ADVERTISEMENT

ಪ್ರಧಾನಿ ಕಾಳಜಿ ವಹಿಸಲಿ: ಹೆಗ್ಡೆ

ಡಾ.ಕೆ.ಕಸ್ತೂರಿರಂಗನ್ ವರದಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 6:27 IST
Last Updated 28 ಜನವರಿ 2015, 6:27 IST

ಚಿಕ್ಕಮಗಳೂರು: ರೈತರು ಮತ್ತು ಜನ ಸಾಮಾನ್ಯರ ಬದುಕಿಗೆ ಆತಂಕ ತಂದೊಡ್ಡಿರುವ ಡಾ.ಕೆ.ಕಸ್ತೂರಿ ರಂಗನ್ ವರದಿ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.

ನಗರದ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆ ಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಮಂಗಳವಾರ ವೀಕ್ಷಿಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಈ ಯೋಜನೆ ಜಾರಿಗೆ ತರುವುದು ಕೇಂದ್ರ ಸರ್ಕಾರ. ಹಾಗಾಗಿ ಇದಕ್ಕೆ ಸಂಬಂಧಿಸಿದ ಆರು ರಾಜ್ಯಗಳ ಸಂಸ ದರು ಮತ್ತು ಸಚಿವರು ಸೇರಿ ಪ್ರಧಾನ ಮಂತ್ರಿ ಮತ್ತು ಪರಿಸರ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಬೇಕು. ಈ ಯೋಜನೆ ಯನ್ನು ಜನತೆ ವಿರೋಧಿಸುತ್ತಿರು ವುದನ್ನು ಅವರಿಗೆ ಮನವರಿಕೆ ಮಾಡಿ ಕೊಡಬೇಕು. ಆಗ ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸುವುದನ್ನು ಕೈಬಿಟ್ಟರೆ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಆರು ರಾಜ್ಯಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಯೋಜನೆ ಅಗತ್ಯವಿಲ್ಲವೆಂಬ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡರೆ ಜನಾಭಿಪ್ರಾಯದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಾಸ್ತವ ಜನಾಭಿಪ್ರಾಯ ಏನಿದೆಯೋ ಅದರ ಪ್ರಕಾರ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡುತ್ತದೆ. ಜನರ ಅಭಿಪ್ರಾಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ರಾಜ್ಯದಲ್ಲಿ ಕೆಲವರು ಕೇರಳ ಮಾದರಿಯಲ್ಲಿ ಯೋಜನೆ ಜಾರಿಗೆ ತನ್ನಿ ಎಂಬ ಸಲಹೆ ನೀಡಿದ್ದಾರೆ. ಕೇರಳ ರಾಜ್ಯ ಒಪ್ಪಿದ್ದನ್ನು ನಾವು ಒಪ್ಪುವ ಅಗತ್ಯವಿಲ್ಲ, ೨೦ ಸಾವಿರ ಚದರ ಮೀಟರ್ ಕಟ್ಟಡ ಕಟ್ಟಬಾರದು, ಮರಳು ಮತ್ತು ಕಲ್ಲು ಗಣಿಗಾರಿಕೆ ಮಾಡಬಾರದೆಂಬ ಷರತ್ತುಗಳನ್ನು ಕೇರಳ ಒಪ್ಪಿದೆ. ಸಾರಾಸಗಟಾಗಿ ತೀರ್ಮಾನಗಳನ್ನು ಒಪ್ಪಬಾರದು. ಕೆಲ ಸಂದರ್ಭಗಳಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿ ಭಯದಲ್ಲಿ ಕೃಷಿಕರು ಭೂಮಿ ಇಟ್ಟುಕೊ ಳ್ಳಬೇಕೆ? ಬೇಡವೆ? ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಪ್ರಧಾನಿಯವರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ವರದಿ ಬಗ್ಗೆ ಆಕ್ಷೇಪ ಸಲ್ಲಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಎರಡು ತಿಂಗಳ ಸಮಯ ನೀಡಿದೆ. ಆದರೆ ಯಾವುದೇ ಸಮಿತಿ ಒಂದು ಯೋಜನೆ ಬಗ್ಗೆ ಸ್ಥಿತಿಗತಿ ಅರ್ಥೈಸಿಕೊಂಡು ತೀರ್ಮಾನ ಕೈಗೊಳ್ಳ ಬೇಕಾದರೆ ೨ ತಿಂಗಳ ಕಾಲಾವಕಾಶ ಸಾಕಾಗುವುದಿಲ್ಲ. ಎಲ್ಲ ಭಾಗಕ್ಕೂ ಹೋಗಿ ಮಾಹಿತಿ ಕಲೆ ಹಾಕಲು ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದರು.

ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿ ಯಲ್ಲಿ ಅಣು ಒಪ್ಪಂದಕ್ಕೆ ಮುಂದಾ ದಾಗ ಬಿಜೆಪಿ ಅದನ್ನು ವಿರೋಧಿಸಿತ್ತು. ಆದರೆ, ಇಂದು ಅಣು ಒಪ್ಪಂದವನ್ನು ಹಾಡಿಹೊಗಳುತ್ತಿದೆ. ಇದನ್ನು ಬಿಜೆಪಿ ಯವರು ‘ಕ್ಯಾಶ್‌ ಫಾರ್ ಓಟ್’ ಎಂದು ಅಪಪ್ರಚಾರ ನಡೆಸಿದ್ದರು. ಅಂದು ಮೋದಿಯವರೆ ನ್ಯೂಕ್ಲಿಯರ್ ಒಪ್ಪಂದ ದೇಶಕ್ಕೆ ಮಾರಕವೆಂದು ವಿರೋಧಿ ಸಿದ್ದರು. ಕೇಂದ್ರದ ಬಿಜೆಪಿ ಸರ್ಕಾರ ಈಗ ವಿದೇಶಿ ಹೂಡಿಕೆಗೆ ಕೆಂಪು ರತ್ನಗಂಬಳಿ ಹಾಸುತ್ತಿದೆ. ಯುಪಿಎ ಸರ್ಕಾರದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಹೊಸ ಸರ್ಕಾರ ಸಂತೋಷ ಪಡುತ್ತಿದೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಸಂದೀಪ್, ಕಾರ್ಯದರ್ಶಿ ದೋರನಾಳ್ ಪರಮೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.