ADVERTISEMENT

ಗೋ ತಳಿ ರಕ್ಷಣೆಗೆ ಉದ್ಯಮಿ ನೆರವು

ಎಚ್.ಎನ್.ಸತೀಶ್ ಜೈನ್
Published 23 ಏಪ್ರಿಲ್ 2017, 9:32 IST
Last Updated 23 ಏಪ್ರಿಲ್ 2017, 9:32 IST
ಜಾನುವಾರುಗಳೊಂದಿಗೆ ಬೆಂಗಳೂರಿನ ಉದ್ಯಮಿ ಮಹೇಶ್ ಗೌಡರ್
ಜಾನುವಾರುಗಳೊಂದಿಗೆ ಬೆಂಗಳೂರಿನ ಉದ್ಯಮಿ ಮಹೇಶ್ ಗೌಡರ್   

ಚಿಕ್ಕಮಗಳೂರು: ಜಿಲ್ಲೆಯ ಅತಿದೊಡ್ಡ ಗೋ ಕೇಂದ್ರವಾದ ಮೂಡಿಗೆರೆ ತಾಲ್ಲೂಕಿನ ಹೊರನಾಡು ಸಮೀಪದ ಕ್ಯಾತನಮಕ್ಕಿಯಲ್ಲಿ ವಿಶೇಷವಾಗಿ ಮಲೆನಾಡು ಗಿಡ್ಡ ತಳಿಯ ರಕ್ಷಣೆಗೆ ಬೆಂಗಳೂರಿನ ಉದ್ಯಮಿಗಳು ಮುಂದಾಗಿದ್ದು, ಜಾನುವಾರು ರಕ್ಷಣೆಗಾಗಿ ಸುಮಾರು ₹3.5 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೆಡ್ ಅನ್ನು  ನಿರ್ಮಿಸಿದ್ದಾರೆ.

ಕೊಪ್ಪ ಹಾಗೂ ಮೂಡಿಗೆರೆ ತಾಲ್ಲೂಕಿನ ಅಂಚಿನಲ್ಲಿರುವ ಕ್ಯಾತನಮಕ್ಕಿ ಮನಮೋಹಕ ಪ್ರಾಕೃತಿಕ ತಾಣ. ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಹುಲ್ಲುಗಾವಲಿನಿಂದ ಕೂಡಿರುವ ಬೋಳು ಗುಡ್ಡಗಳು ತಮಿಳುನಾಡಿನ ಊಟಿಯನ್ನೂ ಮೀರಿಸುತ್ತದೆ. ಇಲ್ಲಿನ ಗುಡ್ಡಗಳಲ್ಲಿ ವರ್ಷಪೂರ್ತಿ ಹುಲ್ಲು ಸಿಗುವ ಕಾರಣ ನಾಡಿನ ನಾನಾ ಭಾಗಗಳಿಂದ ಮೇವಿಗಾಗಿ ಸಾವಿರಾರು ಹಸುಗಳನ್ನು, ಗಂಡು ಕರುಗಳನ್ನು ಇಲ್ಲಿಗೆ ತಂದು ಬಿಡಲಾಗುತ್ತಿದೆ. ಇಲ್ಲಿ ಯಾರ ಹಂಗೂ, ಲಂಗೂ ಲಗಾಮಿಲ್ಲದೆ  ಅವುಗಳ ಪಾಡಿಗೆ ಇಷ್ಟ ಬಂದಷ್ಟು ಹೊತ್ತು ಮೇವು ಮೇಯ್ದು ಗುಡ್ಡ ಸುತ್ತುವ ಜಾನುವಾರುಗಳನ್ನು ನೋಡುವುದೇ ಖುಷಿ. ಗುಡ್ಡದ ತಪ್ಪಲಲ್ಲಿ ಹರಿಯುವ ತೊರೆಯಲ್ಲಿ ಸಿಗುವ ನೀರು ಮರದ ನೆರಳೇ ಅವುಗಳ ಆಶ್ರಯತಾಣ. ಆದರೆ ಮಳೆಗಾಲದಲ್ಲಿ ಮಾತ್ರ ಆವುಗಳ ಸಂಕಷ್ಟ ಹೇಳ ತೀರದು.

ರಾದ ಮಳೆ, ತಣ್ಣನೆಯ ಗಾಳಿ ಬಂದಾಗ ಅವುಗಳ ಬದುಕು ನರಕವಾಗುತ್ತದೆ. ವಯಸ್ಸಾದ ಹಸುಗಳು, ಸಣ್ಣ ಕರುಗಳು ಮೇವಿಗೆ ತೆರಳಿದ ವೇಳೆ ಗಾಳಿ ಮಳೆಯಲ್ಲಿ ಗುಡ್ಡದಿಂದ ಜಾರಿ ಬಿದ್ದು ಸಾವನ್ನಪ್ಪುತ್ತಿವೆ. ಗಟ್ಟಿ ಜೀವಗಳು ಮಾತ್ರ ಬದುಕಿಗಾಗಿ ಮರ ಅಥವಾ ಬಂಡೆಗಳ ಆಶ್ರಯ ಅರೆಸಿಕೊಂಡು ಹೋಗಲು ಸರ್ಕಸ್ ಮಾಡಬೇಕಾಗಿದೆ. 6ರಿಂದ 7 ಸಾವಿರ ಎಕರೆ ವಿಸ್ತಾರ ಹೊಂದಿ ರುವ ಈ ಹುಲ್ಲುಗಾವಲಿನಲ್ಲಿ ಇರುವುದು ಕೇವಲ ಒಂದೇ ಒಂದು ಮನೆ. ಬೆಂಗಳೂರಿನ ಉದ್ಯಮಿಯೊಬ್ಬರು 10 ಎಕರೆ ಜಾಗವನ್ನು ಒಳಗೊಂಡಂತೆ ಆ ಮನೆಯನ್ನು ಕೊಂಡು ಕೊಂಡಿದ್ದು, ಅದನ್ನು ಹೋಂ ಸ್ಟೇಯಾಗಿ ಪರಿವರ್ತಿಸಿದ್ದಾರೆ. ಇವೆಲ್ಲದರ ನಡುವೆ ಕ್ಯಾತನ ಮಕ್ಕಿ ಪ್ರವಾಸಿಗರ ನೆಚ್ಚಿನ ತಾಣವಾಗಿಯೂ ಪರಿಚಿತವಾ ಗುತ್ತಿದೆ. ಹೊರನಾಡಿನ ಅನ್ನ ಪೂರ್ಣೇಶ್ವರಿಯ ದರ್ಶನಕ್ಕೆ ಬರುವ ಬಹುತೇಕ ಯಾತ್ರಿಕರು ಇಲ್ಲಿಗೆ ಭೇಟಿ ನೀಡುತ್ತಾರೆ.

ADVERTISEMENT

ಬೆಂಗಳೂರಿನಲ್ಲಿ ಉದ್ಯಮ ಹೊಂದಿರುವ ರಾಣೆಬೆನ್ನೂರು ಸಮೀಪದ ಕೆರೂರು ಮೂಲದ ಮಹೇಶ್ ಗೌಡರ್ ಅವರು ಹೊರನಾಡಿನ ಮಕ್ಕಿಮನೆ ಉದಯ್ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು. ಈ ವೇಳೆ ಹೊರನಾಡು ಸಮೀ ಪದ ಕ್ಯಾತನ ಮಕ್ಕಿಯಲ್ಲಿರುವ ಗೋವುಗಳು ಅವುಗಳು ಎದುರಿಸುತ್ತಿರುವ ಸಂಕಷ್ಟವನ್ನು ಉದಯ್‌ ಅವರು ಮಹೇಶ್‌ಗೆ ಹೇಳಿದ್ದಾರೆ. ಇದನ್ನು ಕೇಳಿ ಕ್ಯಾತನಮಕ್ಕಿಗೆ ತೆರಳಿದ ಮಹೇಶ್ ಅವುಗಳಿಗಾಗಿ ಏನನ್ನಾ ದರೂ ಮಾಡ ಬೇಕೆಂಬ ಹಂಬಲದೊಂದಿಗೆ ಬೆಂಗಳೂರಿಗೆ ತೆರಳಿ ಸ್ನೇಹಿತರೊಂದಿಗೆ ಚರ್ಚಿಸಿದರು.

ಮಹೇಶ್ ಗೌಡರ್, ಡಿ.ಎನ್.ಮಲ್ಲೇಶ್ ಅವರು ವಿನ್ಯಾಸಕಾರ ಜೆ.ಭಾಸ್ಕರನ್ ಅವ ರೊಂದಿಗೆ ಚರ್ಚಿಸಿ ಹಸುಗಳು ತಂಗಲು ಬೇಕಾಗುವ ಶೆಡ್ ನಿರ್ಮಿಸಲು ವಿನ್ಯಾಸ ಕುರಿತು ಚರ್ಚಿಸಿ ಅಂತಿಮ ರೂಪ ನೀಡಿದರು. ಅಲ್ಲಿಂದಲೇ ನಿರ್ಮಾಣಕ್ಕೆ ಬೇಕಾದ ಅಷ್ಟೂ ವಸ್ತುಗಳನ್ನು ಲಾರಿಯಲ್ಲಿ ತೆಗೆದುಕೊಂಡು ಸೀದಾ ತೆರಳಿದ್ದು ಹೊರನಾಡಿಗೆ. ಅಲ್ಲಿಂದ ಕ್ಯಾತನಮಕ್ಕಿಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದ ಕಾರಣ ಸಾಮಾನುಗಳ ಸಾಗಣೆ ಕಗ್ಗಂಟಾಯಿತು. ಆದರೂ ಧೃತಿಗೆಡದ ತಂಡ ಕಳಸದಿಂದ ಜನರೇಟರ್, ವೆಲ್ಡಿಂಗ್ ಮಷಿನ್ ಸೇರಿದಂತೆ ಎಲ್ಲವನ್ನೂ ತೆಗೆದುಕೊಂಡು ತನ್ನ ಸಂಸ್ಥೆಯ ಕೆಲವು ಸಿಬ್ಬಂದಿ ಜತೆಗೆ  ಕ್ಯಾತನಮಕ್ಕಿಗೆ ತೆರಳಿದರು. ಅಲ್ಲಿ ನಿರಂತರವಾಗಿ 20 ಗಂಟೆಗಳ ಕೆಲಸ ಮಾಡಿ ಸುಮಾರು 300 ಜಾನುವಾರುಗಳು ತಂಗಬಹು ದಾದ ಆಶ್ರಯ ತಾಣವನ್ನು ನಿರ್ಮಿಸಿ ನಿಟ್ಟುಸಿರು ಬಿಟ್ಟರು.

‘ಜಾನುವಾರುಗಳು ಮಳೆ ಗಾಳಿಯಲ್ಲಿ ಸಿಲುಕಿ ಸಾವನ್ನಪ್ಪುತ್ತಿ ರುವುದು ನೋವನ್ನುಂಟು ಮಾಡಿದ್ದು, ಜಾನುವಾರು ತಂಗುದಾಣ ನಿರ್ಮಿಸುವ ಆಸೆ ಇದೆ. ಇದಕ್ಕೆ ಪೂರಕವಾಗಿ ಮುಂದಿನ ದಿನಗಳಲ್ಲಿ ಕ್ಯಾತನ ಮಕ್ಕಿಯ ಯಾವ ಭಾಗದಲ್ಲಿ ಹಸುಗಳು ರಾತ್ರಿ ವೇಳೆ ತಂಗುತ್ತವೆ ಎಂಬುದನ್ನು ಆಧರಿಸಿ ಅಲ್ಲಿ ಹೆಚ್ಚಿನ ಕೊಟ್ಟಿಗೆಗ ಳನ್ನು ನಿರ್ಮಿಸುವ ಆಸೆ ಇದೆ’ ಎನ್ನುತ್ತಾರೆ ಮಹೇಶ್ ಗೌಡರ್‘ಈ ಪ್ರದೇಶ ಮನಮೋಹಕವಾಗಿದ್ದು, ಪ್ರವಾಸಿಗರಿಂದ ಈ ಜಾಗ ಕಲುಷಿತ ಗೊಳ್ಳು ತ್ತಿರುವುದು ವಿಷಾದನೀಯ. ಯುವಕರು ಅಲ್ಲಿಗೆ ತೆರಳುವ ವೇಳೆ ಮದ್ಯದ ಬಾಟಲಿ, ಪ್ಲಾಸ್ಟಿಕ್‌, ತಟ್ಟೆ, ಲೋಟಗಳನ್ನು ಬಳಸಿ ಅಲ್ಲೇ ಎಸೆದು ಪರಿಸರ ಹಾಳಾಗಲು ಕಾರಣವಾಗಿದೆ. ಮುಖ್ಯ ವಾಗಿ ಇದನ್ನು ತಡೆಗಟ್ಟಬೇಕು’ ಎಂಬುದು ಅವರ ಆಗ್ರಹ. ‘ಬೆಂಗಳೂರಿ ನಲ್ಲಿರುವ ನನ್ನ ಸ್ನೇಹಿತ ಪಶುವೈದ್ಯರಾಗಿದ್ದು, ತಿಂಗಳಿಗೆ ಎರಡು ಬಾರಿ ಕ್ಯಾತನಮಕ್ಕಿಗೆ ಕರೆ ತಂದು ಪಶುಗಳ ಆರೋಗ್ಯ ತಪಾಸಣೆ ಮಾಡಲು ಚಿಂತಿಸಿದ್ದೇನೆ. ಇದಕ್ಕೆ ಸ್ಥಳೀಯರು ಸೇರಿದಂತೆ ಎಲ್ಲರ ಸಹಕಾರ ಅಗತ್ಯ, ತಂಗು ದಾಣ ನಿರ್ಮಿಸುವಲ್ಲಿ ಜೆ. ಭಾಸ್ಕರನ್, ಸುರೇಶ್, ಮಾಲತೇಶ್, ರವಿ, ನವೀನ್ ಸಿಂಗ್,  ಜೀತು ಸಿಂಗ್, ರಾಜು ಹಾಗೂ ಹೊರನಾಡಿನ ಪ್ರವೀಣ್ ತಂಡ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ’ ಎಂದರು.

‘ಕೆಲವರು ಜಾನುವಾರುಗಳನ್ನು ಅಲ್ಲಿಯೇ ಕಡಿದು ಮಾಂಸ ಬೇರ್ಪಡಿಸಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ಎಎನ್‌ಎಫ್  ಸಿಬ್ಬಂದಿ ಕಳಸದ ಗಿರೀಶ್ ಹಾಗೂ ಜಯಪುರದ ರವಿ ಅವರ  ಸಲಹೆ ಮೇರೆಗೆ ಸ್ಥಳೀಯ ಜೈನ ಸಮುದಾಯದ ಯುವಕರು ಗ್ರಾಮ ಅರಣ್ಯ ಸಮಿತಿ ರಚಿಸಿ ಕ್ಯಾತನಮಕ್ಕಿಗೆ ತೆರಳುವ ರಸ್ತೆಯಲ್ಲಿ ಚೆಕ್ ಪೋಸ್ಟ್ ತೆರೆಯಲು ನಿರ್ಧರಿಸಿದ್ದಾರೆ. ಇದರಿಂದ ಈ ದಂಧೆ ತಡೆಗಟ್ಟಲು ಸಹಕಾರಿಯಾಗಲಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.