ADVERTISEMENT

ಫೆ.2: ಆಲ್ದೂರಿನಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2013, 8:43 IST
Last Updated 29 ಜನವರಿ 2013, 8:43 IST

ಚಿಕ್ಕಮಗಳೂರು: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಲ್ದೂರಿನ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಫೆ.2ರಂದು ನಡೆಯಲಿದೆ. ಸಮ್ಮೇಳನಕ್ಕೆ ಪೂರ್ವ ಸಿದ್ಧತೆಗಳನ್ನು ನಡೆಸಲಾಗಿದೆ. ಸ್ವಾಗತ ಸಮಿತಿ ರಚಿಸಲಾ ಗಿದೆ. ಎಲ್ಲ ಉಪಸಮಿತಿಗಳ ಸದಸ್ಯರು ಸೇರಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಎಚ್.ಸಿ.ನಟರಾಜ್ ತಿಳಿಸಿದರು.

ಸಮ್ಮೇಳನ ದ್ವಾರಕ್ಕೆ ಬಿ.ಎಸ್.ಮೃತ್ಯುಂಜಯ, ಬಿ.ಪಿ.ಬಸಪ್ಪಶೆಟ್ಟೆ ಹೆಸರಿನಲ್ಲಿ ಮಂಟಪ, ವೇದಿಕೆಗೆ ಸಿ.ಎ.ಚಂದ್ರೇಗೌಡ ಹೆಸರು ಇಡಲಾಗಿದೆ. ಬೆಳಿಗ್ಗೆ 8ಕ್ಕೆ ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದು, ರಾಷ್ಟ್ರಧ್ವಜಾರೋಹಣವನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ,  ಪರಿಷತ್ತಿನ ಧ್ವಜವನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಎಚ್.ಸಿ. ನಟರಾಜ್ ಹಾಗೂ ನಾಡಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಎಸ್.ಶಿವಸ್ವಾಮಿ ನೆರವೇರಿಸುವರು. ಡಿ.ಆರ್.ನಾಗಪ್ಪಗೌಡ ಸಮ್ಮೇಳನಾಧ್ಯಕ್ಷತೆ ವಹಿಸುವರು ಎಂದರು.

ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ವಕೀಲ ಸಿ.ಎ.ಮುದ್ದಣ್ಣ ಉದ್ಘಾಟಿಸುವರು. ಬಾಳೆಹೊನ್ನೂರು ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೊರನಾಡು ದೇವಾಲಯದ ಜಿ.ಭೀಮೇಶ್ವರ ಜೋಷಿ ಸಮ್ಮೇಳನ ಉದ್ಘಾಟಿಸುವರು ಎಂದು ಹೇಳಿದರು. ಮಧ್ಯಾಹ್ನ 12ಕ್ಕೆ ಮೊದಲನೇ ಗೋಷ್ಠಿ ನಡೆಯಲಿದೆ. ಕಾವ್ಯಗಳ ಆಸ್ವಾದನೆ ಕುರಿತು  ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಬಿ.ತಿಪ್ಪೇರುದ್ರಪ್ಪ ಮಾತನಾಡುವ ರು. ಮಹಿಳಾ ಗೋಷ್ಠಿಯಲ್ಲಿ ಉಪನ್ಯಾಸಕಿ ಸುಲತಾ ವಿದ್ಯಾಧರ್, ಜ್ಯೋತಿ ಚೇಳ್ಯಾರ್ ಮಹಿಳಾ ಸಬಲೀಕರಣ ಕುರಿತು ಮಾತನಾಡುವರು. 

ಸಂಜೆ 3.30ಕ್ಕೆ ಬಹಿರಂಗ ಅಧಿವೇಶನ, ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 5ಕ್ಕೆ ಹಾಸ್ಯಗೋಷ್ಠಿ ಹಮ್ಮಿಕೊಳ್ಳಲಾಗಿದೆ. ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 15 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಹೇಳಿದರು. ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಎಸ್.ಶಿವಸ್ವಾಮಿ, ತಾಲ್ಲೂಕು ಕಸಾಪ ಸಂಚಾಲಕ ಎ.ಪಿ.ಮಹೇಶ್, ಪ್ರಚಾರ ಸಮಿತಿ ಅಧ್ಯಕ್ಷ ಸಿ.ಸಿ.ಈರೇಗೌಡ, ಹೋಬಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.