ADVERTISEMENT

ನಗರಸಭೆ ಮುಖ್ಯದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮೇ 2017, 6:06 IST
Last Updated 17 ಮೇ 2017, 6:06 IST

ಚಿಕ್ಕಮಗಳೂರು: ನಗರಸಭೆಯ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಮಂಗಳವಾರ ನಗರಸಭೆ ಅಧ್ಯಕ್ಷರು, ನಗರಸಭೆ ಬಿಜೆಪಿ ಸದಸ್ಯರು, ಕರ್ನಾಟಕ ರಕ್ಷಾಣಾ ವೇದಿಕೆ(ನಮ್ಮ ಬಣ), ಕರ್ನಾ ಟಕ ಏಕತಾ ವೇದಿಕೆ ಕಾರ್ಯಕರ್ತರು ನಗರಸಭೆ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

‘ನಗರಸಭೆಯಲ್ಲಿ  250 ಹುದ್ದೆಗಳು ಖಾಲಿ ಇವೆ. ಪೌರಾಯುಕ್ತ, ಕಂದಾಯಾ ಧಿಕಾರಿ, ಕಿರಿಯ ಎಂಜಿನಿಯರ್‌ ಸೇರಿದಂತೆ ಕನಿಷ್ಠ ಐವರನ್ನು ನೇಮಕ ಮಾಡುವಂತೆ ಮನವಿ ಮಾಡಿದರೂ, ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಆರೋಪಿಸಿದರು.

ನಗರಸಭೆ ಸದಸ್ಯ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ರಾಜ್ಯ ಸರ್ಕಾರವು ನಗರಸಭೆಗೆ ಅಧಿಕಾರಿಗಳನ್ನು ನೇಮಕ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ.  ಅಧಿಕಾರಿಗಳಿಲ್ಲದೆ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗಿದೆ. ಕಂದಾಯಾಧಿಕಾರಿ ಇಲ್ಲದೇ ಬಹಳ ಸಮಸ್ಯೆಯಾಗಿದೆ. ಪೌರಾಯುಕ್ತ ಹುದ್ದೆ ಮ್ಯೂಸಿಕಲ್ ಚೇರ್ ಮಾದರಿ ಆಗಿದೆ’ ಎಂದು ಟೀಕಿಸಿದರು.

ADVERTISEMENT

‘ಕಾಂಗ್ರೆಸ್ ಮುಖಂಡರು ನಗರಸಭೆ ಯಲ್ಲಿ ಬಿಜೆಪಿ ಆಡಳಿತದ ಬಗ್ಗೆ ವಿನಾ ಕಾರಣ ಆರೋಪಿಸುತ್ತಿದ್ದಾರೆ. 5 ವರ್ಷ ಗಳ ಹಿಂದೆ ಎಂ.ಜಿ.ರಸ್ತೆ, ಬಸವನಹಳ್ಳಿ ರಸ್ತೆ, ಮಾರುಕಟ್ಟೆ ರಸ್ತೆಗಳು ಹೇಗಿದ್ದವು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಸಿಬ್ಬಂದಿ ಕೊರತೆ ಯಿಂದ ಅಭಿವೃದ್ಧಿ ಕುಂಠಿತವಾಗಿದೆ’ ಎಂದರು.

ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ದರು. ನಗರಸಭೆ ಉಪಾಧ್ಯಕ್ಷ ರವೀಂದ್ರ ಪ್ರಭು, ಬಿಜೆಪಿ ಮುಖಂಡರಾದ ವರಸಿದ್ಧಿ ವೇಣುಗೋಪಾಲ್, ರಾಜಪ್ಪ, ಪುಷ್ಪರಾಜ್,  ರಕ್ಷಣಾ ವೇದಿಕೆ(ನಮ್ಮ ಬಣ)ನೂರುಲ್ಲಾ ಖಾನ್, ಕರ್ನಾಟಕ ಏಕತಾ ವೇದಿಕೆ ಅಧ್ಯಕ್ಷ ಅಫ್ಜಲ್ ಇದ್ದರು.

**

ಪಶುವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ

ಚಿಕ್ಕಮಗಳೂರು: ವೃಂದ – ನೇಮಕಾತಿ ನಿಯಮಗಳ ಅಧಿಸೂಚನೆ ಜಾರಿಗೆ ಒತ್ತಾಯಿಸಿ ಪಶುವೈದ್ಯರು, ಪಶುವೈದ್ಯಕೀಯ ಪರೀಕ್ಷಕರು, ಇಲಾಖೆಯ ನೌಕರರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ಪಶು ಇಲಾಖೆಯ ಸಿಬ್ಬಂದಿ ನಗರದ ಐ.ಜಿ.ರಸ್ತೆಯಲ್ಲಿನ ಇಲಾಖೆಯ ಉಪನಿರ್ದೇಶಕರ ಕಚೇರಿ ಬಳಿ ಜಮಾಯಿಸಿದರು.
ಪಶುವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಎ.ಬಿ.ಪ್ರಭಾಕರ್ ಮಾತನಾಡಿ, ‘ಇಲಾಖೆ ಪುನರ್ ರಚನೆಯಾಗದಿರುವದರಿಂದ ರಾಜ್ಯದಾದ್ಯಂತ ಸುಮಾರು 15 ಸಾವಿರ ಸಿಬ್ಬಂದಿ ಹಾಗೂ ಅಧಿಕಾರಿಗಳು ಬಡ್ತಿಯಿಂದ ವಂಚಿತರಾಗಿದ್ದಾರೆ. ಕೃಷಿ,ಆಯುರ್ವೇದ ಇಲಾಖೆಗಳನ್ನು ಪುನರ್ ರಚನೆ ಮಾಡಿರುವ ಸರ್ಕಾರವು, ಪಶು ಇಲಾಖೆಗೆ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. 2012ರಲ್ಲಿಯೇ ಅಧಿಸೂಚನೆ ಹೊರಡಿಸಿದ್ದರೂ ಈವರೆಗೆ ಜಾರಿಗೊಳಿಸಿಲ್ಲ. ಇಲಾಖೆಯ ಸಿಬ್ಬಂದಿ ವೇತನ ಹೆಚ್ಚಳವಾಗಿಲ್ಲ’ ಎಂದರು.

ಪಶುಸಂಗೋಪನೆ ಸಚಿವ ಎ.ಮಂಜು ಅವರನ್ನು ಹಲವು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಪಶುವೈದ್ಯಕೀಯ ಪರೀಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಬಿ.ಪದ್ಮೇಗೌಡ, ಹಿರಿಯ ಪಶುವೈದ್ಯ ಪರೀಕ್ಷಕರಾದ ಎಂ.ಹಾಲೇಶಪ್ಪ, ಎಚ್.ದಾಕ್ಷಾಯಣಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.