ADVERTISEMENT

ನರ್ಸರಿಯಲ್ಲಿ ಚರಂಡಿ ನೀರಿನ ಮರುಬಳಕೆ

ಪಟ್ಟಣದ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 10:09 IST
Last Updated 24 ಮಾರ್ಚ್ 2018, 10:09 IST
ಕಡೂರಿನ ಸಾಮಾಜಿಕ ಅರಣ್ಯ ಇಲಾಖೆ ನರ್ಸರಿಯಲ್ಲಿ ಪಟ್ಟಣದ ತ್ಯಾಜ್ಯ ನೀರು ಶುದ್ಧೀಕರಿಸುವ ಬೆಫೆಲ್ ವಾಲ್ಸ್.
ಕಡೂರಿನ ಸಾಮಾಜಿಕ ಅರಣ್ಯ ಇಲಾಖೆ ನರ್ಸರಿಯಲ್ಲಿ ಪಟ್ಟಣದ ತ್ಯಾಜ್ಯ ನೀರು ಶುದ್ಧೀಕರಿಸುವ ಬೆಫೆಲ್ ವಾಲ್ಸ್.   

ಕಡೂರು: ಬರಗಾಲದ ಪರಿಣಾಮದಿಂದ ಕೃಷಿಗೆ ಹೊಡೆತ ಬಿದ್ದಿರುವಂತೆಯೇ ಅರಣ್ಯ ಇಲಾಖೆ ನರ್ಸರಿಯಲ್ಲಿಯೂ ನೀರಿಲ್ಲದೆ ಗಿಡಗಳನ್ನು ಬೆಳೆಸುವುದೇ ದುಸ್ತರ. ಈ ಸಮಯದಲ್ಲಿ ನರ್ಸರಿ ಗಿಡಗಳನ್ನು ಬೆಳೆಸಲು ಪಟ್ಟಣದ ತ್ಯಾಜ್ಯ ನೀರನ್ನೇ ಮರುಬಳಕೆ ಮಾಡುವಂತಹ ಯೋಜನೆಯೊಂದು ಅನುಷ್ಟಾನವೂ ಅಂತಿಮ ಹಂತದಲ್ಲಿದೆ.

ಕಡೂರಿನ ಕೆ.ಎಂ.ರಸ್ತೆಯಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆ ನರ್ಸರಿಯಲ್ಲಿ ವಾರ್ಷಿಕ 2 ಲಕ್ಷಕ್ಕೂ ಹೆಚ್ಚು ಗಿಡ ಬೆಳೆಸಲಾಗುತ್ತದೆ. ಸಮೃದ್ಧವಾಗಿ ನೀರು ನೀಡುತ್ತಿದ್ದ ಕೊಳವೆ ಬಾವಿ ಬತ್ತಿ ಹೋಗಿ ಎರಡು ವರ್ಷವಾಯಿತು. ಗಿಡಗಳು ಸೊರಗಲಾರಂಭಿಸಿದವು. ಆರಂಭದಲ್ಲಿ ಟ್ಯಾಂಕರ್ ಮೂಲಕ ನೀರು ತಂದು ಗಿಡಗಳಿಗೆ ಹಾಕಿದರೂ ಅದು ಸಾಕಾಗಲಿಲ್ಲ.ನಿರಂತರವಾಗಿ ನೀರು ಪೂರೈಸುವುದು ಕಷ್ಟವಾಯಿತು. ನರ್ಸರಿಯಲ್ಲಿಯೇ ಎರಡು ಮೂರು ಕಡೆ ಕೊರೆಸಿದ ಕೊಳವೆಬಾವಿ ವಿಫಲವಾಯಿತು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಸಾಮಾಜಿಕ ಅರಣ್ಯ ಇಲಾಖೆ ಉಪರಣ್ಯ ಸಂರಕ್ಷಣಾಧಿಕಾರಿ ಸತ್ಯನಾರಾಯಣ್ ಅವರಿಗೆ ಪಟ್ಟಣದ ತ್ಯಾಜ್ಯ ನೀರನ್ನು ಮರು ಬಳಕೆ ಮಾಡುವ ಆಲೋಚನೆ ಬಂತು. ಇದಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ಇಂಬು ನೀಡಿದರು. ಅವರೊಮ್ಮೆ ಬೆಂಗಳೂರಿಗೆ ಹೋಗಿದ್ದಾಗ ಜಿಂದಾಲ್ ಕಂಪನಿಯಲ್ಲಿ ಈ ರೀತಿ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವುದನ್ನು ನೋಡಿದ್ದರು. ಅದೇ ಪ್ರೇರಣೆಯಲ್ಲಿ ಕಡೂರಿನಲ್ಲಿಯೂ ನರ್ಸರಿಯಲ್ಲಿ ಈ ರೀತಿ ಮಾಡಲು ಯೋಜನೆ ತಯಾರಿಸಿದರು. ಶ್ರಮ ವಹಿಸಿ ಇಲಾಖೆಯ ಮೇಲಧಿಕಾರಿಗಳಿಗೆ ಈ ಯೋಜನೆ ಬಗ್ಗೆ ವಿವರಿಸಿ ಅನುಮತಿ ಪಡೆದು ಆ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸಿದರು.

ADVERTISEMENT

ಕಡೂರು ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಒಂದು ಗುಂಡಿ ನಿರ್ಮಿಸಿ ಅದರಲ್ಲಿ ಪಟ್ಟಣದ ತ್ಯಾಜ್ಯ ನೀರನ್ನು ತುಂಬ ಬಿಡಲಾಗುತ್ತದೆ. ಅಲ್ಲಿ ಮೋಟಾರ್ ಪಂಪ್ ಜೋಡಿಸಿ ಪೈಪ್ ಮೂಲಕ ಸ್ವಲ್ಪ ದೂರದಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆ ನರ್ಸರಿ ಬಳಿ ನಿರ್ಮಿಸಿರುವ ಸೆಪ್ಟಿಕ್ ಟ್ಯಾಂಕ್ ಗೆ ಬೀಳುವಂತೆ ಮಾಡಲಾಗಿದೆ. ಅಲ್ಲಿಂದ ಈ ತ್ಯಾಜ್ಯ ನೀರು ಬೆಫೆಲ್ ವಾಲ್ಸ್ ಎಂಬ 5 ಹಂತದ ಶುದ್ಧೀಕರಣ ಘಟಕದಲ್ಲಿ ಶುದ್ಧೀಕೃತಗೊಂಡು ಪೈಪ್ ಮೂಲಕ ಅದರ ಪಕ್ಕದಲ್ಲಿ ನಿರ್ಮಿತವಾದ ರೀಡ್ ಬೆಡ್ ಎಂಬ 45 ಮೀಟರ್ ಉದ್ದ 15 ಮೀಟರ್ ಅಗಲ ಹಾಗೂ 1 1/2 ಮೀಟರ್ ಆಳದ ದೊಡ್ಡ ಹೊಂಡಕ್ಕೆ ಬರುತ್ತದೆ.

ಈ ರೀಡ್ ಬೆಡ್ ವಿಶಿಷ್ಟವಾದುದು. ಈ ಹೊಂಡದಲ್ಲಿ ಮೊದಲು ದಪ್ಪನೆ ಟಾರ್ಪಾಲಿನ್ ಹಾಸನ್ನು ಹಾಸಲಾಗಿದೆ. ಅದರ ಮೇಲೆ 1 ಅಡಿ ದಪ್ಪಜಲ್ಲಿಯ ಹಾಸು, ಅದರ ಮೇಲೆ 1 ಅಡಿ ಕಾಂಪೋಸ್ಟ್ ಗೊಬ್ಬರ, ನಂತರ ಅದರ ಮೇಲೆ 1 ಅಡಿ ಗ್ರಾವೆಲ್ ಮಣ್ಣು ಹಾಕಿ ಅದರೊಳಗೆ ವಿಶೇಷವಾಗಿ ಬೇರು ಬಿಡುವಂತಹ ಗಿಡಗಳನ್ನು ಹಾಕಲಾಗುತ್ತದೆ. ಸೆಪ್ಟಿಕ್ ಟ್ಯಾಂಕ್ ನಿಂದ ಬಂದ ನೀರು ರೀಡ್ ಬೆಡ್ ಮೂಲಕ ಹೊರ ಬಂದು ಅಲ್ಲಿ ನಿರ್ಮಿಸಿರುವ 6x6x2 ಮೀಟರ್ ಆಳದ ಸ್ಟೋರೇಜ್ ಟ್ಯಾಂಕ್‌ಗೆ ತುಂಬುವಂತೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಸಂಗ್ರಹವಾದ ನೀರು ಶುದ್ಧಗೊಂಡಿರುತ್ತದೆ.ಪ್ರತಿ ದಿನ 10 ಸಾವಿರ ಲೀಟರ್ ಗಿಂತ ಹೆಚ್ಚು ನೀರು ಸಿಗುತ್ತದೆ.

ಒಟ್ಟಾರೆಯಾಗಿ ಬರಗಾಲದಲ್ಲಿ ಗಿಡಗಳಿಗೆ ನಿರಂತರವಾಗಿ ನೀರು ಸಿಗುವಂತಹ ಯೋಜನೆ ಅನುಷ್ಟಾನಗೊಳಿಸುತ್ತಿರುವ ಸಾಮಾಜಿಕ ಅರಣ್ಯ ಇಲಾಖೆ ಕ್ರಮ ಸಾರ್ವಜನಿಕರ ಗಮನ ಸೆಳೆದಿದೆ.
**
ಕಾಮಗಾರಿ ನಿರ್ಮಿತಿ ಕೇಂದ್ರಕ್ಕೆ

ಈ ನೀರಿನಲ್ಲಿ ಗಿಡಗಳಿಗೆ ಬೇಕಾದ ಪೌಷ್ಟಿಕಾಂಶಗಳು ಹೆಚ್ಚಿರುವುದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಈಗಾಗಲೇ ಅಂತಿಮ ಹಂತದಲ್ಲಿರುವ ಈ ಕಾಮಗಾರಿ ಒಂದೆರಡು ವಾರದಲ್ಲಿ ಮುಗಿಯಲಿದ್ದು, ಇಲ್ಲಿನ ಗಿಡಗಳಿಗೆ ನೀರಿನ ಕೊರತೆ ಎದುರಾಗುವುದಿಲ್ಲ. ಸಣ್ಣ ಪುಟ್ಟ ತೋಟಗಳಲ್ಲಿ ಸಹ ಕಡಿಮೆ ಖರ್ಚಿನಲ್ಲಿ ಈ ರೀತಿ ಮಾಡಬಹುದು ಎಂದು ಮಾಹಿತಿ ನೀಡುತ್ತಾರೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಫಾಲಾಕ್ಷಪ್ಪ ಈ ನಿರ್ಮಾಣದ ಮೇಲುಸ್ತುವಾರಿ ವಹಿಸಿದ್ದಾರೆ.ಸುಮಾರು ₹ 25 ರಿಂದ ₹ 30 ಲಕ್ಷವೆಚ್ಚದ ಈ ಕಾಮಗಾರಿ ನಿರ್ಮಿತಿ ಕೇಂದ್ರ ವಹಿಸಿಕೊಂಡಿದೆ.
**

ಬಾಲುಮಚ್ಚೇರಿ,ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.