ADVERTISEMENT

ಪರೀಕ್ಷಾ ಗೊಂದಲ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2017, 9:01 IST
Last Updated 2 ಸೆಪ್ಟೆಂಬರ್ 2017, 9:01 IST
ಎಂಜಿನಿಯರಿಂಗ್‌ ಕಾಲೇಜುಗಳ ಪರೀಕ್ಷಾ ಗೊಂದಲಗಳನ್ನು ಬಗೆಹರಿಸಬೇಕು ಎಂದು ಚಿಕ್ಕಮಗಳೂರಿನ ಎಐಟಿ ಬಳಿ ಶುಕ್ರವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಎಂಜಿನಿಯರಿಂಗ್‌ ಕಾಲೇಜುಗಳ ಪರೀಕ್ಷಾ ಗೊಂದಲಗಳನ್ನು ಬಗೆಹರಿಸಬೇಕು ಎಂದು ಚಿಕ್ಕಮಗಳೂರಿನ ಎಐಟಿ ಬಳಿ ಶುಕ್ರವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.   

ಚಿಕ್ಕಮಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ವ್ಯಾಪ್ತಿಯ ಎಂಜಿನಿಯರಿಂಗ್‌ ಕಾಲೇಜುಗಳ ಪರೀಕ್ಷೆ ಗೊಂದಲಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿ, ಎನ್‌ಎಸ್‌ಯುಐ ಸಂಘಟನೆ ಯವರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಆದಿಚುಂಚನಗರಿ ತಾಂತ್ರಿಕ ವಿದ್ಯಾಲಯದ (ಎಐಟಿ) ಬಳಿ ಜಮಾಯಿಸಿದ ಪ್ರತಿಭಟನಾಕಾರರು ವಿಟಿಯು ವಿರುದ್ಧ ಘೋಷಣೆ ಮೊಳಗಿಸಿದರು. ‘ಹೊಸ ಪಠ್ಯಕ್ರಮ ಮತ್ತು ಚಾಯ್ಸ್‌ ಬೇಸ್ಡ್‌ ಕ್ರೆಡಿಟ್‌ ಸಿಸ್ಟಂ (ಸಿಬಿಸಿಎಸ್‌) ಪದ್ಧತಿ ಜಾರಿಗೊಳಿಸಿರುವುದು ಗೊಂದಲಗಳನ್ನು ಸೃಷ್ಟಿಸಿದೆ. ಸಿಬಿಸಿಎಸ್‌ ಪಠ್ಯಕ್ರಮವು ಅಗಾಧವಾಗಿದ್ದು, ಸೆಮಿಸ್ಟರ್‌ನೊಳಗೆ ಪಾಠಗಳನ್ನು ಮುಗಿಸಲು ಬೋಧಕರಿಗೆ ಆಗುತ್ತಿಲ್ಲ.

ಫಲಿತಾಂಶದಲ್ಲಿ ಇಳಿಕೆಯಾಗಿದೆ. ವಿಟಿಯು ವ್ಯಾಪ್ತಿಯ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪೂರಕ (ಸಪ್ಲಿಮೆಂಟರಿ) ಪರೀಕ್ಷೆ ಇಲ್ಲದಿರುವುದು ವಿದ್ಯಾರ್ಥಿಗಳಿಗೆ ತೊಡಕಾಗಿದೆ. ಸ್ವಾಯತ್ತ ಕಾಲೇಜುಗಳು ಪೂರಕ ಪರೀಕ್ಷೆ ನಡೆಸುತ್ತಿವೆ. ಇದು ತಾರತಮ್ಯ ನೀತಿಯಾಗಿದೆ. ಈ ತಾರತಮ್ಯ ಸರಿಪಡಿಸಲು ವಿಟಿಯು ಸಹ ಪೂರಕ ಪರೀಕ್ಷೆಗಳನ್ನು ನಡೆಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ADVERTISEMENT

2010ರ ಸ್ಕೀಂ (ನಾನ್‌ ಸಿಬಿಸಿಎಸ್‌) ವಿದ್ಯಾರ್ಥಿಗಳಿಗೆ ಒಂದು ವರ್ಷದ ಮಟ್ಟಿಗೆ ‘ಈಯರ್‌ ಬ್ಯಾಕ್‌’ ಮತ್ತು ‘ಕ್ರಿಟಿಕಲ್‌ ಈಯರ್‌ ಬ್ಯಾಕ್‌’ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ಸಿಬಿಸಿಎಸ್‌ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಬೇಕು. ಸಿಬಿಸಿಎಸ್‌ ವಿದ್ಯಾರ್ಥಿಗಳು ಗಳಿಸಿರುವ ಅಂಕಗಳನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು. ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಸಿ.ಎನ್‌.ಆದಿಲ್ ಇದ್ದರು.

ಚೀನಿ ವಸ್ತು ಬಹಿಷ್ಕಾರಕ್ಕೆ ಆಗ್ರಹ
ಚಿಕ್ಕಮಗಳೂರು:  ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು, ಸ್ವದೇಶಿ ವಸ್ತುಗಳನ್ನು ಪ್ರೋತ್ಸಾಹಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹಾಗೂ ಬಜರಂಗದಳ ಸಂಘಟನೆಯವರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಚೀನಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಹನುಮಂತ್ರಪ್ಪ ವೃತ್ತ, ಎ.ಜಿ.ರಸ್ತೆ ಮೂಲಕ ಆಜಾದ್‌ ಪಾರ್ಕ್‌ ವೃತ್ತದವರೆಗೆ ಜಾಥಾ ನಡೆಸಿದರು.

‘ಚೀನಾವು ಭಾರತದ ಗಡಿ ಒತ್ತುವರಿಗೆ ಹವಣಿಸುತ್ತಿದೆ. ಡೊಕ್ಲಾಮ್‌ ಪ್ರದೇಶವನ್ನು ವಶಪಡಿಸಿಕೊಳ್ಳಲು ಸಂಚು ಮಾಡುತ್ತಿದೆ. ಗಡಿಯಲ್ಲಿ ಸೈನಿಕರ ಮೇಲೆ ನಿರಂತವಾಗಿ ಹಲ್ಲೆ ಮಾಡುತ್ತಿದೆ. ಅಗ್ಗದ ಬೆಲೆಯಲ್ಲಿ ನಕಲಿ ವಸ್ತುಗಳನ್ನು ಭಾರತದಲ್ಲಿ ಮಾರಾಟ ಮಾಡಿ ಕ್ಯೋಟ್ಯಂತರ ರೂಪಾಯಿ ಲಾಭ ಮಾಡಿಕೊಂಡಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ’ ಎಂದು ಪ್ರತಿಭನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಚೀನಾದ ವಸ್ತುಗಳನ್ನು ಬಳಸುವುದು ಬೇಡ. ದೇಶಿ ವಸ್ತುಗಳನ್ನು ಬಳಸಿ. ದೇಶದ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಿ. ಚೀನಿ ಉತ್ಪನ್ನಗಳನ್ನು ಖರೀದಿಸದಂತೆ ಜಾಗೃತಿ ಮೂಡಿಸಬೇಕು’ ಎಂದರು. ವಿಎಚ್‌ಪಿಯ ಜಿಲ್ಲಾ ಕಾರ್ಯದರ್ಶಿ ಯೋಗೇಶ್‌ರಾಜ್‌ ಅರಸ್‌, ಕಿಶೋರ್‌ ಇದ್ದರು.

ಶೃಂಗೇರಿಯಲ್ಲಿ ಬಹಿಷ್ಕಾರ
ಶೃಂಗೇರಿ: ಚೀನಾಕ್ಕೆ ಪ್ರಪಂಚದಲ್ಲಿ ಬಹುದೊಡ್ಡ ಮಾರುಕಟ್ಟೆ ಭಾರತವಾಗಿದ್ದು, ಆದರೆ ಚೀನಾ ಪಾಕಿಸ್ತಾನದ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ದೇಶದಿಂದ ಲಾಭವನ್ನು ಪಡೆದುಕೊಳ್ಳುವ ಚೀನಾ ದೇಶದವರ ಕಳಪೆ ಗುಣಮಟ್ಟದ ವಸ್ತುಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದ್ದಾರೆ.

ಸ್ವದೇಶಿ ವಸ್ತುಗಳು ಗುಣಮಟ್ಟದಿಂದ ಕೂಡಿದ್ದು ನಾವೆಲ್ಲರೂ ದೇಶದ ಒಳಿತಿಗಾಆಗಿ ದೇಶದಲ್ಲಿ ನಿರ್ಮಿತಗೊಳ್ಳುವ ವಸ್ತುವನ್ನು ಖರಿದೀಸಬೇಕು ಎಂದು ತಾಲ್ಲೂಕು ಬಜರಂಗದಳದ ಸಂಚಾಲಕ ಅವಿನಾಶ್ ಕುಂಚೇಬೈಲು ತಿಳಿಸಿದರು. ಶೃಂಗೇರಿ ಪಟ್ಟಣದ ಕಟ್ಟೇಬಾಗಿಲಿನಲ್ಲಿ ಶುಕ್ರವಾರ ಚೀನಾ ವಸ್ತುಗಳ ಬಹಿಷ್ಕಾರ ಅಂದೋಲನದಲ್ಲಿ ಅವರು ಮಾತನಾಡಿದರು.

‘ದೇಶಿ ವಸ್ತುಗಳನ್ನು ನಾವು ತೆಗೆದುಕೊಳ್ಳುವುದರಿಂದ ಅರ್ಥಿಕ ಲಾಭ ಭಾರತಕ್ಕೆ ಆಗುತ್ತದೆ. ಉದ್ಯೋಗದ ಅವಕಾಶಗಳು ಹೆಚ್ಚುತ್ತದೆ. ಚೀನಾದವರ ವ್ಯವಹಾರ ಕುಸಿದರೆ ಅದರಿಂದ ನಮಗೆ ಲಾಭ, ಹಾಗಾಗಿ ನಾವು ದೇಶದ ವಸ್ತುಗಳನ್ನು ಬಳಸಿ ದೇಶಪ್ರೇಮ ಮೆರೆಯಬೇಕು’ ಎಂದರು.

ಶೃಂಗೇರಿ ತಾಲ್ಲೂಕು ಗೋರಕ್ಷಕ ನಾಗೇಶ್ ಶೆಟ್ಟಿ, ತಾಲ್ಲೂಕು ಬಜರಂಗದಳದ ಪದಾಧಿಕಾರಿಗಳಾದ ವಿನಯ್‌ ಕಿಗ್ಗಾ, ಸಂದೀಪ್ ಮಾರನಕೂಡಿಗೆ, ಸುದೀಪ್ ಕುಂಚೇಬೈಲು, ತಾಲ್ಲೂಕು ವಿಶ್ವಹಿಂದೂ ಪರಿಷತ್ತಿನ ಪದಾಧಿಕಾರಿಗಳಾದ ರತ್ನಾಕರ್, ವಿಜೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.