ್ಮಣ್ಣುಗುಂಡಿ ಕ್ರಾಸ್‌, ಸೀತಾಳ ಯ್ಯನಗಿರಿ, ದೇವಿರಮ್ಮನ ಬೆಟ್ಟ, ಹೊರನಾಡು, ಶೃಂಗೇರಿ, ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಕೆಫೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸಮೀಕ್ಷೆ ಪ್ರಗತಿಯಲ್ಲಿದೆ. ಈ ಕೆಫೆಗಳಲ್ಲಿ ಹೋಟೆಲ್‌ಗಳಿಗಿಂತ ಕಡಿಮೆ ದರದಲ್ಲಿ ಕಾಫಿ ದೊರೆಯಲಿದೆ’ ಎಂದು ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರ ಜಾಗ ಒದಗಿಸುತ್ತದೆ. ಕಾಫಿ ಮಂಡಳಿ ಕೆಫೆಯನ್ನು ನಿರ್ಮಿಸುತ್ತದೆ. ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗುತ್ತದೆ’ ಎಂದರು.

ADVERTISEMENT

‘ಕಾಫಿ ಮಂಡಳಿಯಿಂದ ಏಪ್ರಿಲ್‌ ನಿಂದ ಈವರೆಗೆ ಜಿಲ್ಲೆಯ 8,000 ಬೆಳೆಗಾರರಿಗೆ ಯಾಂತ್ರೀಕರಣ, ಗೋದಾಮು, ಒಣಗುಕಟ್ಟೆ, ನೀರಿನ ಸೌಲಭ್ಯ, ಮರುನಾಟಿ ಪ್ರೋತ್ಸಾಹ ಧನವಾಗಿ ₹ 9.10 ಕೋಟಿ ಸಂದಿದೆ. 900 ಕಾಫಿ ಬೆಳೆಗಾರರಿಗೆ ₹ 2.2 ಕೋಟಿ ಬ್ಯಾಂಕುಗಳ ಬಡ್ಡಿ ಸಹಾಯಧನ ಬಿಡುಗಡೆಯಾಗಿದೆ’ ಎಂದರು.

‘ಬಿಳಿಕಾಂಡ ಕೊರಕ ಹುಳುವಿನ ಹತೋಟಿಗೆ ಆಯ್ದ ತೋಟಗಳಲ್ಲಿ ಸಂಶೋಧನೆ ನಡೆಸಲಾಗುತ್ತಿದೆ. ದೈತ್ಯ ಶಂಖುಹುಳು ಹತೋಟಿಗೆ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಕಿಟ್‌ ವಿತರಿಸಲಾಗಿದೆ. ಬಿಳಿಕಾಂಡ ಕೊರಕ ಮತ್ತು ದೈತ್ಯಶಂಖುಹುಳು ಬಗ್ಗೆ ಸಭೆ ನಡೆಸಿ ಬೆಳೆಗಾರರಿಗೆ ಜಾಗೃತಿ ಮೂಡಿಸಲಾಗಿದೆ’ ಎಂದರು.

‘ಪ್ರಸ್ತುತ ಇರುವ 51: 49 ಅನುಪಾತದಲ್ಲಿ ಕಾಫಿ ಚಿಕೋರಿ ಬದಲಾವಣೆ ಸಾಧ್ಯತೆ ಬಗ್ಗೆ ಅಧ್ಯಯನಕ್ಕೆ ಆಹಾರ ಸುರಕ್ಷೆ ಹಾಗೂ ಮಾನದಂಡ ಪ್ರಾಧಿಕಾರಕ್ಕೆ(ಎಫ್‌ಎಸ್ಎಸ್‌ಎಐ) ಕಾಫಿ ಮಂಡಳಿಯು ಶಿಫಾರಸು ಮಾಡಿದೆ’ ಎಂದರು.

‘ಎಲೆ ಚುಕ್ಕೆ ರೋಗ, ಅತಿ ಮಳೆ, ಒಣ ವಾತಾವರಣದಿಂದಾಗಿ ಚಿಕ್ಕಕೊಳಲೆ, ಅರಳಗುಪ್ಪೆ, ಅರಿಶಿನಗುಪ್ಪೆ ಭಾಗಗಳಲ್ಲಿ ಹಾನಿಯಾಗಿದೆ. ನೀರಿನ ಬಳಕೆ ಮತ್ತು ಮರುನಾಟಿಗೆ ಪ್ರೋತ್ಸಾಹಿಸಲು ಸಹಾಯಧನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮಂಡಳಿ ಶಿಫಾರಸು ಮಾಡಿದೆ’ ಎಂದು ಹೇಳಿದರು.

‘ಬಿಳಿಕಾಂಡ ಕೊರಕ ಮತ್ತು ದೈತ್ಯ ಶಂಖುಹುಳುವನ್ನು ಕರ್ನಾಟಕ ಪೆಸ್ಟ್‌ ಕಂಟ್ರೋಲ್‌ ಕಾಯ್ದೆ ವ್ಯಾಪ್ತಿಗೆ ಒಳಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದರು.

ಮಂಡಳಿತ ಪ್ರದೀಪ್‌ ಪೈ, ಎಂ.ಎಲ್‌.ಕಲ್ಲೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.