ADVERTISEMENT

ದತ್ತಪೀಠ ವಿಮುಕ್ತಿ: ರಾಜ್ಯದ ಭಕ್ತರ ಆಶಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 7:30 IST
Last Updated 4 ಡಿಸೆಂಬರ್ 2017, 7:30 IST

ಶೃಂಗೇರಿ: ದೇಶದಲ್ಲಿ ಸಂಘರ್ಷಮಯ ವಾತಾವರಣ ಮುಂದುವರೆದಿದ್ದು, ಹಿಂದೂ ವಿರೋಧಿ ಧೋರಣೆಯು ವಿಜೃಂಭಿಸುತ್ತಿದೆ. ಈ ನಡುವೆಯೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಚಂದ್ರದ್ರೋಣ ಪರ್ವತದಲ್ಲಿನ ದತ್ತಪೀಠದ ವಿಮುಕ್ತಿಯ ಕಾಲವೂ ಸನ್ನಿಹಿತವಾಗುತ್ತಿದೆ ಎಂದು ಉಡುಪಿಯ ಸಂಸ್ಕಾರ ಭಾರತೀ ಸಂಚಾಲಕ ವಾಸುದೇವಭಟ್ ಅಭಿಪ್ರಾಯಪಟ್ಟರು.

ಶೃಂಗೇರಿಯಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ದತ್ತಮಾಲಾ ಅಭಿಯಾನ ಮತ್ತು ದತ್ತಜಯಂತಿ ಉತ್ಸವದ ಬಹಿರಂಗ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಹಿಂದೂಗಳು ತಮ್ಮವರಿಂದ ಮತ್ತು ಪರಕೀಯರಿಂದ ಸದಾ ಅನ್ಯಾಯವನ್ನು ಎದುರಿಸುತ್ತಾರೆ. ರಾಜ್ಯವನ್ನು ಆಳುತ್ತಿರುವ ರಾಕ್ಷಸ ಪರಂಪರೆಯಲ್ಲಿ ದೇಶಪ್ರೇಮಿ ಶಿವಾಜಿ ಅಥವಾ ಭಗತ್‌ಸಿಂಗ್ ಅಂತ ಹವರು ಹುಟ್ಟುವುದು ಅಸಾಧ್ಯ. ಬದಲಿಗೆ ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆಯನ್ನು ಪ್ರದರ್ಶಿಸುವರು ಮಾತ್ರ ಹುಟ್ಟಿ ಬರುತ್ತಿದ್ದಾರೆ. ಈ ದೇಶದ ಸಂವಿಧಾನವನ್ನು ಗೌರವಿಸದ ಮುಸಲ್ಮಾನರು ಎಂದಿಗೂ ಭಾರತೀಯರು ಆಗುವುದಿಲ್ಲ’ ಎಂದು ಟೀಕಿಸಿದರು.

ADVERTISEMENT

‘ರಾಜ್ಯದ ಕಾಂಗ್ರೆಸ್‌ ಆಡಳಿತಕ್ಕೆ ಮಂಕು ಬಡಿದಿದ್ದು, 4 ವರ್ಷಗಳಿಂದ ಹಿಂದೂ ಶ್ರದ್ಧಾಕೇಂದ್ರದ ರಕ್ಷಣೆಗಾಗಿ ಎಷ್ಟು ಕೆಲಸ ಮಾಡಿದ್ದೀರಿ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಿ. ನಮ್ಮ ಸಮಾಜದ ಆತ್ಮಾನುಭೂತಿಯನ್ನು ಕೆಣಕುವ ದುಸ್ಸಾಹಸವನ್ನು ನೀವು ತೋರಿದ್ದೇ ಆದಲ್ಲಿ ಅದರ ಕೆಟ್ಟ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಬಜರಂಗದಳದ ಮುಖಂಡ ಸಂತೋಷ್ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಆದಿಚುಂಚನಗಿರಿ ಶಾಖಾಮಠದಿಂದ ಹೊರಟ ಭವ್ಯ ಶೋಭಾಯಾತ್ರೆಗೆ ಆದಿಚುಂಚನಗಿರಿಯ ಆರ್ಚಕರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಗರಾದ್ಯಂತ ದತ್ತಾತ್ರೇಯ ಸ್ವಾಮಿಯ ರಥ ಯಾತ್ರೆ ನಡೆಯಿತು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ರಾಜಗೋಪಾಲ್, ಜಿಲ್ಲಾ ಕಾರ್ಯದರ್ಶಿ ಹರೀಶ್ ಶೆಟ್ಟಿ, ತಾಲ್ಲೂಕು ಬಜರಂಗದಳ ಸಂಚಾಲಕ ಅವಿನಾಶ್ ಕುಂಚೇಬೈಲು ಮತ್ತು ವಿಶ್ವಹಿಂದೂ ಪರಿಷತ್ ತಾಲ್ಲೂಕು ಮಹಿಳಾ ಅಧ್ಯಕ್ಷೆ ಶ್ರೀಲಕ್ಷ್ಮೀ ಉಪಸ್ಥಿತರಿದ್ದರು.

* * 

ತ್ತಪೀಠ ವಿಮುಕ್ತಿಯು ಕೇವಲ ಜಿಲ್ಲೆಯ ಜನರಿಗೆ ಸೀಮಿತವಾಗಿದ್ದಲ್ಲ. ಇದು ರಾಜ್ಯದ ಸಮಸ್ತ ದತ್ತ ಭಕ್ತರ ಆಶಯ
ವಾಸುದೇವಭಟ್
ಉಡುಪಿಯ ಸಂಸ್ಕಾರ ಭಾರತೀ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.