ADVERTISEMENT

ಕಾಫಿ ಬೆಳೆಗಾರರಿಗೆ ಸಹಾಯಧನ, ಸಾಲ ಒದಗಿಸಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:48 IST
Last Updated 25 ಅಕ್ಟೋಬರ್ 2016, 9:48 IST

ಚಿಕ್ಕಮಗಳೂರು: ಸಂಕಷ್ಟಕ್ಕೆ ಸಿಲುಕಿ ರುವ ಕಾಫಿ ಬೆಳೆಗಾರರಿಗೆ ಸಹಾಯಧನ ಮತ್ತು ಸಾಲ ಒದಗಿ ಸಬೇಕು ಎಂದು ಕರ್ನಾಟಕ ಬೆಳೆಗಾರರ ಸಂಘದ ನೂತನ ಅಧ್ಯಕ್ಷ ಡಾ.ಮನಯಪಾಂಡ ಎಂ. ಚಂಗಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆ ಬಾರದೆ ಕಾಫಿ ತೋಟ ಗಳು ಒಣಗುತ್ತಿವೆ. ಈ ಬಾರಿ ಕಾಫಿ ಉತ್ಪಾದನೆ ಕುಸಿಯಲಿದೆ. ಜತೆಗೆ ಸರಿ ಯಾದ ಬೆಲೆಯೂ ಇಲ್ಲದೆ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ  ನೆರವಾಗದಿದ್ದರೆ ಮುಂದಿನ ದಿನಗಳಲ್ಲಿ ಕಾಫಿ ತೋಟಗಳ ನಿರ್ವಹಣೆ ಕಷ್ಟವಾಗ ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಫಿ ಮಂಡಳಿಗೆ ಕಾಫಿ ಬೆಳೆಗಾ ರರನ್ನೇ ಅಧ್ಯಕ್ಷರನ್ನಾಗಿ ನೇಮಿಸ ಬೇಕೆನ್ನುವ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. 2015ರ ಡಿಸೆಂಬರ್‌ನಲ್ಲಿ ಮಂಡಳಿ ಪುನರ್ ರಚಿಸಿದ್ದು, ದೊಡ್ಡ ಬೆಳೆಗಾರರಿಂದ 2 ಸದಸ್ಯ ಸ್ಥಾನ, ಸಣ್ಣ ಬೆಳೆಗಾರರಿಂದ 5 ಸ್ಥಾನ, ಕಾಫಿ ಕ್ಯೂರಿಂಗ್ ಕಡೆಯಿಂದ 1 ಸದಸ್ಯ ಸ್ಥಾನವನ್ನು ಈವರೆಗೂ ಭರ್ತಿ ಮಾಡಿಲ್ಲ. ಕೂಡಲೇ ಈ ಎಲ್ಲ ಸ್ಥಾನಗಳಿಗೆ ಸದಸ್ಯರನ್ನು ನೇಮಿಸುವಂತೆ ಒತ್ತಾಯಿಸ ಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಉತ್ಪಾದನೆಯಾಗಿವ ಕಾಫಿಬೆಳೆಯಲ್ಲಿ ಶೇ 70 ರಫ್ತು ಮಾಡಲಾಗುತ್ತಿದೆ. ಕಾಫಿಗೆ ದೇಶದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಆಂತರಿಕ ಬಳಕೆ ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಕಾಫಿ ಕೇಂದ್ರವನ್ನು ಎಲ್ಲ ನಾಗರಿಕ ಸ್ಥಳಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಶಾಲಾ, ಕಾಲೇಜು ಮತ್ತು ಪ್ರವಾಸಿ ಕೇಂದ್ರಗಳಲ್ಲಿ ಸ್ಥಾಪಿಸಬೇಕು. ಇವುಗಳ ನಿರ್ವಹಣೆ ಹೊಣೆಯನ್ನು ಮಾಜಿ ಸೈನಿಕರು, ಅಂಗ ವೈಕಲ್ಯ ಇರುವ ಮಕ್ಕಳ ತಾಯಿಯರು, ವಿಧವೆಯರಿಗೆ ವಹಿಸ ಬೇಕು ಎಂದು ಒತ್ತಾಯಿಸಿದರು.

ಕಾಫಿ ಹೂವಾಗಲು ಫೆಬ್ರುವರಿ ಯಿಂದ ಏಪ್ರಿಲ್‌ವರೆಗೆ ತುಂತುರು ಹನಿ ನೀರಾವರಿ ಒದಗಿಸಬೇಕಿರುವುದರಿಂದ ಈ ಅವಧಿಯಲ್ಲಿ ನಿರಂತರ ವಿದ್ಯುತ್ ಸಂಪರ್ಕ ನೀಡುವಂತೆ ಸರ್ಕಾರ ಒತ್ತಾಯಿಸಲಾಗುವುದು. ರಾಜ್ಯ ಸರ್ಕಾರ ಸದ್ಯ ಬೆಳೆಗಾರರಿಗೆ ಕೃಷಿ ಸಾಲವನ್ನು ಶೇ 3 ಬಡ್ಡಿ ದರದಲ್ಲಿ ₹3 ಲಕ್ಷದವರೆಗೆ ನೀಡುತ್ತಿದೆ. ಈಗ ಕಾಫಿ ಬೆಳೆಯುವ ವೆಚ್ಚವು ಏರಿರುವುದರಿಂದ ಸಾಲವನ್ನು ₹25 ಲಕ್ಷದವರೆಗೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಫಿ ಸಂಸ್ಕರಣೆಯಿಂದ ಕಾಫಿ ಕ್ಯೂರಿಂಗ್‌ ಮಾಡುವವರೆಗೆ ಜೆಎಸ್‌ಟಿ ನಿಬಂಧನೆಯಿಂದ ಕಾಫಿಯನ್ನು ಹೊರಗಿ ಡಬೇಕು. ಹುರಿದು ಪುಡಿ ಮಾಡಿದ ಕಾಫಿಯನ್ನು ಜೆಎಸ್‌ಟಿಗೆ ಒಳಪಡಿಸ ಬೇಕು. ವರಮಾನ ತೆರಿಗೆ 7ಬಿ(1) ತಿದ್ದುಪಡಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಪಿಎ ಮಹಿಳೆಯರಿಗಾಗಿ ಇದೇ ಮೊದಲ ಬಾರಿಗೆ ಒಂದು ಉಪ ಸಮಿತಿ ರಚಿಸಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆ ಯರೂ ಸಹ ಕಾಫಿ ತೋಟಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೂ ಸಹ ಕರ್ನಾಟಕ ಬೆಳೆಗಾರರ ಸಂಘದಲ್ಲಿ ಸ್ಥಾನ ನೀಡಲಾಗಿದೆ ಎಂದು ತಿಳಿಸಿದರು.
ಕೆಪಿಎ ಉಪಾಧ್ಯಕ್ಷ ಎಚ್.ಟಿ. ಪ್ರಮೋದ್ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.