ADVERTISEMENT

ಜಮೀನಿಗೆ ಶಾಶ್ವತ ನೀರಿನ ಸೌಲಭ್ಯ ಕಲ್ಪಿಸಿ

ಸಿರಿಗೆರೆ ತರಳಬಾಳು ಮಠಾಧಿಪತಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:30 IST
Last Updated 13 ಮಾರ್ಚ್ 2017, 6:30 IST
ಚಿಕ್ಕಮಗಳೂರಿನ ವಿರಕ್ತಮಠ ಬಸವಮಂದಿರದಲ್ಲಿ ಭಾನುವಾರ ನಡೆದ ಬಸವತತ್ವ ಸಮಾವೇಶವನ್ನು  ಬಸವ ಸಮಿತಿ ರಾಜ್ಯ ಘಟಕದ ಅಧ್ಯಕ್ಷ  ಅರವಿಂದ ಜತ್ತಿ ಉದ್ಘಾಟಿಸಿದರು.
ಚಿಕ್ಕಮಗಳೂರಿನ ವಿರಕ್ತಮಠ ಬಸವಮಂದಿರದಲ್ಲಿ ಭಾನುವಾರ ನಡೆದ ಬಸವತತ್ವ ಸಮಾವೇಶವನ್ನು ಬಸವ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಅರವಿಂದ ಜತ್ತಿ ಉದ್ಘಾಟಿಸಿದರು.   

ಚಿಕ್ಕಮಗಳೂರು: ಸರ್ಕಾರಗಳು ರೈತರಿಗೆ, ಬೆಳೆ ನಷ್ಟ ಬರ ಪರಿಹಾರ  ನೀಡುವು ದಕ್ಕಿಂತ ಮೊದಲು ಕೃಷಿಕರ ಜಮೀನಿಗೆ ಶಾಶ್ವತವಾಗಿ ನೀರಿನ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು ಎಂದು ಸಿರಿಗೆರೆ ತರಳಬಾಳು ಮಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಇಲ್ಲಿನ ವಿರಕ್ತಮಠ ಬಸವಮಂದಿರ ದಲ್ಲಿ ಭಾನುವಾರ ನಡೆದ ಚಂದ್ರಶೇಖರ ಸ್ವಾಮಿ ಜಯಂತಿ, ಜಯಚಂದ್ರಶೇಖರ ಸ್ವಾಮೀಜಿಯವರ ಸ್ಮರಣೋತ್ಸವ ಹಾಗೂ ಬಸವತತ್ವ ಸಮಾವೇಶದ ಸಾನ್ನಿಧ್ಯ ವಹಿಸಿ  ಅವರು ಮಾತನಾಡಿದರು.

ಸರ್ಕಾರಗಳು ಬೆಳೆನಷ್ಟಕ್ಕೆ ನೀಡುವ ಮೂರು ಕಾಸಿನಷ್ಟು ಪರಿಹಾರ ರೈತರಿಗೆ ಯಾವುದಕ್ಕೂ ಸಾಕಾಗುವುದಿಲ್ಲ. ಅದರ ಬದಲು ಕೃಷಿಕರ ಜಮೀನಿಗೆ ನೀರಿನ ವ್ಯವಸ್ಥೆ ಕಲ್ಪಿಸಿದರೆ ಅವರಿಗೆ ಯಾವುದೇ ಪರಿಹಾರ ನೀಡಬೇಕಾದ ಸಂದರ್ಭವೇ ಒದಗುವುದಿಲ್ಲ ಎಂದ ಅವರು ಈ ಹಿನ್ನೆಲೆಯಲ್ಲಿ ವಿದ್ಯುತ್‌ ನೀಡದಿದ್ದರೂ ಚಿಂತೆಯಿಲ್ಲ. ನೀರಿನ ವ್ಯವಸ್ಥೆ ಮಾತ್ರ ಕಲ್ಪಿಸಲೇಬೇಕು. ಸರ್ಕಾರಗಳು ಎಲ್ಲಿಯವರೆಗೆ ರೈತರ ಜಮೀನಿಗೆ ಶಾಶ್ವತ ನೀರಿನ ವ್ಯವಸ್ಥೆ ಒದಗಿಸುವುದಿಲ್ಲವೋ ಅಲ್ಲಿಯವರೆಗೂ ಕೃಷಿಕರ ಬವಣೆ ತಪ್ಪುವುದಿಲ್ಲ ಎಂದರು.

ರೈತರ ಬೆಳೆ ನಷ್ಟವನ್ನು ನಿರ್ಧರಿಸಲು ವಿಮಾ ಕಂಪನಿಗಳು ಮತ್ತು ಸರ್ಕಾರಗಳು ಅನುಸರಿಸುವ ಮಾನದಂಡವನ್ನು ರೈತ ಮುಖಂಡರು ಪ್ರಬಲವಾಗಿ ವಿರೋಧಿಸ ಬೇಕು  ಬರಪೀಡಿತ ಪ್ರದೇಶಗಳನ್ನು ಗುರುತಿಸಲು ಸರ್ಕಾರಗಳು ತಾಲ್ಲೂಕಿನ ಬದಲಿಗೆ ಪಂಚಾಯಿತಿಯನ್ನು ಮಾನ ದಂಡವಾಗಿ ಇಟ್ಟುಕೊಳ್ಳಬೇಕು ಯಾವ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆ ನಷ್ಟವಾಗಿದೆಯೋ ಆ ಭಾಗಕ್ಕೆ ಪರಿಹಾರ ನೀಡಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಸವ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಸಮಾವೇಶದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ಭಕ್ತರೂ ತಮ್ಮ ಕಾಯಕವನ್ನು ಕೈಲಾಸ ಮಾಡಿಕೊಳ್ಳುವ ಸಂಕಲ್ಪವನ್ನು ಮಾಡಿದರೆ ಸಮಾವೇಶ ಸಾರ್ಥಕವಾಗುತ್ತದೆ ಎಂದರು.

ಶಾಸಕ ಕೆ.ಎಸ್.ಪುಟ್ಟಣಯ್ಯ ಮಾತನಾಡಿದರು. ತುಮಕೂರು ಜಿಲ್ಲೆ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ಮಠದ ಗುರುಬಸವ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜಿ.ಸೋಮಶೇಖರ್, ಬಸವ ತತ್ವ ಪೀಠದ ಸದಸ್ಯ ಸಿ.ಬಿ.ಮಲ್ಲೇಗೌಡ, ಕರಾವಳಿ ಅನುಭವ ಸಂಗಮದ ಜಗನ್ನಾಥ ಪನ್ನಸಾಲೆ ಬಿ.ತಿಪ್ಪೆರುದ್ರಪ್ಪ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.