ADVERTISEMENT

ಚುನಾವಣೆಗೆ ಅಖಾಡ ಸಜ್ಜು

ಮೂಡಿಗೆರೆಯಲ್ಲಿ 12 ಸ್ಥಾನ * 14ರಂದು ಮತ ಎಣಿಕೆ * ತರೀಕೆರೆಯಲ್ಲಿ 13 ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 10:06 IST
Last Updated 12 ಜನವರಿ 2017, 10:06 IST
ಚಿಕ್ಕಮಗಳೂರು: ಜಿಲ್ಲೆಯ 4 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಿಗೆ ಚುನಾವಣೆ ಇಂದು ನಡೆಯಲಿದ್ದು, ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.
 
ಚಿಕ್ಕಮಗಳೂರು, ಕಡೂರು, ಮೂಡಿಗೆರೆ ಹಾಗೂ ತರೀಕೆರೆ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ತಲಾ 11 ನಿರ್ದೇಶಕ ಸ್ಥಾನಗಳು ಸೇರಿದಂತೆ 44 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬುಧವಾರ ಮಧ್ಯಾಹ್ನ ವೇಳೆಗೆ ಚುನಾವಣಾ ಸಿಬ್ಬಂದಿ ಮತಪೆಟ್ಟಿಗೆ ಮತ್ತು ಮತಪತ್ರ ಹಾಗೂ ಚುನಾವಣಾ ಸಾಮಗ್ರಿಗಳೊಂದಿಗೆ ನಿಯೋಜಿತ ಸ್ಥಳಗಳಿಗೆ ಬಿಗಿಭದ್ರತೆಯಲ್ಲಿ ತೆರಳಿದರು.
 
ಚಿಕ್ಕಮಗಳೂರು ತಾಲ್ಲೂಕು ಎಪಿಎಂಸಿಯ 11 ನಿರ್ದೇಶಕ ಸ್ಥಾನಗಳಿಗೆ 28 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, 47,011 ಮತದಾರರು ಮತ ಚಲಾಯಿಸಲಿದ್ದಾರೆ. 
 
ಟಿಎಪಿಸಿಎಂಎಸ್‌ ಕ್ಷೇತ್ರಕ್ಕೆ ತಳಿಹಳ್ಳದ ಟಿ.ಇ.ಮಂಜುನಾಥ್‌ ಅವಿರೋಧ ಆಯ್ಕೆಯಾಗಿದ್ದಾರೆ. ಆಲ್ದೂರು ಕ್ಷೇತ್ರಕ್ಕೆ ಈ ಹಿಂದೆ ಆಯ್ಕೆಯಾಗಿದ್ದ ಕವೀಶ್‌ ಅವರ ಆಯ್ಕೆಯನ್ನು ಹೈಕೋರ್ಟ್‌ ಎತ್ತಿಹಿಡಿದಿದ್ದು, ಅವರು ನಿರ್ದೇಶಕರಾಗಿ ಮುಂದುವರಿಯ ಲಿದ್ದಾರೆ. ಉಳಿದಂತೆ ಜಾಗರ, ರಾಮನಹಳ್ಳಿ, ಮೂಕ್ತಿಹಳ್ಳಿ, ಅಂಬಳೆ, ಕಳಸಾಪುರ, ಬೆಳವಾಡಿ, ಲಕ್ಯ, ವಸ್ತಾರೆ, ಆವತಿ, ಖಾಂಡ್ಯ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
 
ತಾಲ್ಲೂಕು ಕಚೇರಿ ಮತಗಟ್ಟೆ ಸೇರಿದಂತೆ ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಒಟ್ಟು 91 ಮತಗಟ್ಟೆಗಳನ್ನು ತೆರೆಯಲಾಗಿದೆ. 364 ಚುನಾವಣಾ ಸಿಬ್ಬಂದಿ ಮತ್ತು 91 ಪೊಲೀಸ್‌ ಸಿಬ್ಬಂದಿಯನ್ನು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಎಪಿಎಂಸಿ ಚುನಾವಣೆಗೆ ಬಳಸಿಕೊಳ್ಳಲಾಗುತ್ತಿದೆ. ಇದೇ 14ರಂದು ತಾಲ್ಲೂಕು ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ ಎಂದು ತಾಲ್ಲೂಕು ಚುನಾವಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.
 
***
ಇಂದು ಅನ್ನದಾತನಿಂದ  ಭವಿಷ್ಯ  ನಿರ್ಧಾರ
ಮೂಡಿಗೆರೆ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 12 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಲಿದ್ದು, ತಾಲ್ಲೂಕಿನ ರೈತಾಪಿ ವರ್ಗವು ಕಣದಲ್ಲಿರುವ 32 ಅಭ್ಯರ್ಥಿ ಗಳ ಭವಿಷ್ಯ ನಿರ್ಧರಿಸಲಿದ್ದಾರೆ.
 
ಎಪಿಎಂಸಿ ಚುನಾವಣೆಯು ಪಕ್ಷ ರಹಿತವಾಗಿ ನಡೆದರೂ ಸಹ, ಎಲ್ಲಾ ಪಕ್ಷಗಳೂ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಈಗಾಗಲೇ ಸಹಕಾರ ಸಂಘದಲ್ಲಿ ಮತದಾನದ ಹಕ್ಕು ಪಡೆದಿರುವ ರೈತರ ಮನೆ ಬಾಗಿಲಿಗೆ ಸರ್ವ ಪಕ್ಷಗಳ ನಾಯಕರು ಭೇಟಿ ನೀಡಿ, ತಮ್ಮ ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.
 
ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಟ್ಟು 13 ಸ್ಥಾನಗಳಿದ್ದು, ಬಣಕಲ್‌ ಕ್ಷೇತ್ರಕ್ಕೆ ಕುಂದೂರು ವಿಜೇಂದ್ರ ಎಂಬ ವವರು ಅವಿರೋಧವಾಗಿ ಆಯ್ಕೆಯಾಗಿರು ವುದರಿಂದ, ಉಳಿದ ಹನ್ನೆರೆಡು ಕ್ಷೇತ್ರ ಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಮಾರಾಟ ಸಹಕಾರ ಕ್ಷೇತ್ರ ಹಾಗೂ ವರ್ತಕರ ಕ್ಷೇತ್ರದಿಂದ ತಲಾ ಒಬ್ಬರು ಪ್ರತಿನಿಧಿ ಆಯ್ಕೆಯಾಗಬೇಕಿದೆ.
 
ತರೀಕೆರೆ ಅಖಾಡ ಸಜ್ಜು 
ತರೀಕೆರೆ: ತಾಲ್ಲೂಕಿನ ಎಪಿಎಂಸಿಗೆ ಗುರುವಾರ ಚುನಾವಣೆಗೆ ಅಖಾಡ ರೆಡಿಯಾಗಿದ್ದು, ರಾಜಕೀಯ ಪಕ್ಷ ಗಳಿಗೆ ತಮ್ಮ ಬೆಂಬಲಿತ ಅಭ್ಯರ್ಥಿ ಗಳನ್ನು ಗೆಲ್ಲಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿ ಪರಿಣ ಮಿಸಿದ ಕಾರಣ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ. 
 
ಇಲ್ಲಿನ ಕ್ಷೇತ್ರವಾರು ಮತದಾರರ ಸಂಖ್ಯೆ  ಕಸಬಾ 4560, ಲಕ್ಕವಳ್ಳಿ 3256, ಲಿಂಗದಹಳ್ಳಿ 7143, ಹುಣಸಘಟ್ಟ 7741, ಬುಕ್ಕಾಂಬುದಿ 10,789, ಶಿವನಿ 7,827, ಗಡಿಹಳ್ಳಿ 5114 ಹಾಗೂ ಸಹಕಾರ ಕ್ಷೇತ್ರ 13 . ಎಪಿಎಂಸಿಯು ಒಟ್ಟು 13 ಕ್ಷೇತ್ರ ಗಳನ್ನು ಹೊಂದಿದ್ದು ಈಗಾಗಲೇ 5 ಕ್ಷೇತ್ರಗಳಲ್ಲಿ ಕೆ.ಎಲ್.ನಾಗರಾಜ್ (ಕರಕುಚ್ಚಿ ಕ್ಷೇತ್ರ), ಚಂದ್ರಶೇಖರ್ (ಕುಡ್ಲೂರು), ಎಂ.ಕೃಷ್ಣಮೂರ್ತಿ (ಅಜ್ಜಂಪುರ), ಟಿ.ಆರ್.ಶ್ರೀಧರ್ (ವರ್ತಕರ ಕ್ಷೇತ್ರ) ಎಸ್. ಮಂಜುಳಾ (ಬೇಲೆನಹಳ್ಳಿ ಮಹಿಳಾ ಮೀಸಲು ಕ್ಷೇತ್ರ) ಅವಿರೋಧ  ಆಯ್ಕೆಯಾ ಗಿದ್ದಾರೆ.
 
ಉಳಿದ 8ಕ್ಷೇತ್ರಗಳಿಂದ  ಶಿವನಿ (ಬಿಸಿಎಂ,ಎ) ಕ್ಷೇತ್ರದಿಂದ, ಎಸ್. ಪರಮೇಶಪ್ಪ, ಟಿ.ಎಂ. ತಿಪ್ಪೇಶಪ್ಪ, ಶಿವಮೂರ್ತಿ, ಬುಕ್ಕಾಂಬುಧಿ (ಬಿಸಿಎಂ,ಬಿ)ಕ್ಷೇತ್ರದಿಂದ, ಎಚ್.ಆರ್.ಕುಮಾರ್ ಕಣದಲ್ಲಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.