ADVERTISEMENT

‘ದೇಶದ ಅಭಿವೃದ್ಧಿಗೆ ಕಾಂಗ್ರೆಸ್‌ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 7:12 IST
Last Updated 28 ಡಿಸೆಂಬರ್ 2017, 7:12 IST

ಚಿಕ್ಕಮಗಳೂರು: ‘ಕಾಂಗ್ರೆಸ್‌ ಪಕ್ಷ ಸ್ಥಾಪನೆ ಯಾಗಿ ಡಿ.28ಕ್ಕೆ 133 ವರ್ಷ. ದೇಶದ ಸಮಾಜವಾದ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕೆಲಸವನ್ನು ಪಕ್ಷ ಮಾಡಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ 133ನೇ ವರ್ಷಾಚಾರಣೆ ಮುನ್ನಾ ದಿನವಾದ ಬುಧವಾರ ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಎನ್ ನಾಗರಾಜರಾವ್ ಮನೆಯಲ್ಲಿ ಕಾಂಗ್ರೆಸ್ ಧ್ವಜ ಹಾರಿಸಿ ಮಾತನಾಡಿದ ಅವರು, ‘ತ್ಯಾಗ ಬಲಿದಾನಗಳ ಮೂಲಕ ದೇಶದ ಸ್ವಾತಂತ್ರ್ಯ ಕಾಪಾಡಿಕೊಂಡು ಅಭಿವೃದ್ಧಿಗೆ ಪಕ್ಷವು ಶ್ರಮಿಸಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಪಕ್ಷವು ಗೌರವಿಸಿದೆ’ ಎಂದು ಹೇಳಿದ್ದಾರೆ.

‘ದೇಶದ ಸಂವಿಧಾನ ಬದಲಿಸಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಹಂಬತನದ ಹೇಳಿಕೆ ನೀಡಿದ್ದಾರೆ. ‘ಸರ್ವರಿಗೂ ಸಮಪಾಲು–ಸಮಬಾಳು’ ಅರ್ಥ ಮೈಗೂಡಿಸಿಕೊಂಡಿರುವ ಸಮಾಜವಾದ ಸಂವಿಧಾನ ಹೆಗ್ಗಳಿಕೆ ವಿಚಾರ, ಜಾತಿ ಮೀರಿ ವಿಶಾಲವಾಗಿ ನೋಡುವವರೇ ಜಾತ್ಯತೀತರು ಎಂಬುದು ಶಾಸಕ ಸಿ.ಟಿ.ರವಿ ಅವರಿಗೆ ತಿಳಿದಿಲ್ಲ. ಅವರಿಗೆ ದೇಶದ ಇತಿಹಾಸದ ಅರಿವು ಇಲ್ಲ’ ಎಂದು ಕುಟುಕಿದ್ದಾರೆ.

ADVERTISEMENT

ಕಾಂಗ್ರೆಸ್‌ ಮುಖಂಡರಾದ ಗಾಯತ್ರಿ ಶಾಂತೇಗೌಡ, ಕೆ.ಎಂ.ನಾಗರಾಜ್‌, ಬಿ.ಎಂ.ಸಂದೀಪ್, ಎಚ್.ಪಿ.ಮಂಜೇಗೌಡ, ಸಿಲ್ವಸ್ಟರ್ ಸಿಲು, ಕಾರ್ತಿಕ್ ಜಿ.ಚೆಟ್ಟಿಯಾರ್, ಕೆ.ವಿ.ಶಿವಕುಮಾರ್, ಪ್ರಕಾಶ್, ಯತೀರಾಜ್ ನಾಯ್ಡು, ನಿಸಾರ್ ಅಹಮದ್, ಕೆ.ಎಸ್.ಆನಂದ್, ಶ್ರೀನಿವಾಸ್, ವಕೀಲ ಶಫಿ ಅಹಮದ್ ಹಾಗೂ ಸಿಡಿಎ ಅಧ್ಯಕ್ಷ ಹನೀಫ್ ಇದ್ದರು ಎಂದು ಪಕ್ಷದ ಜಿಲ್ಲಾ ವಕ್ತಾರ ಎಂ.ಸಿ.ಶಿವಾನಂದ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಳಸಾಪುರದ ಕೆ.ಎಲ್ ನಾಗಪ್ಪಯ್ಯ ಅವರು ಕಾಂಗ್ರೆಸ್‌ ಪಕ್ಷ ಕಟ್ಟಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದರು. ಅವರ ಪುತ್ರ ವಕೀಲ ಕೆ.ಎನ್.ನಾಗರಾಜರಾವ್ ಮತ್ತು ಮೊಮ್ಮಗ ಪ್ರೀತಂ ಕೂಡಾ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಪಕ್ಷದ 133ನೇ ವರ್ಷಾಚಾರಣೆ ಮುನ್ನಾ ದಿನ ಅವರ ಮನೆಯಲ್ಲಿ ಪಕ್ಷದ ಬಾವುಟ ಹಾರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.