ADVERTISEMENT

ನಗರಸಭೆ ಆಯುಕ್ತೆ ವಿರುದ್ಧ ದೂಷಣೆ

ನಿಂದನೆ, ಅವಾಚ್ಯ ಪದ ಪ್ರಯೋಗ: ಆರೋಗ್ಯ ನಿರೀಕ್ಷಕ ಕೆ.ಎಸ್‌. ಈಶ್ವರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:39 IST
Last Updated 1 ಜೂನ್ 2018, 12:39 IST

ಚಿಕ್ಕಮಗಳೂರು: ನಗರಸಭೆ ಆಯುಕ್ತೆ ಎಂ.ವಿ.ತುಷಾರಮಣಿ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಗ್ಯ ನಿರೀಕ್ಷಕ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬುಲಾವ್‌ ಮೇರೆಗೆ ಮೇ 30ರಂದು ಸಂಜೆ 4.30ರ ಹೊತ್ತಿಗೆ ಆಯುಕ್ತರ ಕೊಠಡಿಗೆ ಹೋಗಿದ್ದೆ. ಘನ ತ್ಯಾಜ್ಯ ನಿರ್ವಹಣೆ ಸ್ಥಳ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯಲು ಮಾಹಿತಿ ಯಾಕೆ ಸಲ್ಲಿಸಿಲ್ಲ ಎಂದು ಆಯುಕ್ತೆ ತುಷಾರಮಣಿ ಕೇಳಿದರು. ವಿವರ ಸಿದ್ಧಪಡಿಸಿದ್ದೇನೆ, ಮೇ 23ರಿಂದ 29ರವರೆಗೆ ತಾವು ರಜೆ ತೆರಳಿದ್ದರಿಂದ ಸಹಿ ಪಡೆಯಲು ಸಾಧ್ಯವಾಗಿಲ್ಲ. ದೂರವಾಣಿ ಕರೆ ಮಾಡಿದರೂ ತಾವು ಸ್ವೀಕರಿಸಿಲ್ಲ ಎಂದು ಆಯಕ್ತರಿಗೆ ತಿಳಿಸಿದೆ. ಕುಪಿತರಾದ ಆಯುಕ್ತರು ನನ್ನ ಮೊಬೈಲ್‌ ಫೋನ್‌ ಕಿತ್ತು ಬಿಸಾಕಿ ಅವಾಚ್ಯ ಪದಗಳಿಂದ ದಬಾಯಿಸಿದರು’ ಎಂದು ತಿಳಿಸಿದರು.

‘ಆಯುಕ್ತರು ಮಾನಸಿಕ ಹಿಂಸೆ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಠಾಣೆಗೆ ದೂರು ನೀಡಲು ತೆರಳಿ ವಾಪಸ್‌: ತುಷಾರಮಣಿ ಅವರ ವಿರುದ್ಧ ದೂರು ನೀಡಲು ಈಶ್ವರಪ್ಪ ಮತ್ತು ಕೆಲ ನೌಕರರು ಗುರುವಾರ ಬೆಳಿಗ್ಗೆ 11 ಗಂಟೆ ಹೊತ್ತಿಗೆ ನಗರ ಪೊಲೀಸ್‌ ಠಾಣೆಗೆ ತೆರಳಿದ್ದರು. ಆಯುಕ್ತೆ ತುಷಾರಮಣಿ ಅವರು ಅಲ್ಲಿಗೆ ಹೋಗಿದ್ದರು.

ADVERTISEMENT

ಠಾಣೆಯಿಂದ ವಾಪಸ್ಸಾದ ಈಶ್ವರಪ್ಪ, ಎಇಇ ಮಂಜುನಾಥ್‌ ಇತರ ಕೆಲ ನೌಕರರು ನಗರಸಭೆ ಕಚೇರಿಯ ಗೇಟ್‌ ಮುಂದೆ ಪ್ರತಿಭಟನೆ ಕುಳಿತರು. ನಂತರ ನಗರಸಭೆ ಸದಸ್ಯರಾದ ಎಚ್‌.ಡಿ.ತಮ್ಮಯ್ಯ, ಮುತ್ತಯ್ಯ, ಶಾಮಲಾ ರಾವ್‌ ಮೊದಲಾದವರು ಪ್ರತಿಭಟನಾಕಾರರ ಸಂಧಾನ ಪ್ರಯತ್ನ ಮಾಡಿದರು. ಶಾಸಕ ಸಿ.ಟಿ.ರವಿ ಅವರು ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕರಾರರು ಪಟ್ಟು ಹಿಡಿದರು.

ಮಧ್ಯಾಹ್ನ 2 ಗಂಟೆ ಹೊತ್ತಿಗೆ ಈಶ್ವರಪ್ಪ, ಎಇಇ ಮಂಜುನಾಥ್‌ ಮೊದಲಾದವರು ಪೊಲೀಸ್‌ ಠಾಣೆಗೆ ಹೋಗುವುದಾಗಿ ಕಾರಿನಲ್ಲಿ ತೆರಳಿದರು.

ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಇದ್ದರು. ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತುಷಾರಮಣಿ ವರ್ಗಾವಣೆಗೆ ಆಗ್ರಹ

ನಗರಸಭೆ ಆಯುಕ್ತರಾದ ತುಷಾರಮಣಿ ಅವರು ನೌಕರರಿಗೆ ನಿಂದಿಸಿದ್ದು, ಅವರನ್ನು ವರ್ಗಾವಣೆ ಮಾಡಬೇಕು ಎಂದು ಕೆಲ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.

ನಗರಸಭೆ ಕಚೇರಿ ಗೇಟಿನ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದರು. ಪೌರಕಾರ್ಮಿಕರೂ ಆಗಿರುವ ದಲಿತ ಸಂಘರ್ಷ ಸಮಿತಿ ನಗರ ಸಂಚಾಲಕ ನಾಗರಾಜ್‌ ಮಾತನಾಡಿ, ‘ತುಷಾರಮಣಿ ಅವರು ನೌಕರರಿಗೆ ಏಕವಚನ ಪ್ರಯೋಗಿಸುತ್ತಾರೆ, ನಿಂದಿಸುತ್ತಾರೆ. ಹಿಂಸೆ ಕೊಡುತ್ತಾರೆ. ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

ಸುಮಾರು 150 ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಎರಡು ತಿಂಗಳಿನಿಂದ ಪಗಾರ ನೀಡಿಲ್ಲ. ಪಗಾರ ಕೇಳಿದರೆ ಸರಿಯಾಗಿ ಸ್ಪಂದಿಸಲ್ಲ ಎಂದು ಆರೋಪಿಸಿದರು.

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಮಂಜುನಾಥ್‌ ಮಾತನಾಡಿ, ‘ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಸಹೋದ್ಯೋಗಿಗಳೊಂದಿಗೆ ಯಾವ ರೀತಿ ವರ್ತಿಸಬೇಕು ಎಂಬುದು ಆಯುಕ್ತರಿಗೆ ಗೊತ್ತಿಲ್ಲ. ಕೆಟ್ಟ ಪದಗಳನ್ನು ಪ್ರಯೋಗಿಸುತ್ತಾರೆ. ತುಂಬಾ ಕಿರುಕುಳ ನೀಡಿದ್ದಾರೆ’ ಎಂದು ದೂಷಿಸಿದರು.

‘ಆಯುಕ್ತರ ನಡೆವಳಿಕೆ ಬಗ್ಗೆ ಈಗಾಗಲೇ ಮೇಲಧಿಕಾರಿಗಳು, ನಗರಸಭೆ ಸದಸ್ಯರ ಗಮನ ಸೆಳೆದಿದ್ದೇವೆ. ಆದರೆ, ಆಯುಕ್ತರು ವರ್ತನೆ ಬದಲಿಸಿಕೊಂಡಿಲ್ಲ’ ಎಂದರು.

**
ಸರಿಯಾಗಿ ಕೆಲಸ ಮಾಡದ ನೌಕರರ ವಿರುದ್ಧ ಶಿಸ್ತುಕ್ರಮಕ್ಕೆ ಮೇಲಧಿಕಾರಿಗಳಿಗೆ ಕೋರಿದ್ದೇನೆ. ಹೀಗಾಗಿ, ನಾನು ಜೋರು ಎಂದು ಕೆಲವರು ಬಿಂಬಿಸುತ್ತಿದ್ದಾರೆ
– ಎಂ.ವಿ.ತುಷಾರಮಣಿ, ಆಯುಕ್ತೆ, ನಗರಸಭೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.