ADVERTISEMENT

ತಪ್ಪಿತಸ್ಥ ಗುತ್ತಿಗೆದಾರ, ಎಂಜಿನಿಯರ್‌ ಬಂಧನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:51 IST
Last Updated 21 ಏಪ್ರಿಲ್ 2017, 6:51 IST
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ನಜೀರ್‌ ಸಾಬ್‌ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದರು.
ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ನಜೀರ್‌ ಸಾಬ್‌ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದರು.   

ಚಿಕ್ಕಮಗಳೂರು: ಜಿಲ್ಲೆಯ 4 ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಗಳನ್ನು ಅಪೂರ್ಣಗೊಳಿಸಿ ಹಣ ದುರ್ಬಳಕೆ ಮಾಡಿಕೊಂಡಿರುವ ಗುತ್ತಿಗೆ ದಾರ ಮತ್ತು ಸಂಬಂಧಿಸಿದ ಎಂಜಿನಿಯರ್‌ಗಳನ್ನು ತಕ್ಷಣ ಬಂಧಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಆದೇಶ ನೀಡಿದರು.
ಜಿಲ್ಲಾ ಪಂಚಾಯಿತಿ ನಜೀರ್‌ ಸಾಬ್‌ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿ ಅವರು ಮಾತನಾಡಿದರು.

2007–08ರಲ್ಲಿ ಆರಂಭವಾರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸದೆ ಗುತ್ತಿಗೆ ದಾರ ಹಣ ಪಡೆದಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್‌ ಸಚಿವರ ಗಮನ ಸೆಳೆದರು. ಗುತ್ತಿಗೆದಾರ ಮತ್ತು ಎಂಜಿನಿಯರ್‌ಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿರುವು ದಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಸಚಿವರ ಗಮನಕ್ಕೆ ತಂದರು.

‘ಎಫ್‌ಐಆರ್‌ ದಾಖಲಾಗಿದ್ದರೂ ಇನ್ನೂ ಏಕೆ ಅವರನ್ನು ಬಂಧಿಸಿಲ್ಲ’ ಎಂದು ಪ್ರಶ್ನಿಸಿದ ಸಚಿವರು, ತಕ್ಷಣ ಬಂಧಿಸುವಂತೆ ಎಸ್‌ಪಿ ಅಣ್ಣಾಮಲೈ ಅವರಿಗೆ ಸೂಚನೆ ನೀಡಿದರು. ತಪ್ಪಿತಸ್ಥ ಕಿರಿಯ ಎಂಜಿನಿಯರ್‌ ವೀರಪ್ಪ (ಮೂಡಿಗೆರೆ) ಅವರನ್ನು ತಕ್ಷಣ ಅಮಾನತು ಮಾಡಲು ಸಿಇಒಗೆ ಸಚಿವರು ತಾಕೀತು ಮಾಡಿದರು.

ADVERTISEMENT

ಕಡೂರು ತಾಲ್ಲೂಕಿನ ಕರಕುಚ್ಚಿ ತರೀಕೆರೆ ತಾಲ್ಲೂಕಿನ ಬೇಲೇನಹಳ್ಳಿ, ಮೂಡಿಗೆರೆ ತಾಲ್ಲೂಕಿನ ಕಳಸ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸಖರಾಯಪಟ್ಟಣದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಗುತ್ತಿಗೆದಾರ ಎಚ್‌.ಜೆ.ಪ್ರಭಾಕರ್‌ ಪೂರ್ಣಗೊಳಿಸಿಲ್ಲ. ಕೆಲವು ಕಡೆ ಕಾಮಗಾರಿ ನಡೆಸದೆ ಕೋಟ್ಯಂತರ ರೂಪಾಯಿ ಬಿಲ್‌ ಮಾಡಿಕೊಂಡಿದ್ದಾರೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಯಾವುದೇ ಕಾಮಗಾರಿ ಗುತ್ತಿಗೆ ನೀಡದಂತೆ ಶಿಫಾರಸು ಮಾಡಲಾಗಿದೆ.

ಗುತ್ತಿಗೆದಾರರಿಂದ ಯೋಜನೆಯ ಹಣ ವಸೂಲಿ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ತಪ್ಪಿತಸ್ಥ ಗುತ್ತಿಗೆದಾರ ಮತ್ತು ಮೂಡಿಗೆರೆ, ತರೀಕೆರೆ ಕಿರಿಯ ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಕಳೆದ ಮಾರ್ಚ್‌ 7ರಂದು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್‌.ರಾಗಪ್ರಿಯ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ನೀರು ಸರಬ ರಾಜು ಮಾಡಿದವರಿಗೆ ತಿಂಗಳುಗಳು ಕಳೆದರೂ ಬಿಲ್‌ ನೀಡದಿರುವ ಬಗ್ಗೆ ಶಾಸಕ ಸಿ.ಟಿ.ರವಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಬೆಳವಾಡಿ ದೂರಿದಾಗ, ಟ್ಯಾಂಕರ್‌ ನೀರು ಪೂರೈಸುವವರಿಗೆ ಪ್ರತಿ ವಾರ ಬಿಲ್‌ ಪಾವತಿಸಲು ತಹಶೀಲ್ದಾರ್‌ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವ ಹಣಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ನೀರಿನ ಬಿಲ್‌ ಪೆಂಡಿಂಗ್‌ ಇಟ್ಟಿರುವುದಕ್ಕೆ ಕಡೂರು ತಾಲ್ಲೂಕು ಪಂಚಾಯಿತಿ ಇಒ ತರಾಟೆಗೆ ತೆಗೆದು ಕೊಂಡ ಸಚಿವರು, ಬಿಲ್‌ ನೀಡದಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಿಂದ ವಿವರಣೆ ಪಡೆಯಲು ಸೂಚಿಸಿದರು.

ದೊರನಾಳು ಗ್ರಾಮ ಪಂಚಾಯಿತಿ ಯಲ್ಲಿ ಟ್ಯಾಂಕರ್ ನೀರು ಜನರಿಗೆ ಸಿಗು ತ್ತಿಲ್ಲ. ಖಾಸಗಿ ವ್ಯಕ್ತಿಗಳ ತೋಟಗಳಿಗೆ ಹೋಗುತ್ತಿದೆ ಎಂದು ತರೀಕೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ದೂರಿದಾಗ, ನೀರು ಸರಬರಾಜು ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಸು ವುದಾಗಿ ಜಿಲ್ಲಾಧಿಕಾರಿ ಜಿ.ಸತ್ಯವತಿ ತಿಳಿಸಿದರು.ಕೊಳವೆ ಬಾವಿಗಳಲ್ಲಿ 200 ಅಡಿಗಿಂತ ಕೆಳಗೆ ಅಂತರ್ಜಲ ಇದ್ದರೆ ಅಂತಹ ಬಾವಿಗಳಿಗೆ ಕೈಪಂಪ್‌ ಬದ ಲಾಗಿ, ಸಿಂಗಲ್‌ ಎಚ್‌ಪಿ ಅಥವಾ 2 ಎಚ್‌ಪಿ ಮೋಟರ್‌ ಅಳವಡಿಸಲು ಸೂಚನೆ ನೀಡಿದರು.

ಜಿಲ್ಲೆ ಕಳೆದ 4 ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗುತ್ತಿರು ವುದರಿಂದ ಈ ಹಿಂದಿನ 5 ವರ್ಷಗಳಲ್ಲಿ ಆಗಿರುವ ಸರಾಸರಿ ಮಳೆ ಪ್ರಮಾಣದ ವರದಿ ಇಟ್ಟುಕೊಂಡು, ವಿಶ್ಲೇಷಣೆ ನಡೆಸಿ, ಯೋಜನೆ ರೂಪಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಂ.ಸಿ.ಸೀತಾ ಅವರಿಗೆ ಸಚಿವರು ಸೂಚಿಸಿದರು.ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲವೆಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದಾಗ ಶಾಸಕರಾದ ಸಿ.ಟಿ.ರವಿ, ಜಿ.ಎಚ್‌.ಶ್ರೀನಿವಾಸ್‌, ರಾಜ್ಯ ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮ ಅಧ್ಯಕ್ಷ ಎ.ಎನ್‌.ಮಹೇಶ್‌ ಸೇರಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು.

‘ಗೋವುಗಳ ವಿಷಯದಲ್ಲಿ ಸುಳ್ಳು ಹೇಳಬೇಡಿ. ವಾಸ್ತವ ಸ್ಥಿತಿ ಒಪ್ಪಿಕೊಳ್ಳಿ. 20 ದಿನಗಳಿಗೆ ಸಾಕಾಗುವಷ್ಟು ಮೇವು ನೀಡಿದ್ದೀರಿ. ಗೋಶಾಲೆ ತೆರೆಯಲು ಅಸಹಾಯಕತೆ ವ್ಯಕ್ತಪಡಿಸಿದ್ದೀರಿ. ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ವಿತರಿಸದೆ ತಪ್ಪು ಮಾಹಿತಿ ನೀಡಿದರೆ ನಿಮ್ಮಂತಹ ಅಧಿಕಾರಿಗಳಿಂದ ಸರ್ಕಾರಕ್ಕೂ ಮತ್ತು ನಮಗೂ ಕೆಟ್ಟ ಹೆಸರು ಬರುತ್ತದೆ’ ಎಂದು ಶಾಸಕ ರವಿ ಹರಿಹಾಯ್ದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ತಕ್ಷಣಕ್ಕೆ ₹50 ಲಕ್ಷ ಅನುದಾನ ನೀಡುವಂತೆ ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್‌ ಬೇಡಿಕೆ ಸಲ್ಲಿಸಿ ದಾಗ, ಈಗಾಗಲೇ ಕೊಟ್ಟಿರುವ ಅನು ದಾನ ವೆಚ್ಚ ಮಾಡುವಂತೆ ಸೂಚಿಸಿದ ಸಚಿವರು, ಇನ್ನೂ ಹೆಚ್ಚುವರಿ ₹25 ಲಕ್ಷ ಅನುದಾನ ಕೊಡುವ ಭರವಸೆ ನೀಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.