ADVERTISEMENT

ಕಾರ್ಯಕರ್ತೆಯರಿಗೆ ಬಿಸಿಯೂಟ ಫೆಡರೇಶನ್‌ ಬೆಂಬಲ

ಅಂಗನವಾಡಿ ಕಾರ್ಯಕರ್ತೆಯರು ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಹೋರಾಟ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:23 IST
Last Updated 24 ಮಾರ್ಚ್ 2017, 5:23 IST

ಚಿಕ್ಕಮಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆ ಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ 4 ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಅಖಿಲ ಭಾರತ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ಬೆಂಬಲ ಸೂಚಿಸಿದೆ.

ಐಟಿಯುಸಿ ಸಹ ಸಂಘಟನೆಗಳಾದ ಬಿಸಿಯೂಟ, ಗ್ರಾಮ ಪಂಚಾಯಿತಿ ನೌಕರರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವು ಸಂಘಟನೆಗಳು ಬರುವ ಸೋಮವಾರದವರೆಗೆ ಕಾಯ್ದು, ನಂತರ ಕೆಲಸ ಬಂದ್‌ಗೊಳಿಸಿ ಅಂಗನ ವಾಡಿ ಕಾರ್ಯಕರ್ತೆಯರ ಹೋರಾಟ ದಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಸಿಯೂಟ ಫೆಡರೇಶನ್‌ ಜಿಲ್ಲಾ ಅಧ್ಯಕ್ಷ ಜಿ.ರಘು ಮತ್ತು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

ಈಗಾಗಲೇ ಬಿಸಿಯೂಟ ತಯಾರಕರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕೆಲಸದಲ್ಲಿ ನಿರತರಾಗಿದ್ದಾರೆ. ಪರೀಕ್ಷೆಗಳು ಇರುವುದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗಬಾರದೆಂದು ಕೆಲಸ ಸ್ಥಗಿತಗೊಳಿಸಿಲ್ಲ. ಆದರೆ, ಸೋಮವಾರ ದೊಳಗೆ ಬೇಡಿಕೆ ಈಡೇರದಿದ್ದರೆ ಬಿಸಿಯೂಟ ಕಾರ್ಯಕರ್ತರು ಅಂಗನ ವಾಡಿ ಕಾರ್ಯಕರ್ತರ ಹೋರಾಟಕ್ಕೆ ಕೈಜೋಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

‘ಹೋರಾಟ ನಿರತ ಸಂಘಟನೆ ಗಳಾದ ಸಿಐಟಿಯು ಮತ್ತು ಎಐಟಿಯುಸಿ ಸಂಘಟನೆಗಳನ್ನು ಚರ್ಚೆಗೆ ಆಹ್ವಾನಿಸಿದೆ. ಕೆಲ ವ್ಯಕ್ತಿಗತ ಹಾಗೂ ಸ್ವಯಂಘೋಷಿತ ಮುಖಂಡರನ್ನು ಕರೆದು ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಧರಣಿ ನಿರತರನ್ನು ಹಾದಿ ತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಈ ರೀತಿ ಕಾರ್ಮಿಕ ವಿರೋಧಿ ನೀತಿಯನ್ನು ಸಂ ಘಟನೆ ಖಂಡಿಸಲಿದೆ’ ಎಂದು ಜಿಲ್ಲಾಧಿ ಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಹೋರಾಟನಿರತ ಅಂಗನವಾಡಿ ಕಾರ್ಯಕರ್ತೆಯರು ರಸ್ತೆ ಮೇಲೆ ಮಲಗಿ ಅನ್ನ, ಆಹಾರ, ನೀರು, ಹೊದಿಕೆ ಇಲ್ಲದೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಇವರ ಬಗ್ಗೆ ಕಾಳಜಿ ತೋರದಿರುವ ರಾಜ್ಯ ಸರ್ಕಾರದ ಧೋರಣೆ ಖಂಡನೀಯ.

ಹೋರಾಟ ನಡೆಸುತ್ತಿರುವ ಪ್ರಮುಖ ಸಂಘಟನೆಗಳೊಂದಿಗೆ ಸರ್ಕಾರ ಮತುಕತೆ ನಡೆಸಿ, ಸಮಸ್ಯೆ ಇತ್ಯರ್ಥಪ ಡಿಸಬೇಕು ಎಂದು ಆಗ್ರಹಿಸಿದರು. ಗ್ರಾಮ ಪಂಚಾಯಿತಿ ನೌಕರರ ಫೆಡರೇಷನ್‌ ಮುಖಂಡ ಉಮೇಶ್‌, ಬಿಸಿಯೂಟ ಫೆಡರೇಷನ್‌ ತಾಲ್ಲೂಕು ಕಾರ್ಯದರ್ಶಿ ಇಂದುಮತಿ ಇದ್ದರು.

*
‘ಅಂಗನವಾಡಿ ಕಾರ್ಯಕರ್ತರ ಹೋರಾಟಕ್ಕೆ ಜೆಡಿಎಸ್‌, ಬಿಜೆಪಿ ಬೆಂಬಲ ನೀಡಿದ್ದರೂ ರಾಜ್ಯ ಸರ್ಕಾರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಸೋಮವಾರದವರೆಗೆ ಕಾದು ನೋಡಿ, ಚಳವಳಿಗೆ ಧುಮುಕಲಿದ್ದೇವೆ’.
-ಜಿ.ರಘು,
ಬಿಸಿಯೂಟ ಫೆಡರೇಶನ್‌ ಜಿಲ್ಲಾ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.