ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಶೂನ್ಯ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 9:04 IST
Last Updated 4 ಸೆಪ್ಟೆಂಬರ್ 2017, 9:04 IST

ಬಾಳೆಹೊನ್ನೂರು: ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯನ್ನು ಮುಖ್ಯ ರಸ್ತೆಯಲ್ಲಿ ಮಾತ್ರ ಕಾಣಬಹುದಾಗಿದ್ದು, ಗ್ರಾಮೀಣ ಪ್ರದೇಶಗಳು ಹಿಂದುಳಿದಿವೆ ಎಂಬ ನೋವು ಜನರಲ್ಲಿದೆ ಎಂದು ಜೆಡಿಎಸ್ ಮುಖಂಡ ಎಚ್.ಜಿ.ವೆಂಕಟೇಶ್ ತಿಳಿಸಿದರು.

ಪಟ್ಟಣದ ವಿದ್ಯಾಗಣಪತಿ ಸೇವಾಸಮಿತಿ ಆಯೋಜಿಸಿರುವ 59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಶನಿವಾರ ವಿದ್ಯಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದು, ಕೃಷಿಕರು ಬದುಕಿಗಾಗಿ ಅರಣ್ಯ, ಕಂದಾಯ ಭೂಮಿ ಸಾಗುವಳಿ ಮಾಡಿದ ಕಾರಣ ಒತ್ತುವರಿ ಸಮಸ್ಯೆ ಉದ್ಭವಿಸಿದೆ. ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ದನ್ನು ಸ್ವಾಗತಿಸುತ್ತೇವೆ.

ಆದರೆ ಬಹುತೇಕ ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಮಾಡಿದ್ದು ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಮಾಜಿ ಮುಖ್ಯಮಂತ್ರಿ ಹೇಳಿದಂತೆ ರೈತರ ಎಲ್ಲಾ ಸಾಲಗಳನ್ನೂ ಮನ್ನಾ ಮಾಡಲು ಬದ್ದರಿದ್ದೇವೆ ಎಂದರು.

ADVERTISEMENT

‘ಜೆಡಿಎಸ್ ಆಡಳಿತ ನಡೆಸಿದ ವೇಳೆ ರಾಜ್ಯದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಎಚ್‌.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಒಳ್ಳೆಯ ಅಡಳಿತ ಜನರಿಗೆ ಸಿಕ್ಕಿದ್ದು, ಅವರ ಸರ್ಕಾರ ರಾಜ್ಯಕ್ಕೆ ಅನಿವಾರ್ಯವಾಗಲಿದೆ. ತನಿಕೋಡು–ಕೆರೆಕಟ್ಟೆ ನಡುವಿನ ರಸ್ತೆ ಅಭಿವೃದ್ದಿಗೆ ರಾಷ್ಟ್ರೀಯ ಉದ್ಯಾನವನದ ನೆಪದಲ್ಲಿ ಅಧಿಕಾರಿಗಳೇ ಅಡ್ಡಗಾಲು ಹಾಕಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳಿಗೂ ಸರಿಯಾದ ಮಾಹಿತಿ ನೀಡದೆ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಮಲೆನಾಡು, ಕರಾವಳಿ ಹಾಗೂ ವಿವಿಧ ಪ್ರಧೇಶಗಳಿಂದ ಶೃಂಗೇರಿಗೆ ಬರುವ ಭಕ್ತರಿಗೆ ತೀವ್ರ ತೊಂದರೆಯಾಗಿದ್ದು, ಇದನ್ನು ಸರಿಪಡಿಸುವಂತೆ ಕೋರಿ ಮಾಜಿ ಪ್ರಧಾನಿ ದೇವೆಗೌಡ ಅವರು ಆರು ತಿಂಗಳ ಹಿಂದೆಯೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಅದಕ್ಕೆ ಅವರು ಯಾವುದೇ ಉತ್ತರ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.

‘ಜೆಡಿಎಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಡವರಿಗೆ ವ್ಯವಸ್ಥಿತವಾಗಿ ವಿವಿಧ ಯೋಜನೆಗಳ ಅಡಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ ಸಾಗುವಳಿ ಚೀಟಿ ನೀಡಲಾಗಿತ್ತು. ಆ ನಂತರ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರಗಳು ಆ ಬಗ್ಗೆ ಗಂಭೀರವಾಗಿ ಚಿಂತಿಸದ ಪರಿಣಾಮ ನಿವೇಶನ ನೀಡಿಕೆ ಕಗ್ಗಂಟಾಗಿದೆ’ ಎಂದರು.

ಲೋಕಪ್ಪಗೌಡ, ಕ್ಷೇತ್ರದ ಜೆಡಿಎಸ್‌ ಮಹಾ ಪ್ರಧಾನ ಕಾರ್ಯದರ್ಶಿ ಸುಧಾಕರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸುರೇಶ್, ಮಂಜುನಾಥ, ಶಿವಾನಂದ್, ವಿಜಯತೇಜ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶೃಂಗೇರಿಯ ರಮೇಶ್, ಹೋಬಳಿ ಅಧ್ಯಕ್ಷ ಕೆ.ಸಿ.ವೆಂಕಟೇಶ್, ಮಾಗೋಡು ಮಂಜುನಾಥ, ಸತೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.